Advertisement
ಉದ್ದ ಜಡೆಯ ಹುಡುಗಿ,ನನ್ನ ದಾಟಿ ಹೋಗಿ ಯಾಕೆ ಒಮ್ಮೆ ತಿರುಗಿ ನೋಡಿದೆ ಹಾಗೆ, ನನ್ನ ಜೀವವೇ ನವಿರಾಗಿ ಕಂಪಿಸುವ ಹಾಗೆ. ನನಗೇ ಅರಿವಿಲ್ಲದೆ ನಡೆದುಹೋದ ಈ ಘಟನೆ. ಮತ್ತೆ ಮತ್ತೆ ಘಟಿಸಲಿ ಅಂತ ಮುಗಿಯದ ಹಂಬಲ ಒಳಗೊಳಗೇ ಬೆಳೆಯುತ್ತಲೇ ಇದೆ. ಕೆನ್ನೆ ನುಣುಪು, ಕಣ್ಣ ಹೊಳಪು, ನಿಂತ ಭಂಗಿ , ನಡೆವ ಲಯ, ನಕ್ಕಾಗ ಗುಳಿ ಬೀಳುವ ಗಲ್ಲ, ಸಂಭ್ರಮದ ಒಡ್ಡೋಲಗ ನಡೆಸುವ ಕಂಗಳು. ಗಾಳಿಯಲ್ಲಿ ಜಾಲಿಯಾಗಿ ಹಾರುವ ಲಿಂಬೆ ಬಣ್ಣದ ನಿನ್ನ ಪಲ್ಲು, ನಿನ್ನ ಹಿಂದೆ ಹೆಜ್ಜೆಗೆ ಹೆಜ್ಜೆ ಇಟ್ಟು ನಡೆಯುವ ಆಮೋದ. ಆ ಘಳಿಗೆಯಲ್ಲಿ ನೀ ಒಮ್ಮೆಯಾದರೂ ತಿರುಗಿ ನೋಡಬಾರದೇ ಎಂದು ಉದ್ವಿಗ್ನಗೊಳ್ಳೋ ಮನಸ್ಸು. ಎಲ್ಲಿ ತಿರುಗಿ ನೋಡಿ ಬಿಡುತ್ತೇನೋ ಅನ್ನೋ ನಿನ್ನೊಳಗಿನ ದಿಗಿಲು. ನೋಡದೇ ಹೋದರೆ ಮತ್ತೆ ಕಾಣುತ್ತಾನೋ ಇಲ್ಲವೋ ಅನ್ನೋ ನಿನ್ನೊಳಗಿನ ಹಳಹಳಿಕೆ. ಯಾವ ಮಾತೂ ಇಲ್ಲದೇ ಬಿಗುಮಾನದ ಸೇತುವೆ ದಾಟಿದ ಆ ಮೌನದಾಟ.
ಕೇಳುತಾ ನಿಂತೆನು ಸುಮ್ಮನೆ ಬಯಲಲಿ !!
ನಿನ್ನ ನೆನಪುಗಳ ಮಳೆಯ ಹೊಳೆಯಲಿ, ನನ್ನ ಇರುಳುಗಳ ಕಾಗದದ ದೋಣಿ ತೇಲಿ, ದಿಕ್ಕು ದೆಸೆಗಳ ಪರಿವಿಲ್ಲದೇ ನೀ ಹರಿದತ್ತ ನನ್ನ ಪಯಣ. ತುಂಬಾ ಪ್ಲಾನ್ ಮಾಡಿ ಬದುಕುವ ಬದುಕು ತುಂಬಾ ಬೋರಿಂಗ್ ಅಂತ ಅನ್ಸಿದ್ದು, ಅವತ್ತು ತಟ್ಟನೆ ನೀ ಎದುರಿಗೆ ಬಂದು ನನ್ನ ದಾಟಿ ನಾಲ್ಕು ಹೆಜ್ಜೆ ಹೋಗಿ ಒಮ್ಮೆ ತಿರುಗಿ ನೋಡಿ, ನನ್ನ ಚಿತ್ತಭಿತ್ತಿಯ ಚಿತ್ರವಾಗಿ ಹೋದೆಯಲ್ಲ ಅವತ್ತೇ. ಅನೂಹ್ಯತೆಯಲ್ಲಿ ಧಕ್ಕುವ ಅಪ್ಯಾಯಮಾನತೆ ಕೊಡುವ ಸಂಭ್ರಮಕ್ಕೆ ಮುಪ್ಪೇ ಕಾಡುವುದಿಲ್ಲ. ಅದರ ನೆನಪೂ ಕೂಡ ನಿತ್ಯ ನೂತನ. ಹೀಗಾಗಿ ನಾನೀಗ ನೆನಪುಗಳ ಆಟಿಕೆಯ ಮುಂದೆ ಕೂತ ಮಗುವಾಗಿದ್ದೇನೆ. ಲೋಕದ ನಂಟಿನ ಜಂಜಡದಿಂದ ನನ್ನನ್ನ ಪಾರು ಮಾಡಿ, ನನ್ನ ಏಕಾಂತದ ಕ್ಯಾನ್ವಾಸಿನ ಏಕೈಕ ಚಿತ್ರವಾದ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ನೀ ಸಿಗುತ್ತೀಯೋ ಇಲ್ಲವೋ ಅನ್ನೋ ಯೋಚನೆಯನ್ನು ನಾನು ಯಾವತ್ತೂ ಮಾಡಿಲ್ಲ. ಯಾಕೆಂದರೆ ಒಂದು ಚಂದದ ನೆನಪನ್ನು ಯೋಚನೆಗಳ ಆಯುಧದಿಂದ, ಯೋಜನೆಗಳ ಚೂಪಿನಿಂದ ಇರಿಯಲಾರೆ. ಈ ಬದುಕಿಗೆ ಇಷ್ಟೇ ಸಾಕು.
Related Articles
ಜೀವ ಮುಳ್ಳೂರು
Advertisement