ಬಾಗಲಕೋಟೆ: ಹೇರ್ ಡ್ರೈಯರ್ ಮೆಷಿನ್ ಸ್ಪೋಟಗೊಂಡು ಮಹಿಳೆಯೊಬ್ಬರ ಎರಡೂ ಕೈಗಳು ತುಂಡಾದ ಘಟನೆ ಜಿಲ್ಲೆಯ ಇಳಕಲ್ಲದ ಬಸವನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎರಡೂ ಕೈ ತುಂಡಾದ ಮಹಿಳೆಯನ್ನು ಬಸವರಾಜೇಶ್ವರಿ ಯರನಾಳ ಎಂದು ಗುರುತಿಸಲಾಗಿದೆ. ಈ ಘಟನೆ ನ.15ರಂದು ನಡೆದಿದ್ದು, ಇಳಕಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವರಾಜೇಶ್ವರಿ ಪತಿ ಪಾಪಣ್ಣ ಯರನಾಳ ಸೈನಿಕರಾಗಿದ್ದು, 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮೃತಪಟ್ಟಿದ್ದರು. ಸದ್ಯ ಬಸವರಾಜೇಶ್ವರಿ ಅವರು ಮಕ್ಕಳೊಂದಿಗೆ ಇಳಕಲ್ಲದಲ್ಲಿ ವಾಸಿಸುತ್ತಿದ್ದು, ಪಕ್ಕದ ಮನೆಯವರಿಗೆ ಬಂದಿದ್ದ ಕೋರಿಯರ್ ಪಾರ್ಸೆಲ್ ಆಗಿ ಬಂದಿದ್ದ ಹೇರ್ ಡ್ರೈಯರ್ ತೆಗೆದು ಸ್ಚಿಚ್ ಬೋರ್ಡ್ ಗೆ ಹಾಕಿ ಆನ್ ಮಾಡಿದಾಗ ಸ್ಪೋಟಗೊಂಡಿದೆ. ಆಗ ಎರಡೂ ಕೈಗಳು ತುಂಡಾಗಿವೆ. ಸದ್ಯ ಇಳಕಲ್ಲದ ಪಾಟೀಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಶಿಕಲಾ ಹೆಸರಲ್ಲಿ ಕೋರಿಯರ್:
ಬಸವನಗರದ ಶಶಿಕಲಾ ಎಂಬವರ ಹೆಸರಿಗೆ ಬಾಗಲಕೋಟೆಯ ಡಿಟಿಡಿಸಿ ಕೋರಿಯರ್ ಬಾಕ್ಸ್ ಬಂದಿದ್ದು, ಕೋರಿಯರ್ ಬಾಯ್ ಶಶಿಕಲಾ ಅವರ ನಂಬರ್ ಗೆ ಕಾಲ್ ಮಾಡಿದಾಗ, ನಾನು ಊರಲ್ಲಿ ಇಲ್ಲ ಪಕ್ಕದ ಮನೆಯ ಬಸವರಾಜೇಶ್ವರಿ ಅವರ ಮನೆಯಲ್ಲಿ ಪಾರ್ಸೆಲ್ ಕೊಡಲು ಹೇಳಿದ್ದರು. ಅಲ್ಲದೇ ನಾನು ಯಾವುದೇ ಆನ್ ಲೈನ್ ಪ್ರಾಡಕ್ಟ್ ಆರ್ಡರ್ ಮಾಡಿಲ್ಲ. ಅದರಲ್ಲಿ ಏನಿದೆ ಎಂದು ಪ್ರಶ್ನಿಸಿದ್ದರು. ಕೋರಿಯರ್ ಪಾರ್ಸೆಲ್ ಪಡೆದ ಬಸವರಾಜೇಶ್ವರಿ ಯರನಾಳ ಅವರು, ಬಾಕ್ಸ್ ತೆರೆದು ನೋಡಿದಾಗ ಹೇರ್ ಡ್ರೈಯರ್ ಇದೆ ಎಂದು ತಿಳಿಸಿದ್ದಾರೆ.
ಅದೇ ವೇಳೆಗೆ ಪಕ್ಕದ ಮನೆಯವರು ಬಂದಿದ್ದು, ಆನ್ ಮಾಡಿ ತೋರಿಸಿ ಎಂದು ಕೇಳಿದ್ದು, ಆಗ ಬಸವರಾಜೇಶ್ವರಿ, ಅದನ್ನು ಆನ್ ಮಾಡಲು ವಿದ್ಯುತ್ ಸ್ವಿಚ್ ಬೋರ್ಡ್ ಗೆ ಹಾಕಿ, ಆನ್ ಮಾಡಿದ್ದರು. ಆಗ ಸ್ಪೋಟಗೊಂಡು, ಎರಡೂ ಕೈ ತುಂಡಾಗಿವೆ.
ಪೊಲೀಸರ ತನಿಖೆ:
ಶಶಿಕಲಾ ಅವರು ಹೇರ್ ಡ್ರೈಯರ್ ಆರ್ಡರ್ ಮಾಡಿರಲಿಲ್ಲ. ಅವರ ಹೆಸರಿನಲ್ಲಿ ಪಾರ್ಸೆಲ್ ಹೇಗೆ ಬಂತು. ಡ್ರೈಯರ್ ಆರ್ಡರ್ ಮಾಡಿದವರು ಯಾರು, ಹಣ ಯಾರು ಸಂದಾಯ ಮಾಡಿದರು, ಎಲ್ಲಿಂದ ಹೇರ್ ಡ್ರೈಯರ್ ಬಂತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶಾಖಪಟ್ಟಣದ ಮೆನು ಫ್ಯಾಕ್ಟರ್ ನ ಹೇರ್ ಡ್ರೈಯರ್ ಇದ್ದು, ಅದು ಬಾಗಲಕೋಟೆಯಿಂದ ಇಳಕಲ್ಲಗೆ ಕೋರಿಯರ್ ಕಳುಹಿಸಲಾಗಿದೆ.
ಇಳಕಲ್ಲ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜೇಶ್ವರಿ ಅವರನ್ನು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.