Advertisement

ಮೀಸಲು ಸೌಲಭ್ಯದ ಮೇಲೆ ಶೂನ್ಯ ಸವಾರಿ!

11:59 AM Oct 15, 2021 | Team Udayavani |

ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ಲಭಿಸಿರುವ 371 ಜೆ (ವಿ)ಯ ಸೌಲಭ್ಯದಡಿ ನೇಮಕಾತಿಯಲ್ಲಿ ಸಿಗಲಿರುವ ಮೀಸಲಿಗೆ ಕಣ್ಮುಚ್ಚಿದ ಶಾಲೆ-ಕಾಲೇಜುಗಳು ಗಣನೀಯ ಶಾಪವಾಗುವ ಮುನ್ಸೂಚನೆ ಲಭಿಸಿದೆ.

Advertisement

ಶೂನ್ಯ ದಾಖಲಾತಿ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಇಲ್ಲವೇ ಕಾಲೇಜು ಶೂನ್ಯ ದಾಖಲಾತಿ ಕಾರಣಕ್ಕೆ ಮುಚ್ಚುತ್ತಿದ್ದಂತೆ ಅಲ್ಲಿನ ಹುದ್ದೆಗಳು ಕೂಡ ವರ್ಗಾವಣೆ ಆಗುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ಸಂಖ್ಯೆಗಳಲ್ಲಿ ಕಡಿತ ದಾಖಲಾಗುತ್ತಿದೆ. ಇದು ಸಹಜವಾಗಿಯೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕವಾಗುವವರಿಗೆ ಸಿಗಬೇಕಾದ ಹುದ್ದೆಗಳನ್ನು ಕಿತ್ತುಕೊಳ್ಳುವ ಭಾಗವಾಗಿ ಮಾರ್ಪಟ್ಟಿದೆ.

ಏನಿದು ಸಮಸ್ಯೆ?

ರಾಜ್ಯದ ಬಹುತೇಕ ಸರ್ಕಾರಿ ಪಿಯು ಕಾಲೇಜುಗಳಲ್ಲಿ 2018-19ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಾದ ಕಾಲೇಜು ಮುಚ್ಚುವಂತೆ ಸರ್ಕಾರವೇ ಪರೋಕ್ಷವಾಗಿ ಒತ್ತಡ ಹೇರಿತ್ತು. ಅದರ ಪರಿಣಾಮ ಎಲ್ಲ ಕಡೆಯೂ ತಮಗೆ ಬೇಕಿದ್ದ ಕಡೆಗೆ ಉಪನ್ಯಾಸಕರು ಹುದ್ದೆ ಸಮೇತ ವರ್ಗಾವಣೆ ಮಾಡಿಸಿಕೊಂಡು ಪಾರಾದರು. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ ಇದೇ ಕಾರಣಕ್ಕೆ ಬರೋಬ್ಬರಿ 100 ವಿಜ್ಞಾನ ಕಾಲೇಜು ಆಯಾ ವರ್ಷದಲ್ಲಿ ಕಣ್ಮುಚ್ಚಿವೆ. ಇದರ ಫಲವಾಗಿ 300 ಹುದ್ದೆಗಳು ಕೂಡ ಕಾಣೆಯಾಗಿವೆ. ಪ್ರತಿ ಜಿಲ್ಲೆಯಲ್ಲೂ ಈ ರೀತಿ ಬೆಳವಣಿಗೆ ನಡೆದ ಹಿನ್ನೆಲೆಯಲ್ಲಿ ಹೊಸದಾಗಿ ಹುದ್ದೆ ಆಯ್ಕೆ ಮಾಡಲು ಬಯಸಿದವರಿಗೆ ಕಲ್ಯಾಣ ಕರ್ನಾಟಕದಲ್ಲಿ ವಿಜ್ಞಾನ ವಿಭಾಗದ ಹುದ್ದೆಗಳೇ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮೀಸಲು ಆಧರಿಸಿ ನೇಮಕಾತಿ ಸಂದರ್ಭದಲ್ಲಿ ಸಿಗಬೇಕಿದ್ದ 210 ಹುದ್ದೆಗಳು ಹೆಸರಿಲ್ಲದೇ ಹೋಗಿವೆ.

ಇದನ್ನೂ ಓದಿ: ನಾರಿನಾಳದಲ್ಲಿ ಚಿನ್ನದ ನಿಕ್ಷೇಪಕ್ಕೆ ಶೋಧ

Advertisement

ಮರು ಮಂಜೂರಾತಿ ಕಷ್ಟ

ಸರ್ಕಾರಿ ಪಿಯ ಕಾಲೇಜುಗಳಲ್ಲಿ ಮುಚ್ಚಿದ ವಿಜ್ಞಾನ ವಿಭಾಗ ತೆರೆಯುವುದಕ್ಕೆ ಅವಕಾಶವೇ ಇಲ್ಲದಂತಾಗಿ ಹೋಗಿದೆ. ಮರು ಮಂಜೂರಾತಿ ಇಲ್ಲವೇ ಸರ್ಕಾರದ ಅನುಮತಿ ಪಡೆದು ಆರಂಭಿಸಲು ಮತ್ತೂಮ್ಮೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕಾಗುತ್ತದೆ. ಅಂತಹ ರೀತಿಯಲ್ಲಿ ಹೋರಾಟ ನಡೆಸುವುದಕ್ಕೆ ಕೆಲವು ಕಡೆ ಸೌಲಭ್ಯ ಕೊರತೆ, ಮತ್ತೆ ಕೆಲವೆಡೆ ಇಚ್ಛಾಶಕ್ತಿ ಅಭಾವ ಸಮಸ್ಯೆಯಾಗಿದೆ. ಶೂನ್ಯ ದಾಖಲಾತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಿದಾಗಲೂ ತೊಂದರೆ ಉಂಟಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸದ್ದಿಲ್ಲದೇ ಶಾಲೆ-ಕಾಲೇಜು ಮುಚ್ಚಿದ ಬೆಳವಣಿಗೆ ಭವಿಷ್ಯದಲ್ಲಿ ಉದ್ಯೋಗ ಅರಸುವ ಪ್ರತಿಭಾನ್ವಿತರಿಗೆ ಸವಾಲು ಒಡ್ಡಿದೆ. ಕಲ್ಯಾಣ ಕರ್ನಾಟಕಕ್ಕೆ ಉದ್ಯೋಗ, ನೇಮಕಾತಿಯಲ್ಲಿ ಮೀಸಲು ನೀಡಿದ ಬಳಿಕ ಇರುವ ಹುದ್ದೆ ಉಳಿಸಿಕೊಂಡು ಆ ಸ್ಥಾನಗಳಿಗೆ ಮತ್ತೂಬ್ಬರನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುವಂತಾಗಲು ಶ್ರಮಿಸಬೇಕಿದೆ. ಇಂತಹ ಸವಾಲಿಗೆ ಎದೆಯೊಡ್ಡಿ ರಾಯಚೂರು ಜಿಲ್ಲೆಯ ಪೈಕಿ ಸಿಂಧನೂರಿನಲ್ಲಿ ಒಂದೇ ಒಂದು ವಿಜ್ಞಾನ ವಿಭಾಗ ಉಳಿಸಿಕೊಳ್ಳಲಾಗಿದ್ದು, ಉಳಿದ ಕಡೆಯೂ ಇಂತಹ ಪ್ರಯತ್ನಗಳು ನಡೆಯಬೇಕಿದೆ.

ಓದುವ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಭವಿಷ್ಯದಲ್ಲಿ ನೇಮಕಾತಿ ಹೊಂದುವ ಅಭ್ಯರ್ಥಿಗಳಿಗೂ ಅನುಕೂಲವಾಗಲು ಇರುವ ಹುದ್ದೆಗಳು ರದ್ದಾಗುವುದನ್ನು ತಪ್ಪಿಸಬೇಕಿದೆ. ಈಗಾಗಲೇ ಹಲವು ಹುದ್ದೆಗಳನ್ನು ಕಳೆದುಕೊಂಡ ಕಲ್ಯಾಣ ಕರ್ನಾಟಕ ಎಚ್ಚೆತ್ತುಕೊಳ್ಳಬೇಕಿದೆ. -ಹೆಸರು ಹೇಳಲಿಚ್ಛಿಸದ ಸರ್ಕಾರಿ ಕಾಲೇಜಿನ ಉಪನ್ಯಾಸಕ

-ಸಿಂಧನೂರು ­ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next