Advertisement

ಪ್ರಧಾನಿ ಮೋದಿ ವಿರುದ್ಧ ಯುವ ಕಾಂಗ್ರೆಸ್‌ ಆಕ್ರೋಶ

06:37 PM Feb 06, 2018 | |

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್‌ ಕಾರ್ಯಕರ್ತರು
ಸೋಮವಾರ ನಗರದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಕಾಂಗ್ರೆಸ್‌ ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ಆಡಳಿತ ನೀಡುತ್ತಿರುವ ಜನ ಮತ್ತು ರೈತ ವಿರೋಧಿ  ಧೋರಣೆ ತಾಳಿರುವ ಮೋದಿ ಕೇವಲ ದೇಶದ ನಾಲ್ಕು ಶ್ರೀಮಂತ ಕುಟುಂಬಗಳ ಕಂಪನಿಗಳಿಗಾಗಿ ದುಡಿಯುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಮೊದಲು ಕಾವೇರಿ, ಮಹದಾಯಿ ಸಮಸ್ಯೆ ಬಗೆಹರಿಸಲಿ.
ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ತಾವು ಪ್ರಧಾನಮಂತ್ರಿಯಾಗಿದ್ದೇನೆಂಬುದನ್ನು ಮರೆತು ಆಡಳಿತ ನಡೆಸುತ್ತಿದ್ದಾರೆ. ಆಡಳಿತಕ್ಕೆ ಬಂದು ಸುಮಾರು ನಾಲ್ಕು ವರ್ಷಗಳು ಕಳೆಯುತ್ತಿದೆ. ಪ್ರಧಾನಿ ಹುದ್ದೆಗೇರಿದ ದಿನದಿಂದ ಬರೀ ರೈಲು ಬಿಟ್ಟರೇ ವಿನಃ ಬುಲೆಟ್‌ ರೈಲು ಬಿಡಲಿಲ್ಲ. ಸ್ಮಾರ್ಟ್‌
ಸಿಟಿಗಳು ತಲೆ ಎತ್ತಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಯುವಕರನ್ನು ನಂಬಿಸಿ ಕೈಕೊಟ್ಟಿದ್ದಾರೆ. ಪೆಟ್ರೋಲ್‌, ಡೀಸೆಲ್‌ ದರ ನಿಯಂತ್ರಣ ಮಾಡಲು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಆಗಲಿಲ್ಲ. ದಾವೂದ್‌ ಇಬ್ರಾಹಿಂ ಸಿಗಲಿಲ್ಲ. ಗಂಗೆ ಶುದ್ಧಿಯಾಗಲಿಲ್ಲ. ರಾಮಮಂದಿರ ಕಟ್ಟಲು ಆಗಲಿಲ್ಲ. ವಿದೇಶಗಳಲ್ಲಿರುವ ಬ್ಯಾಂಕಿನಿಂದ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ತಿಳಿಸಿ ಜನರನ್ನು ವಂಚಿಸುತ್ತಿರುವ ಮೋದಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಗಮನ ನೀಡುತ್ತಿಲ್ಲ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕೋಮುವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು. ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಧು ಪಾಲೇಗೌಡ, ಚಿತ್ರದುರ್ಗ ವಿಧಾನಸಭಾ
ಕ್ಷೇತ್ರದ ಯುವ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ. ಹಸನ್‌ ತಾಹೀರ್‌, ಉಪಾಧ್ಯಕ್ಷ ಆರ್‌. ಅಶೋಕ್‌ ನಾಯ್ಡು, ರೆಹಮಾನ್‌, ವಸೀಂ, ಮಹಮ್ಮದ್‌ ಆಜಾಂ, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್‌ ಜಬ್ಟಾರ್‌, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಎಸ್‌. ರಾಜೇಂದ್ರಪ್ರಸಾದ್‌, ಹಿಂದುಳಿದ
ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಜಿ. ಮನೋಹರ್‌, ಪ್ರೊಫೆಷನಲ್‌ ವಿಭಾಗದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ಪರಿಶಿಷ್ಟ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎಚ್‌. ಅಂಜಿನಪ್ಪ, ಶೌಕತ್‌, ವಿಕಾಸ್‌, ಹರ್ಷ ಆಜಾಂ, ಕರಿಯಪ್ಪ, ರಮೇಶ್‌, ರಫಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬಡಾವಣೆ ಠಾಣೆ ಪೊಲೀಸರು ಮಧು ಪಾಲೇಗೌಡ ಸೇರಿದಂತೆ 15 ಜನರನ್ನು ಬಂಧಿ ಸಿ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next