Advertisement

ಜರ್ನಿಯಲಿ ಸಿಕ್ಕ ಜರವಾ: ಅಂಡಮಾನಿನ ಅದ್ಭುತ “ಬಾರಾಟಾಂಗ್‌’

09:28 AM Aug 22, 2017 | |

ಭಾರತದಲ್ಲಿ ಕೇವಲ ಪ್ರಾಣಿ ಪಕ್ಷಿಗಳಿಗಳಲ್ಲದೆ, ಮನುಷ್ಯರಿಗೂ ಒಂದು ಮೀಸಲು ಸಂರಕ್ಷಿತ ಅರಣ್ಯವಿದೆಯೆಂದರೆ, ಅದೇ ಜರವಾ ರಿಸರ್ವ್‌! ಈ ಜರವಾ ಬುಡಕಟ್ಟು ಮಂದಿ ಈಗ ಕಾಣಸಿಗುವುದು ಅತಿ ವಿರಳ…

Advertisement

ಅಂಡಮಾನ್‌ ದ್ವೀಪಕ್ಕೆ ಪ್ರವಾಸ ಹೋಗುತ್ತಿದ್ದೇವೆ ಎಂದರೆ ಹೆಚ್ಚುಕಡಿಮೆ, “ಕಗ್ಗತ್ತಲೆಯ ಖಂಡ’ ಆಫ್ರಿಕಕ್ಕೆ ಭೇಟಿ ನೀಡುತ್ತಿದ್ದೇವೆ ಎಂಬಂತೆ ಭಾಸವಾಗುತ್ತದೆ. ಕಾರಣವಿಷ್ಟೇ, ಅಂಡಮಾನ್‌ನಲ್ಲಿ ಮಾನವ ಜನಾಂಗಕ್ಕೆ ಸವಾಲೊಡ್ಡಬಲ್ಲ, ಜನವಸತಿಯಿಲ್ಲದ, ಕೌತುಕಮಯವಾದ ದ್ವೀಪಗಳು ಬಹಳಷ್ಟು ಇವೆ. ಇಂದಿಗೂ ಅಂಡಮಾನಿನ ಒಂದೊಂದು ದ್ವೀಪವು ಭಿನ್ನ ರೀತಿಯಲ್ಲಿ ತನ್ನ ಸ್ವಂತಿಕೆಯನ್ನು ಹಾಗು ಗೌಪ್ಯತೆಯನ್ನು ಉಳಿಸಿಕೊಂಡಿವೆ. ಇಂದು ನಾವು ಹೊರಟಿದ್ದು ಪೋರ್ಟ್‌ಬ್ಲೇರ್‌ನಿಂದ 100 ಕಿ.ಮೀ. ದೂರದಲ್ಲಿರುವ “ಬಾರಾಟಾಂಗ್‌’ ಎಂಬ ಪ್ರಕೃತಿಯ ಮಡಿಲಿಗೆ.


ಮನುಷ್ಯರಿಗಾಗಿ ಮೀಸಲು ಅರಣ್ಯ!
ಬಾರಾಟಾಂಗ್‌ ಹೆಸರೇ ಸಾಕು, ಪರಿಸರ ಪ್ರೇಮಿಯನ್ನು ತನ್ನೆಡೆ ಬರಸೆಳೆಯಲು! ಬಾರಾಟಾಂಗ್‌ ತಲುಪಬೇಕೆಂದರೆ, ಪೋರ್ಟ್‌ಬ್ಲೇರ್‌ನಿಂದ “ಅಂಡಮಾನ್‌ ಟ್ರಂಕ್‌ ರೋಡ್‌’ ಮೂಲಕ ಹಲವು ಚೆಕ್‌ಪೋಸ್ಟ್‌ಗಳನ್ನು ದಾಟಿ, ಅನುಮತಿ ಪತ್ರದೊಂದಿಗೆ “ಜರವಾ ರಿಸರ್ವ್‌’ ಮೂಲಕ ಹಾದು ಹೋಗಬೇಕು. ಭಾರತದಲ್ಲಿ ಕೇವಲ ಪ್ರಾಣಿ ಪಕ್ಷಿಗಳಿಗಳಲ್ಲದೆ, ಮನುಷ್ಯರಿಗೂ ಒಂದು ಮೀಸಲು ಸಂರಕ್ಷಿತ ಅರಣ್ಯವಿದೆಯೆಂದರೆ, ಅದೇ ಜರವಾ ರಿಸರ್ವ್‌! ಇಲ್ಲಿ ಕಾಣಸಿಗುವುದು ಕೇವಲ ಬುಡಕಟ್ಟು ಮುಖಗಳೇ.

ಗುಂಡೇಟು ತಿಂದ ಜರವಾ!
ಈ ಜರವಾ ಬುಡಕಟ್ಟು ಮಂದಿ ಈಗ ಕಾಣಸಿಗುವುದು ಅತಿ ವಿರಳ. ಪೋರ್ಟ್‌ಬ್ಲೇರ್‌ನಿಂದ ದಿಗ್ಲಿಪುರವರೆಗೆ ಗ್ರೇಟ್‌ ಅಂಡಮಾನ್‌ ಟ್ರಂಕ್‌ ರೋಡ್‌ ನಿರ್ಮಿಸುವಾಗ, ರಸ್ತೆ ನಿರ್ಮಾಣವನ್ನು ವಿರೋಧಿಸಿ, ಜರವಾಗಳು ಪ್ರತಿರೋಧವೊಡ್ಡಿದರು. ರಸ್ತೆ ನಿರ್ಮಾಣದಲ್ಲಿ ನಿರತರಾಗಿದ್ದ ಹಲವು ಕಾರ್ಮಿಕರು, ಜರವಾಗಳ ಬಾಣಕ್ಕೆ ಬಲಿಯಾಗಿದ್ದರು. ಅಲ್ಲದೇ, ಪೊಲೀಸರ ಗುಂಡಿಗೆ ಹಲವು ಜರವಾಗಳು ಪ್ರಾಣ ಬಿಟ್ಟರು!

ಮ್ಯಾಂಗ್ರೋವ್‌ ಸಸ್ಯಕಾಶಿಯ ಮೋಡಿ
ಜರವಾ ರಿಸರ್ವ್‌ನಲ್ಲಿ ಪೊಲೀಸ್‌ ಬೆಂಗಾವಲಿನೊಂದಿಗೆ ಎಲ್ಲ ವಾಹನಗಳು ಇರುವೆ ಸಾಲಿನಂತೆ ಸಾಗುತ್ತವೆ. ಪ್ರಯಾಣಿಸಲು ಬೆಳಗ್ಗೆ 6, 9, 12 ಗಂಟೆಗೆ ಮತ್ತು ಮಧ್ಯಾಹ್ನ 3 ಗಂಟೆಗೆ ಮಾತ್ರ ಅನುಮತಿ. ಇದಲ್ಲದೆ ಕಾಡಿನಲ್ಲಿ ಗಂಟೆಗೆ 40 ಕಿ.ಮೀ. ಗಿಂತ ಹೆಚ್ಚು ವೇಗದಲ್ಲಿ ಕ್ರಮಿಸುವಂತಿಲ್ಲ. ಎಲ್ಲಿಯೂ ವಾಹನ ನಿಲ್ಲಿಸುವಂತಿಲ್ಲ. ಜರವಾಗಳ ಫೋಟೋ ತೆಗೆಯುವಂತಿಲ್ಲ ಹಾಗೂ ನಮ್ಮ ಆಹಾರ, ಬಟ್ಟೆಯನ್ನು ಅವರಿಗೆ ಕೊಡುವಂತಿಲ್ಲ. ವಾಹನದಲ್ಲಿ ಸಾಗುವಾಗ ಎಲ್ಲಾದರೂ ಜರವಾಗಳು ಕಂಡರೆ, ಅಚ್ಚರಿಯ ಜೊತೆ ವಿಷಾದವೂ ಆಗುತ್ತದೆ. ಏಕೆಂದರೆ, ಅಭಯಾರಣ್ಯಗಳಲ್ಲಿ ಹುಲಿ ಸಿಂಹಗಳನ್ನು ನೋಡಿದ ರೀತಿಯಲ್ಲಿ ನಾವು ಜರವಾಗಳನ್ನು ನೋಡುತ್ತಿರುತ್ತೇವೆ. ಹಾಗಾಗಿ, ಈ 50 ಕಿ.ಮೀ. ಪಯಣದ ಮೂಲಕ, ಜರವಾ ರಿಸರ್ವ್‌ ದಾಟಿ, ಲಾಂಚ್‌ ಅನ್ನು ಏರಿ, ನಂತರ ಕಾಲುದಾರಿಯಂತಿರುವ ಜಲಮಾರ್ಗವನ್ನು ಸಣ್ಣ ಸಣ್ಣ ದೋಣಿಗಳಲ್ಲಿ ಮ್ಯಾಂಗ್ರೋವ್‌ ಕಾಡುಗಳನ್ನು ಭೇದಿಸಿಕೊಂಡು, ಮ್ಯಾಂಗ್ರೋವ್‌ ಸಸ್ಯಕಾಶಿಯನ್ನು ಸವಿಯುತ್ತಾ, ಬಾರಾಟಾಂಗ್‌ ತಲುಪಿದಾಗ, ಹಾಲಿವುಡ್‌ ಸಿನಿಮಾವೊಂದನ್ನು ನೋಡಿ ಮುಗಿಸಿದ ಭಾವ ಹುಟ್ಟುತ್ತದೆ.

ಸುಣ್ಣದ ಕಲ್ಲಿನ ಗುಹೆಯ ಕತ್ತಲು
ಬಾರಾಟಾಂಗ್‌ನಲ್ಲಿ ಸುಣ್ಣದ ಕಲ್ಲಿನ ಗುಹೆಗಳು, ಮಣ್ಣಿನ ಜ್ವಾಲಾಮುಖೀ ಹಾಗೂ ಪ್ಯಾರಟ್‌ ಐಲ್ಯಾಂಡ್‌ ಅನ್ನು ನೋಡಲೇಬೇಕು. ಆ ಸುಣ್ಣದ ಕಲ್ಲಿನ ಗುಹೆಯನ್ನು ಹೊಕ್ಕಿದರೆ, ಕತ್ತಲಿನ ನಿಜ ಬಣ್ಣ, ಅದರ ನೈಜ ಮುಖ ಮನದಟ್ಟಾಗುತ್ತದೆ. ಟಾರ್ಚ್‌ನಿಂದ ಒಮ್ಮೆ ಗುಹೆಯ ಚಾವಣಿಗೆ ಬೆಳಕು ಹಾಯಿಸಿದರೆ, ಪ್ರಕೃತಿಯ ಕೈಚಳಕದಲ್ಲಿ ಮೂಡಿದ ಸುಂದರ ಕಲಾಕೃತಿಗಳು ಆಗಸದಿಂದ ಇಳಿದು ಬಂದಿವೆಯೇನೋ ಅಂತ ಬೆರಗಾಗುತ್ತದೆ. ಆಗ ಆಸ್ತಿಕರು ತಮ್ಮ ಆರಾಧ್ಯ ದೈವನನ್ನು ಕಂಡಂತೆ ಕೈಮುಗಿದರೆ, ಪ್ರಕೃತಿಯ ಆರಾಧಕನು “ವ್ಹಾವ್‌’ ಎಂದು ಮೂಕಸ್ಮಿತನಾಗುತ್ತಾನೆ.

Advertisement

ಆರೆರೆ… ಗಿಣಿರಾಮ…
ಇಲ್ಲಿನ ಪ್ಯಾರಟ್‌ ಐಲ್ಯಾಂಡ್‌ನ‌ಲ್ಲಿ ಜಗತ್ತಿನ ಅತಿಹೆಚ್ಚು ಪ್ರಭೇದದ ಗಿಣಿಗಳು ವಾಸವಾಗಿವೆ. ಇವುಗಳ ಹಾರಾಟ ನಿಜಕ್ಕೂ ಆಗಸದಲ್ಲಿನ ಹಸಿರು ರುಜು. ಸಂಜೆಯಾಗುತ್ತಿದ್ದಂತೆ ಇಳೆಗೆ ಕಾಲಿಡುವ ಈ ವಾಯುವಿಹಾರಿಗಳ ದೃಶ್ಯ ನೆನಪಿನ ಪುಟಗಳಿಂದ ಯಾವತ್ತೂ ಅಳಿಸಿಹೋಗುವುದಿಲ್ಲ.

ಅಲ್ಲುಂಟು, ಮಣ್ಣಿನ ಜ್ವಾಲಾಮುಖೀ!
ಬಾರಾಟಾಂಗ್‌ ಜೆಟ್ಟಿಯಿಂದ 4 ಕಿ.ಮೀ. ತೆರಳಿದರೆ, ಮಣ್ಣಿನ ಜ್ವಾಲಾಮುಖೀ ಪ್ರವಾಸಿಗನನ್ನು ವಿಸ್ಮಯಗೊಳಿಸುತ್ತದೆ. ದಿಗ್ಲಿಪುರ ದ್ವೀಪದಲ್ಲೂ ಇಂಥದ್ದೊಂದು ಜ್ವಾಲಾಮುಖೀಯಿದೆ. ಭೂಮಿಯ ಒಳಗಿನ ಒತ್ತಡದಿಂದ ನೀರು ಮಿಶ್ರಿತ ಮಣ್ಣು, ಖನಿಜಗಳು ಹಾಗೂ ಗಾಳಿಯು ನಿಧಾನವಾಗಿ ಸಣ್ಣ ಸಣ್ಣ ರಂಧ್ರಗಳಿಂದ ನಿರಂತರವಾಗಿ ಹೊರಗೆ ಉಕ್ಕಿ ಬರುತ್ತಿರುತ್ತದೆ. ಹೀಗೆ ಹರಿದುಬರುವ ಮಣ್ಣು ಅಪಾಯಕಾರಿಯಲ್ಲ. ಇದು ಬಹಳ ತಣ್ಣಗೆ ಇರುತ್ತದೆ. ವಿದೇಶಗಳಲ್ಲಿ ಇಂಥ ಮಣ್ಣಿನಲ್ಲಿ ಮಡ್‌ ಬಾತ್‌ ಮಾಡುತ್ತಾರೆ. ಈ ರೀತಿಯ ಮಣ್ಣಿನಲ್ಲಿ ವೈದ್ಯಕೀಯ ಗುಣವಿದೆ ಎನ್ನುವುದು ಅವರ ನಂಬಿಕೆ. ಆದರೆ, ಅಂಡಮಾನ್‌ನಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಲ್ಲ!

ನೀವು ಹೋಗೋದಾದ್ರೆ…
ಬಾರಾಟಾಂಗ್‌ ದ್ವೀಪದಲ್ಲಿ ತಂಗಲು ಸರ್ಕಾರಿ ಹಾಗೂ ಖಾಸಗಿ ವಸತಿಗೃಹಗಳಿವೆ. ಮುಂಗಡ ಬುಕ್ಕಿಂಗ್‌ ಉತ್ತಮ. ಇಲ್ಲದಿದ್ದರೆ, ಪೋರ್ಟ್‌ಬ್ಲೇರ್‌ನಲ್ಲಿ ತಂಗಿ ಇಲ್ಲಿಗೆ ಖಾಸಗಿ ವಾಹನ ಪಡೆದು ವಿಹರಿಸಬೇಕು. ಪೋಟ್‌ಬ್ಲೇರ್‌ನಿಂದ ಬರುವುದಾರೆ, ಬೆಳಗಿನ 3-4 ಗಂಟೆಯ ಒಳಗೇ ಹೊರಡಬೇಕು. ಇಲ್ಲದಿದ್ದರೆ, ನೀವು ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿ ವಾಹನಗಳನ್ನು ನೋಡಿ, ದಂಗಾಗುವುದರಲ್ಲಿ ಅನುಮಾನವೇ ಇಲ. ಆಹಾರವನ್ನೂ ಪೋರ್ಟ್‌ಬ್ಲೇರ್‌ನಿಂದಲೇ ಪಾರ್ಸೆಲ್‌ ಮಾಡಿಕೊಂಡರೆ, ಜೊತೆಗೆ ಹಣ್ಣು, ಬಿಸ್ಕತ್ತುಗಳನ್ನು ತಂದರೆ ಹೊಟ್ಟೆಗೆ ಏಕಾದಶಿ ಆಗುವುದಿಲ್ಲ!

ಮಧುಚಂದ್ರ ಹೆಚ್‌.ಬಿ., ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next