Advertisement

Congress ಸರಕಾರದಿಂದ ಅಭಿವೃದಿ ಶೂನ್ಯ : ಗಾಯತ್ರಿ ಸಿದ್ದೇಶ್ವರ್‌

09:29 AM Apr 03, 2024 | Team Udayavani |

ದಾವಣಗೆರೆ: ಗ್ಯಾರಂಟಿ, ಪುಕ್ಕಟೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಎಂಬುದನ್ನೇ ಮರೆತಿದೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ದೂರಿದರು.

Advertisement

ಮಂಗಳವಾರ ದಾವಣಗೆರೆ ವಿವಿಧ ಭಾಗದಲ್ಲಿ ಪ್ರಚಾರ ನಡೆಸಿದ ಅವರು, ಐದು ಗ್ಯಾರಂಟಿ ಕೊಡುತ್ತೇವೆ ಎಂಬ ನೆಪದಲ್ಲಿ 10 ತಿಂಗಳಿನಿಂದ ದಾವಣಗೆರೆ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲೇ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಅನ್‌ ಗ್ಯಾರಂಟಿ ಸರ್ಕಾರ ನಡೆಸುತ್ತಿದ್ದಾರೆ. ಸ್ವಪಕ್ಷೀಯ ಶಾಸಕರೇ ಅಭಿವೃದ್ಧಿಗೆ ಹಣ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಮಾತಿನಂತೆ ನಡೆದುಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದು ತಿಳಿಸಿದರು.

ಸಮಗ್ರ ಅಭಿವೃದ್ಧಿ, ಸುರಕ್ಷತೆ, ಸಾಕ್ಷರತೆ, ಹೆಣ್ಣು ಮಕ್ಕಳ ರಕ್ಷಣೆಗಾಗಿ ಕೇಂದ್ರದಲ್ಲಿ ಮತ್ತೂಮ್ಮೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರಬೇಕು ಅಂದರೆ ದಾವಣಗೆರೆಯಿಂದ ಮತದಾರರು ನನ್ನನ್ನು ಆಯ್ಕೆ ಮಾಡಿ ದೆಹಲಿಗೆ ಕಳುಹಿಸಬೇಕು ಎಂದುಮನವಿ ಮಾಡಿದರು.

ನಗರ ದೇವತೆ ದುರ್ಗಾಂಬಿಕಾ ದೇವಿ ಹಾಗೂ ವೀರಭದ್ರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಹಳೆಪೇಟೆ ಮತ್ತು ಜಾಲಿನಗರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿ, ಕೀ ವೋಟರ್ಸ್‌ ಮನೆಗಳಿಗೆ ತೆರಳಿ ತಮಗೆ ಮತ ಹಾಕುವಂತೆ ಕೇಳಿದರು. ಅಕ್ಕಿ ಗಿರಣಿ ಮಾಲಿಕರಾದ ಲೋಹಿತ್‌, ಪ್ರಿಯದರ್ಶಿ, ಮುಖಂಡರಾದ ಅಡವೆಪ್ಪ, ಮಾಗಿ ಜಯಪ್ರಕಾಶ್‌, ಪ್ರವೀಣ್‌, ಜಿ.ಕೃಷ್ಣೋಜಿ ರಾವ್‌, ಜವಳಿ ಜಯಪ್ರಕಾಶ್‌ ನಿವಾಸಕ್ಕೆ ಭೇಟಿ ನೀಡಿ ಮತ ಯಾಚಿಸಿದರು.

Advertisement

ಸವಿತಾ ಸಮಾಜದ ಸಭಾ ಭವನದಲ್ಲಿ ಮುಖಂಡರ ಸಭೆ ನಡೆಸಿ, ಬಿಜೆಪಿ ಯಾವಾಗಲೂ ತಮ್ಮ ಜೊತೆ ನಿಲ್ಲುತ್ತದೆ ಎಂಬ ಅಭಯ ನೀಡಿದರು. ನಿಮಿಷಾಂಬ ಸಮಾಜದ ಬಂಧುಗಳ ಜೊತೆ ಮಾತು ಕತೆ ನಡೆಸಿದರು.

ಯರಗುಂಟೆ, ಕರೂರು, ಎಸ್‌.ಜೆ.ಎಂ ನಗರದಲ್ಲಿ ಪ್ರಚಾರ ನಡೆಸಿದರು. ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಮಾಜಿ ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌, ಜಿ.ಎಸ್‌. ಅಶ್ವಿ‌ನಿ, ಭಾಗ್ಯ ಪಿಸಾಳೆ, ಬಿ.ಎಂ.ಸತೀಶ್‌, ಸೋಗಿ ಶಾಂತಕುಮಾರ್‌, ಜಯಮ್ಮ, ಪ್ರೇಮಮ್ಮ ಇತರರು ಇದ್ದರು.

ಜೆಡಿಎಸ್‌-ಬಿಜೆಪಿ ಮುಖಂಡರ ಒಗ್ಗಟ್ಟು ಪ್ರದರ್ಶನ
ಹರಿಹರ: ರಾಜ್ಯದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲೂ ಈ ಎರಡೂ ಪಕ್ಷಗಳ ಮುಖಂಡರು ಸೋಮವಾರ ಒಂದೆ ವೇದಿಕೆಯಲ್ಲಿ ಪರಸ್ಪರ ಸಿಹಿ ತಿನ್ನಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಮಾಜಿ ಸಚಿವ ದಿ| ಎಚ್‌. ಶಿವಪ್ಪನವರ ಜನ್ಮದಿನದ ಅಂಗವಾಗಿ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಶಾಸಕ, ಜೆಡಿಎಸ್‌ನ ಎಚ್‌.ಎಸ್‌. ಶಿವಶಂಕರ್‌ ಮತ್ತು ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್‌ ಕೇಕ್‌ ಕತ್ತರಿಸಿ, ಪರಸ್ಪರ ವಿನಿಮಯ ಮಾಡಿಕೊಂಡರು. ನಂತರ ಶಿವಪ್ಪನವರ ಆಡಳಿತ ಮತ್ತು ಹೋರಾಟದ ಬದುಕಿನ ಬಗ್ಗೆ ಸಭೆಯಲ್ಲಿ ಮಾತನಾಡಿದರು.

ಇದಕ್ಕೂ ಮುನ್ನ ಮಾಜಿ ಶಾಸಕ ಎಚ್‌.ಎಸ್‌ ಶಿವಶಂಕರ್‌ ಕುಟುಂಬಸ್ಥರು ಮತ್ತು ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ ಸೇರಿದಂತೆ ಪಕ್ಷದ ಮುಖಂಡರು ಗ್ರಾಮದಲ್ಲಿರುವ ದಿ| ಶಿವಪ್ಪನವರ ಸಮಾಧಿಗೆ ಪೂಜೆ ಸಲ್ಲಿಸಿದರು.

ದೇಶದ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ
ದೇಶದ ಹಿತದೃಷ್ಟಿಯಿಂದ ಜೆಡಿಎಸ್‌, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹರಿಹರ ಕ್ಷೇತ್ರದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ತಿಳಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌರ ಸಲಹೆ, ಸೂಚನೆಯಂತೆ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ಪರವಾಗಿ ಕೆಲಸ ಮಾಡಿ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕು. ಅವರನ್ನು ಗೆಲ್ಲಿಸುವವರೆಗೂ ನಾನು ವಿರಮಿಸುವುದಿಲ್ಲ, ನೀವು ವಿರಮಿಸಬೇಡಿ ಎಂದು ಕರೆ ನೀಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಬಂಧು-ಬಳಗ, ಕಾರ್ಯಕರ್ತರು ಎಲ್ಲರೂ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ಅವರಿಗೆ ಮತ ಚಲಾಯಿಸಬೇಕು. ಅಧಿಕಾರ ಶಾಶ್ವತ ಅಲ್ಲ, ವಿಶ್ವಾಸ ಶಾಶ್ವತ. ನಮ್ಮ ಮೇಲೆ ವಿಶ್ವಾಸವಿಟ್ಟು ಹೊಂದಾಣಿಗೆ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಹರಿಹರ ತಾಲೂಕಿನಲ್ಲಿ ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಸಮ್ಮಿಲನ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

ಹರಿಹರ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ನಾನು ಸೋತಿದ್ದರೂ ಎಂದೂ ಸುಮ್ಮನೆ ಕುಳಿತಿಲ್ಲ. ಜನರ ನಡುವೆ, ಜನರಿಗೆ ಸ್ಪಂದಿಸಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರು ನಾವೆಲ್ಲ ಒಂದೇ ಎಂದುಕೊಂಡು ಗಾಯಿತ್ರಿ ಸಿದ್ದೇಶ್ವರ್‌ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು. ಹರಿಹರ ತಾಲೂಕಿನಲ್ಲಿ ಹೆಚ್ಚಿನ ಲೀಡ್‌ ಕೊಡುವ ಮೂಲಕ ದಿವಂಗತ ಎಚ್‌.ಶಿವಪ್ಪ ಅವರ ಶಕ್ತಿ ತೋರಿಸಬೇಕು ಎಂದರು.

ಸಂಸದ ಡಾ| ಜಿ.ಎಂ.ಸಿದ್ದೇಶ್ವರ್‌ ಮಾತನಾಡಿ, 10 ವರ್ಷಗಳಿಂದ ದೇಶದ ಆಡಳಿತ ನೋಡಿರುವ ಎಚ್‌.ಡಿ. ದೇವೇಗೌಡರು ಮತ್ತೆ ಕೇಂದ್ರದಲ್ಲಿ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರ ಬರಬೇಕು ಎಂದು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಎಲ್ಲೆಡೆಯೂ ಹೃದಯಪೂರ್ವ ಸ್ಪಂದನೆ ನೀಡುತ್ತಿದ್ದು, ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಹರಿಹರ ಶಾಸಕ ಬಿ.ಪಿ.ಹರೀಶ್‌ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಬಿಜೆಪಿ, ಜೆಡಿಎಸ್‌ ಅನ್ನು ಮುಗಿಸುತ್ತೇವೆ ಎಂದು ಹೇಳುತ್ತಾರೆ. ನಾವಿಬ್ಬರು ಸೇರಿ ಕಾಂಗ್ರೆಸ್‌ ಅನ್ನು ರಾಜಕೀಯವಾಗಿ ಮುಗಿಸಬೇಕು. ಜೆಡಿಎಸ್‌ ಕಾರ್ಯಕರ್ತರು ಗಾಯಿತ್ರಿ ಸಿದ್ದೇಶ್ವರ್‌ ಅವರಿಗೆ ಬೆಂಬಲ ನೀಡಿ, ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್‌, ಕೆ.ಬಿ.ಕೊಟ್ರೇಶ್‌, ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್‌ ದಾಸಕರಿಯಪ್ಪ ,ಜೆಡಿಎಸ್‌ ಕಾರ್ಯಕರ್ತರು, ಎಚ್‌.ಶಿವಪ್ಪ ಅವರ ಅಭಿಮಾನಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next