ಸುರತ್ಕಲ್: ಅಪಘಾತದಲ್ಲಿ ಕಾಲಿಗೆ ತಾಗಿ ಗಾಯಗೊಂಡಿದ್ದ ಯುವಕ ಸುರತ್ಕಲ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಕುಳಾಯಿ ನಿವಾಸಿ ಹಸನ್ ಬಾವ ಅವರ ಪುತ್ರ ಮೊಯ್ದಿನ್ ಫರ್ಹನ್(17) ಮೃತ ಯುವಕ. ಮಂಗಳವಾರ ರಾತ್ರಿ ಮುಕ್ಕದಲ್ಲಿ ನಡೆದ ಅಪಘಾತದಲ್ಲಿ ಅವರ ಕಾಲಿನ ಭಾಗಕ್ಕೆ ಏಟು ಬಿದ್ದಿತ್ತು. ಮಾಂಸದ ಭಾಗ ಹೊರಗೆ ಬಂದಿದ್ದರಿಂದ ಸುರತ್ಕಲ್‌ನ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಫರ್ಹನ್ ಬೆಳಗ್ಗೆ ಎಲ್ಲರಂತೆ ಚಹಾ ಕುಡಿದು ತಿಂಡಿ ತಿಂದು ಕುಟುಂಬದವರೊಂದಿಗೆ ಸಹಜವಾಗಿ ಇದ್ದ. ಆದರೆ ಬುಧವಾರ ಕಾಲಿನ ಶಸ್ತ್ರಚಿಕಿತ್ಸೆ ಮಾಡಿದ ಆನಂತರ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆ ವೈದ್ಯರು ಮಂಗಳೂರಿನ ಕೆಎಂಸಿಗೆ ತುರ್ತಾಗಿ ಸ್ಥಳಾಂತರಿಸಿದ್ದರು. ಆದರೆ ಅಲ್ಲಿ ಫರ್ಹನ್ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದ್ದು, ಇದಕ್ಕೆ ಸುರತ್ಕಲ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪಿಸಿದರು. ಸುದ್ದಿ ತಿಳಿದ ಯುವಕನ ಕುಟುಂಬಿಕರು, ಸಾರ್ವಜನಿಕರು ಆಸ್ಪತ್ರೆ ಮುಂಭಾಗ ಜಮಾಯಿಸಿ ಪ್ರತಿಭಟನೆ, ಆಕ್ರೋಶ ವ್ಯಕ್ತ ಪಡಿಸಿದರು.
ಸ್ಥಳಕ್ಕೆ ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸುರತ್ಕಲ್ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಮುಹಮ್ಮದ್ ಶಮೀರ್ ಕಾಟಿಪಳ್ಳ ಭೇಟಿ ನೀಡಿದ್ದು ಯುವಕನ ಮನೆಮಂದಿಯನ್ನು ಸಂತೈಸಿ, ವೈದ್ಯರಿಂದ ಮಾಹಿತಿ ಪಡೆದುಕೊಂಡರು.
ಸುರತ್ಕಲ್ ಠಾಣಾ ಪೊಲೀಸರು ಬಂದೋಬಸ್ತ್ ನಡೆಸಿದ್ದರು.