ಬಾಲ್ಯವನ್ನು ನೆನಪಿಸಿಕೊಳ್ಳುವುದೇ ಒಂದು ಖುಷಿ. ಸಾಗಿ ಬಂದ ದಾರಿಯಲ್ಲಿ ಬಾಲ್ಯಜೀವನದ ಮೆಲುಕುಗಳೇ ಅಂತರಂಗಕ್ಕೆ ಅತ್ಯಂತ ಸುಖ ಕೊಡುವ ಹೆಜ್ಜೆಗಳು. ಪ್ರತಿಯೊಬ್ಬರಿಗೂ ಬಾಲ್ಯ ಮಧುರವೇ. ಮೊಗೆದಷ್ಟು ಬಗೆದು ಬರುವ ಬಾಲ್ಯದ ನೆನಪುಗಳ ಸುಮಧುರ ಅನುಭವಗಳನ್ನು ಮತ್ತೆ ಮತ್ತೆ ಧ್ಯಾನಿಸುವ ಪರಿ ಅದೆಷ್ಟು ಚಂದ.
ಜೀವನದಲ್ಲಿ ನಾವೆಲ್ಲಾ ತೀರಾ ಸುಖೀ ಎಂದು ಅಂದುಕೊಳ್ಳುವಾಗ ಈ ನೆನಪುಗಳು ನಮ್ಮತ್ತ ಸುಳಿಯದಿದ್ದರೂ, ಮನಸ್ಸಿನಲ್ಲಿ ದುಃಖ,ನೋವು, ಅಸಹಾಯಕತೆ ಕಾಡಿದಾಗ ಬಾಲ್ಯದ ಜೀವನವನ್ನು ಒಮ್ಮೆ ಜ್ಞಾಪಿಸಿದಾಗ ಮುಖದಲ್ಲಿ ಮೂಡುವ ಆ ನಗು ಅಮ್ಮ ಪ್ರೀತಿ ಕೊಟ್ಟಷ್ಟೇ ಹಿತ ನೀಡುವುದು. ಹೌದು, ಬದುಕಿನ ನೋವುಗಳನ್ನೆಲ್ಲಾ ಮರೆತು ನೆನಪುಗಳ ಬಂಡಿಯನ್ನೇರಿ ಬಾಲ್ಯದ ಕಡೆಗೆ ಪಯಣ ನಡೆಸಿದಾಗ ದಾರಿಯಿಡಿ ತೆರೆ ಸರಿಸಿಕೊಳ್ಳುತ್ತಿದ್ದ ಆ ಜಗತ್ತು ಅದೆಷ್ಟೂ ಸುಂದರವಾದದ್ದು. ಅಕ್ಕಪಕ್ಕದ ಮನೆಯ ಮಕ್ಕಳೆಲ್ಲರೂ ಒಟ್ಟಿಗೆ ಸೇರಿ ಒಂದಷ್ಟು ದೂರ ಹೆಜ್ಜೆಯನ್ನು ಇರಿಸುತ್ತಾ ನಡೆದುಕೊಂಡು ಹೋಗುವಾಗ ಒಬ್ಬರನ್ನೊಬ್ಬರನ್ನು ಬೆನ್ನಟ್ಟಿಸಿಕೊಂಡು ಹಿಡಿಯುವ ಖುಷಿಯ ದಿನಗಳು. ಬಾಲ್ಯದ ಬದುಕಿನ ಆಟಗಳನ್ನು ನೆನಪಿಸಿಕೊಂಡರೆ ಈಗಲೂ ಮಕ್ಕಳಾಗಿ ಆಟ ಆಡುವ ಬಯಕೆ ಹುಟ್ಟುತ್ತದೆ. ಅಂದಿನ ಕಾಲದ ಭೌತಿಕ ಆಟಗಳು ಅದೆಷ್ಟು ಚಂದ ಮತ್ತು ಅಷ್ಟೇ ಆರೋಗ್ಯಕರವಾಗಿರುತ್ತಿದ್ದವು. ಎದ್ದು ಬಿದ್ದು ಆಡುವ ಲಗೋರಿಯ ಬೊಬ್ಬೆ, ಕಣ್ಣೆ ಮುಚ್ಚೆ ಕಾಡೇ ಗೂಡೆ, ರತ್ತೂ ರತ್ತೂ ರಾಯನ ಮಗಳೇ, ಟೋಪಿ ಬೇಕಾ ಟೋಪಿ ಇಂತಹ ಆಡಿದ ದಿನಗಳನ್ನು ನೆನೆದಾಗ ಆ ಸುಂದರ ಲೋಕ ಮರಳಿ ಬಾರದೆ ಎಂದೆನ್ನಿಸುತ್ತದೆ. ಶಾಲೆಯಲ್ಲೂ ಆಟಗಳ ಗೌಜಿ. ಈ ಗೌಜಿಯ ಜತೆ ಓದು ಬರಹದ ನಂಟು. ಗುರುಗಳ ಕೈಯಿಂದ ಪೆಟ್ಟು ತಿಂದು ಸಂಜೆಯಾಗುತ್ತಲೇ ದಾರಿಯಲ್ಲಿ ಬರುವಾಗ ಸಿಕ್ಕ ಗಿಡಗಳ ಎಲೆ, ಸೊಪ್ಪುಗಳನ್ನು ಕೀಳುತ್ತಾ ಮನೆಗೆ ಬಂದಾಗಲೇ ಸಮಾಧಾನ.
ನಾನು ಬಾಲ್ಯದಲ್ಲಿ ಕಂಡ ಜಗತ್ತಿನಲ್ಲಿ ಏನಿತ್ತು… ಸೆಗಣಿ ಸಾರಿಸುವಂತಹ ಆ ಪುಟ್ಟ ಮನೆಗಳಲ್ಲಿ ಚಿಮಿನಿ ದೀಪಗಳ ಬೆಳಕಿನಲ್ಲಿ ಸಹಬಾಳ್ವೆಯನ್ನು ಕಲಿಸುವ ಜೀವ ವೈವಿಧ್ಯವಿತ್ತು. ಬದುಕಿಗೆ ಮುದ ಕೊಡುವ ಮನುಷ್ಯ ಸಂಬಂಧಗಳಿದ್ದವು. ಚಿಮಿನಿ ದೀಪಗಳಿಗೆ ಮನುಷ್ಯರನ್ನು ಹತ್ತಿರಕ್ಕೆ ಸೇರಿಸುವ ಶಕ್ತಿಯಿತ್ತು. ರೇಡಿಯೋದಲ್ಲಿ ಬರುವಂತಹ ಯಕ್ಷಗಾನ, ಚಿತ್ರಗೀತೆ, ಆಕಾಶವಾಣಿ ಮಂಗಳೂರು ಅಂದಾಗ ಕಿವಿ ನೆಟ್ಟಗಾಗುತ್ತಿತ್ತು. ಕಿ ಪ್ಯಾಡ್ ಮೊಬೈಲ್ಗಳಾದ ಕಾರಣ ತುರ್ತು ಕರೆಗಳಿಗೆ ಮಾತ್ರ ಮೀಸಲಾಗಿರುತ್ತಿತ್ತು.
ಅಂದಿನ ನಮ್ಮ ಆಟದ ಸಾಮಾನುಗಳು ನಿಸರ್ಗದ ಕಲ್ಲುಮಣ್ಣುಗಳೇ ಅಲ್ಲವೇ? ಬೇಸಗೆ ರಜೆ ಸಿಕ್ಕರೆ ಸಾಕು, ಅಕ್ಕಪಕ್ಕದ ಗೆಳೆಯ ಗೆಳತಿಯರು ಸೇರಿ ಅಡುಗೆಮನೆ ಆಟ, ಮುಟ್ಟಾಟ ಹೀಗೆ ಹಲವಾರು ಆಟಗಳು ನಿಸರ್ಗದ ಕಡೆಗೆ ಮುಖ ಮಾಡಿಸುತ್ತಿತ್ತು. ಮಳೆಗಾಲ ಶುರುವಾದರೆ ನೀರು ನಿಂತ ಗುಂಡಿಗಳಲ್ಲಿ ಇರುವಂತಹ ಕಪ್ಪೆಗಳಿಗೆ ಕಲ್ಲುಗಳನ್ನು ಬಿಸಾಡುವುದು, ಮೀನು ಹಿಡಿಯುವುದು ಇದುವೇ ಅಂದಿನ ದಿನಗಳ ಬಂಗಾರದ ಕ್ಷಣಗಳು.
ಒತ್ತಡಗಳಿಲ್ಲದ ಜೀವನದಲ್ಲಿ ಬಿದ್ದು ಗಾಯಮಾಡಿಕೊಂಡಾಗ ನೋವಿಗೆ ಅಮ್ಮನ ಪ್ರೀತಿಯೇ ಮುಲಾಮು. ಆದರೆ ಇಂದು ಜಗತ್ತು ಬದಲಾಗಿದೆ. ಆಧುನಿಕತೆಗೆ ಒಗ್ಗುತ್ತಿದ್ದಂತೆ ಈ ಮೊಬೈಲ್ಗಳ ಬಳಕೆ ಅತಿಯಾಗುತ್ತಾ ಇಂದಿನ ಮಕ್ಕಳ ಬಾಲ್ಯ ಕೇವಲ ಮೊಬೈಲ್ಗಳಲ್ಲಿ ಇರುವಂತಹ ರೀಲ್ಸ್, ಗೇಮ್ಸ್ ಇವುಗಳಲ್ಲಿಯೇ ಕಳೆದು ಹೋಗುತ್ತಿದ್ದಾರೆ. ಆರೋಗ್ಯಕರವಾದ ಅಂದಿನ ಪರಿಸರ ಇಂದು ಇಲ್ಲದಂತಾಗಿದೆ. ಬಿದ್ದು ಗಾಯಮಾಡಿಕೊಳ್ಳುತ್ತಾರೆಯೋ ಎನ್ನುವಂತಹ ಭಯ ತಂದೆ ತಾಯಿಯ ಮನಸ್ಸಿನಲ್ಲಿ ಮನೆ ಮಾಡಿದೆ. ನೂರಕ್ಕೆ ನೂರು ತೆಗೆಯಬೇಕೆಂದು ಒತ್ತಡಗಳಿಲ್ಲದ ಅಂದಿನ ಬಾಲ್ಯ ಎಷ್ಟೊಂದು ಚೆನ್ನಾಗಿರುತ್ತಿತ್ತು ಎನ್ನುವುದಕ್ಕೆ ಎಲ್ಲರೂ ಕಳೆದಂತಹ ಆ ಕ್ಷಣಗಳನ್ನು ನೆನಪಿಸಿಕೊಳ್ಳಬೇಕಾಗಿದೆ. ಮತ್ತೆ ಮತ್ತೆ ಕಾಡುವ ಬಯಕೆ ಎಂದರೆ ಬಾಲ್ಯವೇ ಮತ್ತೇ ಬರುವೆಯಾ…?
-ಸಂಧ್ಯಾ ಎನ್., ಮಣಿನಾಲ್ಕೂರು