Advertisement
ಇದೇ ವೇಳೆ ಸಾಲದ ಪ್ರಮಾಣ ಅತಿಯಾಗಿರುವುದರಿಂದ ತನ್ನ ವರಮಾನವನ್ನು ಹೆಚ್ಚಿಸಿಕೊಳ್ಳಲು ಸರಕಾರ ಪರ್ಯಾಯ ಮಾರ್ಗೋಪಾಯಗಳತ್ತ ದೃಷ್ಟಿ ಹೊರಳಿಸಿದೆ. ಇದರಲ್ಲಿ ಮುಖ್ಯವಾಗಿ ಸರಕಾರ ಅರಣ್ಯ ಪ್ರದೇಶಗಳಲ್ಲಿ ಗಣಿ ಚಟುವಟಿಕೆಗೆ ದಿನವಿಡೀ ಮುಕ್ತ ಅವಕಾಶ ನೀಡಲು ಚಿಂತನೆ ನಡೆಸಿದ್ದು, ತನ್ಮೂಲಕ ಭೂಗರ್ಭದಿಂದ ಅದಿರನ್ನು ಅಗೆದು ತನ್ನ ಬೊಕ್ಕಸವನ್ನು ಭರ್ತಿ ಮಾಡಿಕೊಳ್ಳಲು ಯೋಜನೆ ರೂಪಿಸಿದೆ. ಸರಕಾರದ ಈ ಚಿಂತನೆ ಒಂದಿಷ್ಟು ಆತಂಕಕಾರಿ ಬೆಳವಣಿಗೆಯಾಗಿದ್ದು, ಸರಕಾರ ಈ ನಿರ್ಧಾರ ಕೈಗೊಂಡದ್ದೇ ಆದಲ್ಲಿ ಜೀವವೈವಿಧ್ಯ ಮತ್ತು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿರುವುದಂತೂ ನಿಶ್ಚಿತ.
Related Articles
Advertisement
ಈಗಾಗಲೇ ಅಭಿವೃದ್ಧಿ, ಮೂಲಸೌಕರ್ಯ ಒದಗಣೆಯ ಹೆಸರಿನಲ್ಲಿ ನಡೆಸಲಾಗುತ್ತಿರುವ ವಿವೇಚನಾಶೂನ್ಯ ಕಾಮಗಾರಿಗಳಿಂದಾಗಿ ನಿಸರ್ಗ ಮುನಿಸಿಕೊಂಡು ಪ್ರತೀ ಮಳೆಗಾಲದಲ್ಲಿಯೂ ಒಂದಲ್ಲ ಒಂದು ಅನಾಹುತ ಸಂಭವಿಸುತ್ತಿದ್ದರೆ, ಮತ್ತೂಂದೆಡೆಯಿಂದ ಅರಣ್ಯ ಪ್ರದೇಶಗಳಲ್ಲಿ ಮಿತಿಮೀರುತ್ತಿರುವ ಮಾನವ ಚಟುವಟಿಕೆಗಳ ಕಾರಣಗಳಿಂದಾಗಿ ವನ್ಯಜೀವಿಗಳು ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡಲಾರಂಭಿಸಿ, ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಲು ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರಕಾರ ಅರಣ್ಯಗಳಲ್ಲಿ ದಿನವಿಡೀ ಗಣಿಗಾರಿಕೆ ಚಟುವಟಿಕೆ ನಡೆಸಲು ಅನುಮತಿ ನೀಡುವ ತನ್ನ ಚಿಂತನೆಯನ್ನು ಕಾರ್ಯಾನುಷ್ಠಾನಕ್ಕೆ ತಂದದ್ದೇ ಆದಲ್ಲಿ ಬಲುದೊಡ್ಡ ಅನಾಹುತಕ್ಕೆ ಸ್ವತಃ ಮುನ್ನುಡಿ ಬರೆದಂತಾಗಲಿದೆ.
ವೆಚ್ಚ ಕಡಿತ, ಆದಾಯ ಸೋರಿಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣದಂತಹ ಕ್ರಮ ಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದೇ ಆದಲ್ಲಿ ಆದಾಯ ಸಂಗ್ರಹ ತನ್ನಿಂತಾನೇ ಏರುಗತಿ ಕಾಣುವುದರಲ್ಲಿ ಸಂದೇಹವಿಲ್ಲ. ಇಂತಹ ಸಕಾರಾತ್ಮಕ ಕ್ರಮಗಳ ಬದಲಾಗಿ ದೂರದೃಷ್ಟಿರಹಿತ ನಿರ್ಣಯಗಳನ್ನು ಕೈಗೊಳ್ಳುವುದು “ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಂಡಂತೆ’ ಎಂಬುದನ್ನು ರಾಜ್ಯ ಸರಕಾರ ಮರೆಯಬಾರದು.