ಮಂಗಳೂರು: ಉಳ್ಳಾಲ ತಾಲೂಕಿಗೆ ಒಳಪಟ್ಟ ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಯಿಂದ ಜೀವನ ನಡೆಸಲು ಸಾಧ್ಯವಾಗು ತ್ತಿಲ್ಲ ಎಂದು ಆರೋಪಿಸಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಘಟಕ ನೇತೃತ್ವದಲ್ಲಿ ಶುಕ್ರವಾರ ಪಾದಯಾತ್ರೆ- ಪ್ರತಿಭಟನ ಸಭೆ ಮಂಗಳೂರಿನಲ್ಲಿ ನಡೆಯಿತು.
ಬಲ್ಮಠ ವೃತ್ತದಿಂದ ಆರಂಭಗೊಂಡ ಪಾದ ಯಾತ್ರೆ ಮಿನಿ ವಿಧಾನ ಸೌಧದ ಎದುರು ಸಮಾಪನಗೊಂಡು ಸಭೆ ನಡೆಯಿತು. ದ್ವೀಪ ನಿವಾಸಿಗಳು, ವಿವಿಧ ಸಂಘಟನೆಗಳ ಪ್ರಮುಖರು ಸಹಿತ ಸಾವಿರಾರು ಮಂದಿ ಭಾಗಿಯಾದರು.
ಕೆಥೋಲಿಕ್ ಸಭಾದ ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ’ ಕೋಸ್ತ ಮಾತನಾಡಿ, ಕೂಲಿ ಕೆಲಸಕ್ಕೆ ಹೋಗದಿದ್ದರೆ ದಿನದೂ ಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ದ್ವೀಪ ನಿವಾಸಿಗಳಿಗೆ ಮರಳು ದಂಧೆ ನಡೆಸುವವರಿಂದ ಜೀವನವೇ ದುಸ್ತರ ವಾಗಿದೆ. ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾವೂರು ಉಳಿಯ, ರಾಣಿಪುರ, ಉಳ್ಳಾಲ ಹೊಯಿಗೆ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿದ್ದು, ರಾಣಿಪುರ ಉಳಿಯದಲ್ಲಿ ಮನೆಗಳು ಅಪಾಯದಲ್ಲಿವೆ ಎಂದರು.
ಡಿವೈಎಫ್ಐನ ಮಾಜಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಅಕ್ರಮ ಮರಳುಗಾರರ ಜತೆಗೆ ಒಟ್ಟು ವ್ಯವಸ್ಥೆ ಶಾಮೀಲಾದ ಕಾರಣದಿಂದ ಇದು ಅವ್ಯಾಹತವಾಗಿ ನಡೆಯುತ್ತಿದೆ. ಇದು ನಿಲ್ಲದಿದ್ದರೆ ಉಳ್ಳಾಲ, ಕೊಣಾಜೆ ಹಾಗೂ ವಾಮಂಜೂರು ಠಾಣೆ ಮುಂಭಾಗ ದ್ವೀಪ ನಿವಾಸಿಗಳ ಜತೆಗೆ ಪ್ರತಿಭಟಿಸಲಾಗುವುದು ಎಂದರು.
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೋ ಮಾತನಾಡಿ, ಅಕ್ರಮ ಮರಳುಗಾರಿಕೆ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ಧರ್ಮಗುರುಗಳು, ಧರ್ಮಭಗಿನಿಯರು, ವಲಯ ಅಧ್ಯಕ್ಷರು ಭಾಗವಹಿಸಿದ್ದರು. ಕೆಥೋಲಿಕ್ ಸಭಾದ ಅಧ್ಯಕ್ಷ ಆಲ್ವಿನ್ ಡಿ’ಸೋಜಾ, ಮದರ್ ತೆರೆಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಭಾದ ನಿಕಟಪೂರ್ವ ಅಧ್ಯಕ್ಷ ಸ್ಟಾನಿ ಲೋಬೋ, ಸ್ಥಳೀಯರ ಪರವಾಗಿ ಗಿಲ್ಬರ್ಟ್ ಡಿ’ಸೋಜಾ ಮಾತನಾಡಿದರು.
ಪ್ರಮುಖರಾದ ಸದಾಶಿವ ಉಳ್ಳಾಲ್, ಫಾ|ಜೆ.ಬಿ.ಸಲ್ದಾನ, ಆಲ್ವಿನ್ ಮೊಂತೇರೊ, ಮಂಜುಳಾ ನಾಯಕ್, ಸಂತೋಷ್ ಡಿ’ ಸೋಜಾ, ಯಾದವ ಶೆಟ್ಟಿ, ಶಶಿಧರ ಶೆಟ್ಟಿ, ಬಿ.ಕೆ.ಇಮಿ¤ಯಾಜ್, ಜೀತ್ ಮಿಲನ್, ಎಲ್.ಜೆ. ಫೆರ್ನಾಂಡಿಸ್, ಜೆರಾಲ್ಡ್ ಡಿ’ ಕೋಸ್ತ ಮೊದಲಾದವರು ಹಾಜರಿದ್ದರು.