Advertisement

Mangaluru: ಕುಡುಪು, ಮಂಗಳಜ್ಯೋತಿ ಬಳಿ ಅಂಡರ್‌ಪಾಸ್‌

02:05 PM Jan 10, 2025 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 169ರ ಬಿಕರ್ನಕಟ್ಟೆ-ಸಾಣೂರು ಚತುಷ್ಪಥ ರಸ್ತೆ ಕಾಮಗಾರಿಯಡಿ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರವಾದ ಕುಡುಪು ದೇವಸ್ಥಾನದ ಮುಂಭಾಗ ಹಾಗೂ ವಾಮಂಜೂರು ಸಮೀಪದ ಮಂಗಳ ಜ್ಯೋತಿ ಬಳಿ ಅಂಡರ್‌ಪಾಸ್‌ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಚತುಷ್ಪಥ ಕಾಮಗಾರಿ ಹಲವು ಕಡೆಗಳಲ್ಲಿ ನಡೆಯುತ್ತಿದ್ದು, ಕುಡುಪು ಮತ್ತು ಮಂಗಳ ಜ್ಯೋತಿ ಭಾಗದಲ್ಲಿ ರಸ್ತೆ ಯಾವ ಸ್ವರೂಪದಲ್ಲಿರಲಿದೆ ಎಂಬ ಚರ್ಚೆಗೆ ಈಗ ಉತ್ತರ ಸಿಕ್ಕಿದೆ.

Advertisement

ಸ್ಥಳೀಯರಿಗೆ ಸಮಸ್ಯೆ ಆಗದೆ ಕಾಮಗಾರಿ
ಮಾಜಿ ಮೇಯರ್‌, ಸ್ಥಳೀಯ ಕಾರ್ಪೋರೆಟರ್‌ ಭಾಸ್ಕರ್‌ ಕೆ. ಅವರು ‘ಸುದಿನ’ ಜತೆಗೆ ಮಾತನಾಡಿ, ಹೆದ್ದಾರಿ ಕಾಮಗಾರಿಯ ಮುಂದುವರಿದ ಭಾಗವಾಗಿ ಕುಡುಪು ದೇವಾಲಯದ ಮುಂಭಾಗ ಹಾಗೂ ಮಂಗಳಾ ಜ್ಯೋತಿ ಭಾಗದಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಈಗಾ ಗಲೇ ಹೆದ್ದಾರಿ ಇಲಾಖೆಯು ತೀರ್ಮಾನಿಸಿದೆ. ಜನರ ಅನುಕೂಲಕ್ಕೆ ತಕ್ಕ ಹಾಗೆ ಮತ್ತು ಸ್ಥಳೀಯರಿಗೆ ಯಾವುದೇ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಬೇಕು ಮತ್ತು ಭವಿಷ್ಯದಲ್ಲಿಯೂ ಜನರಿಗೆ ಸಮಸ್ಯೆ ಆಗದಂತೆ ಯೋಜನೆ ಕೈಗೊಳ್ಳಬೇಕಾಗಿದೆ ಎಂದು ಹೆದ್ದಾರಿ ಇಲಾಖಾ ಅಧಿಕಾರಿ ಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಸಂಕ್ರಾಂತಿ ಬಳಿಕ ಮಂಗಳಾಜ್ಯೋತಿ ಕಾಮಗಾರಿ!
ಕಾರ್ಪೋರೆಟರ್‌ ಸಂಗೀತ ಆರ್‌.ನಾಯಕ್‌ ‘ಸುದಿನ’ ಜತೆಗೆ ಮಾತನಾಡಿ ‘ಕುಡುಪು ದೇವಾಲಯ ಭಾಗದಲ್ಲಿ ಅಂಡರ್‌ಪಾಸ್‌ ಆಗುವ ಮುನ್ನ ಮಂಗಳಾಜ್ಯೋತಿ ಕೆಲಸ ಮೊದಲು ನಡೆಯಬೇಕಿದೆ. ಮಂಗಳಾಜ್ಯೋತಿ ಪ್ರದೇಶ ಎತ್ತರ ಹಾಗೂ ಕಡಿದಾದ ಪ್ರದೇಶವು ಅಕ್ಕಪಕ್ಕದಲ್ಲಿ ಇರುವ ಕಾರಣ ಇಲ್ಲಿ ಮೊದಲು ಕಾಮಗಾರಿ ಆರಂಭಿಸಿ ಬಳಿಕ ಇತರ ಭಾಗದ ಕೆಲಸ ನಡೆಸಬೇಕಾಗಿದೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಕರ ಸಂಕ್ರಾಂತಿ ಕಳೆದ ಬಳಿಕ ಮಂಗಳಾಜ್ಯೋತಿ ಭಾಗದಲ್ಲಿ ಅಂಡರ್‌ಪಾಸ್‌-ಓವರ್‌ಪಾಸ್‌ ಕಾಮಗಾರಿಯು ಆರಂಭವಾಗುವ ಎಲ್ಲ ಸಾಧ್ಯತೆ ಇದೆ’ ಎನ್ನುತ್ತಾರೆ.

ಕುಡುಪುನಲ್ಲಿ ಎರಡೂ ಕಡೆ ಸರ್ವಿಸ್‌ ರಸ್ತೆ
ಕುಡುಪು ದೇಗುಲದ ಮುಂಭಾಗದಲ್ಲಿ ಹೆದ್ದಾರಿಯು ಎತ್ತರವಾಗಿ ನಿರ್ಮಾಣವಾಗುವ ಕಾರಣದಿಂದ ಮುಖ್ಯ ರಸ್ತೆಯಿಂದ ಕುಡುಪು ದೇವಾಲಯ ಕಡೆಗೆ ಹೋಗಲು ಅಂಡರ್‌ಪಾಸ್‌ ಅಗತ್ಯ ಎಂಬುದನ್ನು ಮನಗಂಡು ಈ ಯೋಚನೆ ಮಾಡಲಾಗಿದೆ. ದೇವಸ್ಥಾನದ ಸಮೀಪದ ಹಳೆಯ ಮಾರ್ಗ ಇರುವಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗಲಿದ್ದು, ಹೆದ್ದಾರಿಯ ಎರಡೂ ಕಡೆಯಲ್ಲಿಯೂ ಸರ್ವಿಸ್‌ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ. ಅಂಡರ್‌ಪಾಸ್‌ ಹಾಗೂ ಸರ್ವಿಸ್‌ ರಸ್ತೆಯಿಂದ ಸ್ಥಳೀಯ ಕೆಲವು ಒಳರಸ್ತೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ.

Advertisement

ಕುಡುಪು ಅಂಡರ್‌ಪಾಸ್‌ ಅಗಲ: ಜನಾಗ್ರಹ
ಕುಡುಪು ದೇವಾಲಯ ಮುಂಭಾಗ ಅಂಡರ್‌ಪಾಸ್‌ ಬೇಕು ಎಂದು ದೇವಾಲಯದ ವತಿಯಿಂದ ಹಾಗೂ ಸ್ಥಳೀಯರು ಹೆದ್ದಾರಿ ಇಲಾಖೆಯ ಗಮನಕ್ಕೆ ತಂದಿದ್ದರು. ಮೊದಲಿಗೆ ದ್ವಿಚಕ್ರ ವಾಹನ ಮಾತ್ರ ಸಾಗಲು ಅನುಕೂಲವಾಗುವ ಅಂಡರ್‌ಪಾಸ್‌ ಎಂದು ಹೇಳಲಾಗುತ್ತಿತ್ತು. ಆದರೆ, ಕುಡುಪುವಿಗೆ ಸಾವಿರಾರು ಭಕ್ತರು ಆಗಮಿಸುವ ಕಾರಣದಿಂದ ಅಂಡರ್‌ಪಾಸ್‌ ಅಗಲ ಇರಬೇಕು ಎಂದು ಮನಗಂಡು ಇದೀಗ ಅಗಲದ ಅಂಡರ್‌ಪಾಸ್‌ ನಿರ್ಮಾಣಕ್ಕೆ ಪ್ರಾಧಿಕಾರ ಚಿಂತನೆ ನಡೆಸಿದೆ.

ಸ್ಥಳ ಪರಿಶೀಲನೆ ಪೂರ್ಣ
ಕುಡುಪು ದೇವಸ್ಥಾನದ ಮುಂಭಾಗ ಹಾಗೂ ವಾಮಂಜೂರು ಸಮೀಪದ ಮಂಗಳಾಜ್ಯೋತಿಯಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಈಗಾಗಲೇ ಪರಿಶೀಲನೆ ನಡೆಸಲಾಗಿದೆ.
-ಅಬ್ದುಲ್ಲ ಜಾವೇದ್‌ ಅಜ್ಮಿ, ಯೋಜನ ನಿರ್ದೇಶಕರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಮಂಗಳಜ್ಯೋತಿ: ಸರ್ವಿಸ್‌ ಓವರ್‌ಪಾಸ್‌!
ವಾಮಂಜೂರು ಕಡೆಯಿಂದ ಮಂಗಳಜ್ಯೋತಿಯಾಗಿ ಕುಡುಪು ಕಡೆಗೆ ಬರು ವಲ್ಲಿ ಹೆದ್ದಾರಿಯು ಅಂಡರ್‌ಪಾಸ್‌ ಮೂಲಕ ಸಾಗಲಿದೆ. ಹೀಗಾಗಿ ಪಚ್ಚ ನಾಡಿ ಕಡೆಗೆ ಹೋಗುವವರಿಗೆ “ಸರ್ವಿಸ್‌ ರಸ್ತೆ ಓವರ್‌ಪಾಸ್‌’ ಆಗಲಿದೆ. ವಾಮಂಜೂರು ಚರ್ಚ್‌ ಭಾಗದಿಂದ ರಸ್ತೆ ಅಂಡರ್‌ಪಾಸ್‌ ಸ್ವರೂಪದಲ್ಲಿ ಆರಂಭವಾಗಲಿದೆ. ಮಂಗಳಜ್ಯೋತಿ ಕೆಳಭಾಗದವರೆಗೆ ಇದು ಮುಂದುವರಿದು ಆ ಬಳಿಕ ಹೆದ್ದಾರಿ ಯಥಾ ಪ್ರಕಾರ ಇರಲಿದೆ. 7 ಮೀ. ಕೆಳಭಾಗದಲ್ಲಿ ಇಲ್ಲಿ ರಸ್ತೆ ಸಾಗುವ ಸಾಧ್ಯತೆ ಇದೆ ಎಂದು ಹೆದ್ದಾರಿ ಇಲಾಖೆಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ ನಿರ್ಧಾರ
ಕುಡುಪು ಹಾಗೂ ಮಂಗಳಾಜ್ಯೋತಿ ಭಾಗದಲ್ಲಿ ನಡೆಯಲಿರುವ ಹೆದ್ದಾರಿ ಕಾಮಗಾರಿ ಹಾಗೂ ಅಲ್ಲಿ ಕೈಗೊಳ್ಳುವ ಯೋಜನೆಯ ಬಗ್ಗೆ ಸ್ಥಳೀಯವಾಗಿ ಹಲವು ಪ್ರಶ್ನೆಗಳಿತ್ತು ಹಾಗೂ ಸಮಸ್ಯೆಗಳು ಇತ್ತು. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಹೆದ್ದಾರಿಯಲ್ಲಿ ಕೈಗೊಳ್ಳುವ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರ ಸೂಚನೆ ಮೇರೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇತ್ತೀಚೆಗೆ ಸ್ಥಳ ಭೇಟಿ ಮಾಡಿ ಪರಿಶೀಲಿಸಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಮಾಜಿ ಮೇಯರ್‌-ಸ್ಥಳೀಯ ಕಾರ್ಪೋರೆಟರ್‌ ಭಾಸ್ಕರ್‌ ಕೆ. ಹಾಗೂ ಕಾರ್ಪೋರೆಟರ್‌ ಸಂಗೀತಾ ಆರ್‌. ನಾಯಕ್‌ ಸಹಿತ ಹಲವು ಪ್ರಮುಖರು ಈ ವೇಳೆ ಉಪಸ್ಥಿತರಿದ್ದರು. ಯೋಜನೆ ಕೈಗೊಳ್ಳುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಗಿದೆ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next