ಮುಂಬೈ: ಐಪಿಎಲ್ ನ ಪ್ರಸಿದ್ದ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿ ಸುಮಾರು ಎಂಟು ವರ್ಷ ಆಡಿದ್ದ ಲೆಗ್ ಸ್ಪಿನ್ನರ್ ಯುಜಿವೇಂದ್ರ ಚಾಹಲ್ ಅವರು ಸದ್ಯ ರಾಜಸ್ಥಾನ ರಾಯಲ್ಸ್ ಪರವಾಗಿ ಆಡುತ್ತಿದ್ದಾರೆ. 2022ರ ಹರಾಜಿನಲ್ಲಿ ಆರ್ ಸಿಬಿಯು ಚಾಹಲ್ ಅವರನ್ನು ಕೈಬಿಟ್ಟು ಲಂಕಾದ ಸ್ಪಿನ್ನರ್ ವಾನಿಂದು ಹಸರಂಗ ಅವರನ್ನು ಖರೀದಿ ಮಾಡಿತ್ತು.
ಆರ್ ಸಿಬಿ ತಂಡದಿಂದ ಹೊರಬಂದ ಬಳಿಕ ಚಾಹಲ್ ರಾಜಸ್ಥಾನ ತಂಡದ ಪರ ಅದ್ಭುತ ಪ್ರದರ್ಶನ ಮುಂದುವರಿಸಿದ್ದರು. ಇದೀಗ ತನ್ನನ್ನು ಬೆಂಗಳೂರು ಫ್ರಾಂಚೈಸಿ ಕಡೆಗಣಿಸಿದರ ಬಗ್ಗೆ ಲೆಗ್ಗಿ ಹೇಳಿಕೊಂಡಿದ್ದಾರೆ.
ದಿ ರಣ್ವೀರ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಯುಜಿ, ನನ್ನು ತಂಡದಿಂದ ಕೈಬಿಡುವಾಗ ಯಾರೊಬ್ಬರೂ ಏನೂ ಹೇಳಿಲ್ಲ. ಸರಿಯಾದ ಸಂವಹನವೇ ನಡೆದಿಲ್ಲ. ನನಗೆ ಫ್ರಾಂಚೈಸಿ ಬಗ್ಗೆ ಸಿಟ್ಟ ಬಂದಿತ್ತು ಎಂದಿದ್ದಾರೆ.
“ನಾನು ಆರ್ ಸಿಬಿ ಗಾಗಿ ಸುಮಾರು 140 ಪಂದ್ಯಗಳನ್ನು ಆಡಿದ್ದೇನೆ, ಆದರೆ ನನ್ನ ಜೊತೆ ಸರಿಯಾಗಿ ಮಾತುಕತೆ ನಡೆಸಿಲ್ಲ. ಅವರು ಹರಾಜಿನಲ್ಲಿ ನನಗಾಗಿ ಎಲ್ಲವನ್ನೂ ಮಾಡುತ್ತಾರೆ ಎಂದು ಅವರು ನನಗೆ ಭರವಸೆ ನೀಡಿದರು. ಅದರ ನಂತರ ನನಗೆ ತುಂಬಾ ಕೋಪ ಬಂದಿತು, ನಾನು 8 ವರ್ಷಗಳ ಕಾಲ ಅವರಿಗಾಗಿ ಆಡಿದ್ದೇನೆ. ಚಿನ್ನಸ್ವಾಮಿ ಸ್ಟೇಡಿಯಂ ನನ್ನ ಅಚ್ಚುಮೆಚ್ಚಿನ ಗ್ರೌಂಡ್” ಎಂದು ರಣವೀರ್ ಅಲ್ಲಾಬಾಡಿಯಾ ಶೋನಲ್ಲಿ ಹೇಳಿಕೊಂಡಿದ್ದಾರೆ.
ಕೆಲವರು ನಾನು ಹೆಚ್ಚು ಹಣ ಡಿಮ್ಯಾಂಡ್ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ನಾನು ಯಾವ ಹಣವನ್ನೂ ಕೇಳಲಿಲ್ಲ. ನನಗೆ ನನ್ನ ಯೋಗ್ಯತೆ ಬಗ್ಗೆ ಗೊತ್ತು. ಐಪಿಎಲ್ ಆರಂಭವಾಗಿ ಅವರ ಜೊತೆಗಿನ ಮೊದಲ ಪಂದ್ಯದಲ್ಲೂ ನಾನು ಆರ್ ಸಿಬಿ ಕೋಚ್ ಗಳ ಜತೆ ಮಾತನಾಡಲಿಲ್ಲ. ಬಳಿಕ ಹರಾಜಿನಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ನಾನು ಅರ್ಥಮಾಡಿಕೊಂಡೆ ಎಂದು ಚಾಹಲ್ ಹೇಳಿದರು.
2022ರ ರಾಜಸ್ತಾನ ರಾಯಲ್ಸ್ ಪರ ಆಡಿದ ಯುಜಿ ಚಾಹಲ್ 27 ವಿಕೆಟ್ ಕಿತ್ತು ಸೀಸನ್ ನ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಸಾಧನೆ ಮಾಡಿದ್ದರು.