ಎಜ್ ಬಾಸ್ಟನ್: ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ತಂಡವು ಲೆಜೆಂಡ್ಸ್ ಚಾಂಪಿಯನ್ ಶಿಪ್ 2024 ಫೈನಲ್ ನಲ್ಲಿ ಗೆದ್ದು ಚೊಚ್ಚಲ ಪ್ರಶಸ್ತಿ ಗೆದ್ದಿದೆ. ಎಜ್ ಬಾಸ್ಟನ್ ನಲ್ಲಿ ಪಾಕಿಸ್ತಾನ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಅಂತರದ ಗೆಲುವು ಸಾಧಿಸಿದೆ.
ಇದೇ ವೇಳೆ ಟೀಂ ಇಂಡಿಯಾದ ಮಾಜಿ ಆಟಗಾರ, ಇಂಡಿಯಾ ಚಾಂಪಿಯನ್ಸ್ ನಾಯಕ ಯುವರಾಜ್ ಸಿಂಗ್ ಅವರು ತಮ್ಮ ಸಾರ್ವಕಾಲಿಕ XI (All time 11) ಅನ್ನು ಆಯ್ಕೆ ಮಾಡಿದರು.
ಯುವರಾಜ್ ಸಿಂಗ್ ನೇಮಿಸಿದ 11 ಆಟಗಾರರಲ್ಲಿ ಮೂರು ಭಾರತೀಯರಿಗೆ ಸೇರಿದ್ದಾರೆ. ಸ್ವತಃ ಯುವರಾಜ್ ಅವರು 12ನೇ ಆಟಗಾರನಾಗಿ ಉಳಿಯಲು ಬಯಿಸಿದರು. ಆದರೆ ಟೀಂ ಇಂಡಿಯಾಗೆ ಎರಡು ವಿಶ್ವಕಪ್ ಗೆದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಯುವಿ ತನ್ನ ಸಾರ್ವಕಾಲಿಕ ತಂಡದಲ್ಲಿ ನೇಮಿಸಿಲ್ಲ.
ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಯುವಿ ಸಾರ್ವಕಾಲಿಕ ತಂಡದಲ್ಲಿ ಸ್ಥಾನ ಪಡೆದ ಭಾರತೀಯರು. ಯುವಿ ತಂಡದಲ್ಲಿ ಸಚಿನ್ ಮತ್ತು ರಿಕಿ ಪಾಂಟಿಂಗ್ ಆರಂಭಿಕರಾಗಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ನಂ. 3 ಮತ್ತು ನಂ. 4 ಸ್ಥಾನಗಳಲ್ಲಿ ಸ್ಥಾನ ಪಡೆದಿದ್ದಾರೆ. ನಂ. 5 ರಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ಆಯ್ಕೆ ಮಾಡಿದ್ದರೆ, ನಂತರ ಆಡಂ ಗಿಲ್ ಕ್ರಿಸ್ಟ್ ಸ್ಪೆಷಲಿಸ್ಟ್ ವಿಕೆಟ್-ಕೀಪರ್ ಆಗಿ ನಂ. 6 ರಲ್ಲಿ ಆಯ್ಕೆಯಾದರು.
ಯುವಿ ತಂಡದಲ್ಲಿ ನಾಲ್ವರು ಆಸ್ಟ್ರೇಲಿಯನ್ ಆಟಗಾರರು ಇದ್ದಾರೆ. ರಿಕಿ ಪಾಂಟಿಂಗ್, ಆ್ಯಡಂ ಗಿಲ್ ಕ್ರಿಸ್ಟ್, ಶೇನ್ ವಾರ್ನೆ ಮತ್ತು ಗ್ಲೆನ್ ಮೆಕ್ ಗ್ರಾಥ್ ತಂಡದಲ್ಲಿದ್ದಾರೆ.
ಯುವರಾಜ್ ಸಿಂಗ್ ಅವರ ಸಾರ್ವಕಾಲಿಕ XI: ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಆ್ಯಡಂ ಗಿಲ್‌ಕ್ರಿಸ್ಟ್ (ವಿ.ಕೀ), ಆಂಡ್ರೆ ಫ್ಲಿಂಟಾಫ್, ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್, ಗ್ಲೆನ್ ಮೆಕ್‌ಗ್ರಾತ್, ವಾಸಿಮ್ ಅಕ್ರಮ್. ಯುವರಾಜ್ ಸಿಂಗ್ (12ನೇ ಆಟಗಾರ)