ಚಾಮರಾಜನಗರ: ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಆಯಾಗಳು ಹಾಗೂ ಶಾಲಾ ಮಾತೆಯರು ಕರ್ತವ್ಯ ನಿರ್ವಹಿಸುತ್ತಿದ್ದು, ನಿವೃತ್ತಿ ವಯಸ್ಸು ಮೀರಿದರೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅವರಿಗೆ ಸಂಬಳ ಕೊಡುವ ಮೂಲಕ ಸರ್ಕಾರಿ ಹಣ ಪೋಲಾಗುತ್ತಿದೆ ಎಂಬ ಗಂಭೀರ ಆರೋಪ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿಕೇಳಿ ಬಂದಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಅಶ್ವಿನಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿಈ ವಿಷಯಪ್ರಸ್ತಾಪಿಸಿದಜಿಪಂಉಪಾಧ್ಯಕ್ಷೆ ಶಶಿಕಲಾ, ಕೆಲವು ಸರ್ಕಾರಿ ಶಾಲೆಗಳಲ್ಲಿ ಡಿ ಗ್ರೂಪ್ ಶ್ರೇಣಿಯ ಆಯಾ ಹಾಗೂ ಕೆಲವು ಶಾಲೆಗಳಲ್ಲಿ ಶಾಲಾ ಮಾತೆ ಎಂಬ ಹುದ್ದೆಗಳಿವೆ. ನಿವೃತ್ತಿ ವಯಸ್ಸು ಪೂರ್ಣ ಗೊಳಿಸಿರುವ ಕೆಲ ಆಯಾಗಳು ಹಾಗೂ ಶಾಲಾ ಮಾತೆಯರು ಕರ್ತವ್ಯದಲ್ಲಿ ಮುಂದುವರಿದಿದ್ದಾರೆ ಎಂದು ದೂರಿದರು.
ತನಿಖೆಯಾಗಿಲ್ಲ: ಈ ಆಯಾಗಳು ಮೃತರಾಗಿದ್ದರೂ ಅವರ ಜಾಗದಲ್ಲಿ ಬೇರೊಬ್ಬರು ಕರ್ತವ್ಯ ನಿರ್ವಹಿಸುತ್ತಿರುವ ಕುರಿತು ದೂರುಗಳಿವೆ. ಇವರಿಗೆ ಪ್ರತಿ ತಿಂಗಳು ಸಂಬಳ ಕೊಡುತ್ತಿದ್ದು ಈ ಅಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂ. ಹಣ ಪೋಲಾಗುತ್ತಿದೆ. ಈ ಸಂಬಂಧ ಕಳೆದ 5 ವರ್ಷಗಳಿಂದಲೂ ತನಿಖೆಯಾಗಿಲ್ಲ ಎಂದರು.
ಷೋಕಾಸ್ ನೋಟಿಸ್: ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜವರೇಗೌಡ, ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 10 ಜನ ಆಯಾಗಳು ಸಮರ್ಪಕ ರೀತಿಯಲ್ಲಿ ಜನನ ಪ್ರಮಾಣ ನೀಡಿಲ್ಲ. ಇವರ ವಯಸ್ಸಿನ ಬಗ್ಗೆ ಅನುಮಾನವಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಪತ್ರ ಬರೆಯಲಾಗಿದೆ. ಅಲ್ಲದೇ ಅನುಮಾನವಿರುವ ಶಾಲೆಗಳ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮುಖ್ಯ ಶಿಕ್ಷಕರಿಗೆಕಾರಣ ಕೇಳಿ ಷೋಕಾಸ್ ನೋಟಿಸ್ ಸಹ ನೀಡಲಾಗಿದೆ. ಅಲ್ಲಿಂದ ಉತ್ತರ ಬಂದ ನಂತರ ಕ್ರಮವಹಿಸಲಾಗುವುದು ಎಂದರು.
ಸಮಗ್ರ ತನಿಖೆ ನಡೆಸಿ: ಇದಕ್ಕೆ ತೃಪ್ತರಾಗದ ಸದಸ್ಯ ಕೆ.ಎಸ್.ಮಹೇಶ್ ಮಾತನಾಡಿ, ಗ್ರಾಪಂಗಳಲ್ಲಿ ಯಾವುದೇ ಅವ್ಯವಹಾರ ನಡೆದರೂ ಕೂಡಲೇ ಸಂಬಂಧಪಟ್ಟವರನ್ನು ಸಸ್ಪೆಂಡ್ ಮಾಡಲಾಗುತ್ತಿದೆ. ಇದೇ ಮಾದರಿಯಲ್ಲಿ ಇತರೆ ಇಲಾಖೆಗಳ ಅಧಿಕಾರಿಗಳ ಮೇಲೆ ಏಕೆ ಕ್ರಮವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಕೂಡಲೇ ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಮತ್ತೂಬ್ಬ ಸದಸ್ಯ ಸದಾಶಿವಮೂರ್ತಿ ಮಾತನಾಡಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೇರೆ ವ್ಯಕ್ತಿಗಳನ್ನು ತೋರಿಸಿ ಹಣ ಡ್ರಾ ಮಾಡುತ್ತಿದ್ದಾರೆ. ಈ ಸಂಬಂಧ ಸೂಕ್ತ ತನಿಖೆಯಾಗ ಬೇಕು ಎಂದರು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ತಿಳಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಅಶ್ವಿನಿ, ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ಇತರರಿದ್ದರು.
ಜಿಲ್ಲೆಯಲ್ಲಿ ಟಾರ್ಪಲ್‌ಗಳಿಗೆ ಹೆಚ್ಚಿನ ಬೇಡಿಕೆ : ಜಿಲ್ಲೆಯಲ್ಲಿ ಟಾರ್ಪಲಿನ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅದರಂತೆ ಕಳೆದ ಸಾಲಿನಲ್ಲಿ ರಾಜ್ಯ ವಲಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿ ಒಟ್ಟು 2,812 ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 2,183 ಟಾರ್ಪಾಲಿನ್‌ಗಳಿಗೆ ಬೇಡಿಕೆ ಸಲ್ಲಿಸಿ ಸಂಬಂಧಿಸಿದ ಸಂಸ್ಥೆಯಿಂದ ಎಲ್ಲಾ ತಾಲೂಕುಗಳಿಗೆ ಈಗಾಗಲೇ ಸರಬರಾಜು ಮಾಡಿಸಲಾಗಿದೆ. ರೈತರಿಗೆ ವಿತರಿಸಲು ಕ್ರಮವಹಿಸಲಾಗಿದೆ. ಅಲ್ಲದೇ ಪ್ರಸಕ್ತ ಸಾಲಿನ ರಾಜ್ಯ ವಲಯ ಕೃಷಿ ಉತ್ಪನ್ನಗಳ ಸಂಸ್ಕರಣೆಯ ಸಾಮಾನ್ಯ ಕಾರ್ಯಕ್ರಮದಡಿ 17.09 ಲಕ್ಷ ರೂ.ಗಳಿಗೆ ವಿತರಣೆ ಮಾಡುವ ಕಾರ್ಯಕ್ರಮ ವಿರುತ್ತದೆ. ಟಾರ್ಪಾಲಿನ್ ದರಪಟ್ಟಿ ಬಂದ ನಂತರ ವಿತರಣೆಗೆ ಕ್ರಮವಹಿಸ ಲಾಗುವುದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚಂದ್ರಕಲಾ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿ ನಲ್ಲಿ 11,700 ಮೆಟ್ರಿಕ್ ಟನ್ ಹಾಗೂ ಹಿಂಗಾರು ಹಂಗಾಮಿನಲ್ಲಿ 10,808 ಮೆಟ್ರಿಕ್ ಟನ್ ಬೇಡಿಕೆ ಇದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 15,090 ಮೆಟ್ರಿಕ್ ಟನ್ ಯೂರಿಯಾ ಸರಬರಾಜಾಗಿರುತ್ತದೆ ಎಂದರು.