ನಿನ್ನ ಹೆಜ್ಜೆಯ ಕೆಳಗೆ ಸಿಕ್ಕ ಹುಲ್ಲು, ಗೆಜ್ಜೆ ಸದ್ದಿಗೆ ಮತ್ತೆ ತಲೆಯೆತ್ತಿ ನೋಡುತ್ತಿತ್ತು. ನಿನ್ನನ್ನು ನೋಡಿದ ತಕ್ಷಣ ನನ್ನ ಮನದಲ್ಲಿ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು…
ಮುಂಜಾನೆಯ ದಟ್ಟ ಮಂಜಿನ ನಡುವೆ ಬೆಳದಿಂಗಳ ಬಾಲೆಯಂತೆ ಕಣ್ಮುಂದೆ ಸರಿದಾಡಿದವಳು ನೀನು. ಬೆಳಗಾವಿಯ ಪಾಲಿಗೆ ಪ್ರೇಮಿಗಳ ಸ್ವರ್ಗವೇ ಆದ ಶಿವಾಜಿ ಪಾರ್ಕಿನಲ್ಲಿ ಅಲೆಯುತ್ತಿರುವಾಗ ಎದುರಿಗೆ ಬಂದು ಎದೆಯಲ್ಲಿ ಪ್ರೀತಿಯ ಜ್ಯೋತಿಯನ್ನು ಹೊತ್ತಿಸಿದ್ದು ಇನ್ನೂ ನೆನಪಿದೆ. ಬೆಳಗಿನ ಸೂರ್ಯರಶ್ಮಿಗಳು ನಿನ್ನ ಸೌಂದರ್ಯವನ್ನು ಸವಿಯಲೆಂದೇ ಓರೆಯಾಗಿ, ನಿನ್ನ ಕೆನ್ನೆಯ ಮೇಲೆ ಬೀಳುತ್ತಿವೆ ಎನಿಸುತ್ತಿತ್ತು. ನಿನ್ನ ಹೆಜ್ಜೆಯ ಕೆಳಗೆ ಸಿಕ್ಕ ಹುಲ್ಲು, ಗೆಜ್ಜೆ ಸದ್ದಿಗೆ ಮತ್ತೆ ತಲೆಯೆತ್ತಿ ನೋಡುತ್ತಿತ್ತು. ನಿನ್ನನ್ನು ನೋಡಿದ ತಕ್ಷಣ ನನ್ನ ಮನದಲ್ಲಿ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು. ನಿನ್ನ ಸೌಂದರ್ಯಕ್ಕೆ ಸೆರೆಯಾಗಿ ನಿಂತಿರುವಾಗಲೇ ತಂಗಾಳಿಯು ಮೈ ಸೋಕಿ ಹೋದಂತೆ ಕಣ್ಮರೆಯಾಗಿ ಹೋದವಳು ಮತ್ತೆ ನನಗೆ ಸಿಕ್ಕಿದ್ದು ನಮ್ಮ ಕಾಲೇಜಿನ ಬಸ್ಸಿನಲ್ಲಿ. ನೀನು ನಮ್ಮದೇ ಕಾಲೇಜಿನ ಬೇರೆ ವಿಭಾಗದ ವಿದ್ಯಾರ್ಥಿನಿ ಎಂದು ತಿಳಿದ ಮೇಲೆ ನನಗಾದ ಖುಷಿ ಅಷ್ಟಿಷ್ಟಲ್ಲ.
ಫ್ರೆಶರ್ ಡೇಯಂದು ಕೈಕುಲುಕಿ ಸ್ನೇಹಿತೆಯಾದವಳು ಕೆಲವೇ ದಿನಗಳಲ್ಲಿ ಹೃದಯದರಸಿಯಾದೆ. ನಮ್ಮ ಪ್ರೀತಿಯನ್ನು ನೋಡಿ ಪ್ರೀತಿ ಎಂದರೆ ಹೀಗಿರಬೇಕು ಎಂದು ಹೊಗಳಿದವರೆಷ್ಟೋ? ಸಹಿಸಿಕೊಳ್ಳಲಾಗದೆ ಹೊಟ್ಟೆ ಉರಿಸಿಕೊಂಡವರೆಷ್ಟೋ? ಆದರೆ, “ಯಾರೇ ಕೂಗಾಡಲಿ ಊರೇ ಹೋರಾಡಲಿ, ನಮ್ಮ ಪ್ರೀತಿಗೆ ಸಾಟಿ ಇಲ್ಲ’ ಎಂದು ಇಬ್ಬರೂ ಬಿಟ್ಟಿರದಷ್ಟು ಪ್ರೀತಿಯ ಬಲೆಯಲ್ಲಿ ಬಂಧಿತರಾಗಿದ್ದೆವು. ಜಗಕ್ಕೆಲ್ಲಾ ಸೂರ್ಯನ ಕಿರಣಗಳು ಭೂಮಿಗೆ ತಾಕಿದ ಮೇಲೆ ಬೆಳಕಾದರೆ ನನಗೆ ನೀನು ಶುಭಾಶಯ ತಿಳಿಸಿದ ಮೇಲೆ ಬೆಳಕಾಗುತ್ತಿತ್ತು. ಪ್ರತಿ ರಾತ್ರಿ ಶುಭರಾತ್ರಿ ಎಂದು ನಾನು ಹೇಳಿದ ಮೇಲೆಯೆ ನಿನ್ನ ಕಣ್ಣುರೆಪ್ಪೆ ಮುಚ್ಚುತ್ತಿತ್ತು.
ಕೆಲವು ದಿನಗಳಿಂದ ನೀನು ಕಾಲೇಜಿಗೆ ಬರುತ್ತಿಲ್ಲ, ಫೋನಿಗೂ ಸಿಗುತ್ತಿಲ್ಲ. ನಿನ್ನ ಗೆಳತಿಯರು ಕಾರಣವನ್ನು ಹೇಳದೆ ತಲೆ ತಗ್ಗಿಸಿಕೊಂಡು ಹೋಗುತ್ತಿರುವುದನ್ನು ನೋಡಿದರೆ, ಎದೆಯಲ್ಲಿ ಭಯ ಮನೆ ಕಟ್ಟುತ್ತಿದೆ. ಪ್ರಾಣ ಬಿಟ್ಟರೂ ಪ್ರೀತಿಯನ್ನು ಬಿಡಲಾರೆ ಎಂದು ಹೇಳಿದ ಗೆಳತಿಯೇ ನನ್ನಿಂದ ದೂರಾಗಲು ಕಾರಣವೇ ಹೇಳದೇ ಏಕೆ ಹೋದೆ? ನೀನಿಲ್ಲದ ಈ ಜೀವನ ನರಕದಂತಾಗಿದೆ. ನೀನಿರದ ದಿನಗಳನ್ನು ಊಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಆದರೆ, ನೀನು ಪ್ರೀತಿಯನ್ನು ಮರೆತು ಹೇಗಿರುವೆ ತಿಳಿಯುತ್ತಿಲ್ಲ. ನನ್ನಿಂದ ದೂರಾಗಿದ್ದಕ್ಕೆ ನಿನ್ನ ಮೇಲೆ ಕೋಪವಿಲ್ಲ. ಆದರೆ, ದೂರಾಗಲು ಕಾರಣವನ್ನಾದರೂ ಹೇಳಬಾರದೆ?
ಬೆಂಕಿ ಉರಿದರೂ ಹೊಗೆಯು ಆವರಿಸಿದಂತೆ, ನೀನು ನನ್ನಿಂದ ದೂರಾದರೂ ನಿನ್ನ ಪ್ರೀತಿಯ ನೆನಪು ನನ್ನ ಹೃದಯವನ್ನು ಆವರಿಸಿದೆ. ನಿನ್ನ ಹೃದಯ ಬಡಿತದ ಸದ್ದಿಗಾಗಿ ಇನ್ನೊಂದು ಹೃದಯ ಕಾದು ಕುಳಿತಿದೆ ಎನ್ನುವುದನ್ನೇ ಮರೆತೆಯಾ? ನನ್ನ ಹೃದಯದಲ್ಲಿರುವ ಭಾವನೆಗಳೆಲ್ಲವನ್ನೂ ಕೊಳ್ಳೆ ಹೊಡೆದು ಪ್ರೀತಿಯ ನೆನಪುಗಳನ್ನು ಏಕೆ ಬಿಟ್ಟು ಹೋದೆ? ಆದರೂ ಕಾಯುತ್ತಿರುವೆ ಬರದ ಬವಣೆಯಲ್ಲಿ ಮಳೆ ಬಂದಂತೆ, ಮಾಸಿ ಹೋದ ಕನಸುಗಳಿಗೆ ಬಣ್ಣ ಹಚ್ಚಲು ಮರಳಿ ಬರುತ್ತೀಯಾ ಎಂಬ ನಂಬಿಕೆಯಲ್ಲಿ.
ಇಂತಿ ನಿನ್ನ ಪ್ರೇಮಾಕಾಂಕ್ಷಿ
ಮಹಾಂತೇಶ ದೊಡವಾಡ