Advertisement
ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಮೆಟ್ರೋ ಕಾರಿಡಾರ್ ಯೋಜನೆಯಿಂದಾಗಿ ಈ ವ್ಯಾಪ್ತಿಯ ಜನರ ವೃತ್ತಿ ಬದುಕು, ಮನರಂಜನೆ, ವಸತಿ, ವ್ಯಾಪಾರ, ಸಾರಿಗೆ, ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲ ಹಂತಗಳ ಜೀವನಶೈಲಿಯಲ್ಲಿ ಸಾಕಷ್ಟು ವ್ಯತ್ಯಾಸಗಳು ಆಗಲಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
Related Articles
Advertisement
ಸಕಾರಾತ್ಮಕ ಬದಲಾವಣೆ: “ಮೊದಲ ಹಂತದ “ನಮ್ಮ ಮೆಟ್ರೋ’ ಯೋಜನೆ ನಗರದ ಸಾಮಾಜಿಕ-ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೆಟ್ರೋ ಸಂಪೂರ್ಣ ಸೇವೆ ಆರಂಭಗೊಂಡ ನಂತರ ರಿಯಲ್ ಎಸ್ಟೇಟ್ ಗರಿಗೆದರಲಿದೆ. ಹೊರವಲಯಗಳಲ್ಲಿ ಭೂಮಿಯ ಬೆಲೆ ಏರಿಕೆಯಾಗಲಿದೆ. ಈಗಾಗಲೇ ಜನ ಅಲ್ಲೆಲ್ಲಾ ಭೂಮಿ ಖರೀದಿ, ಮನೆ ನಿರ್ಮಾಣದಲ್ಲಿ ತೊಡಗಿದ್ದಾರೆ,’ ಎಂಬುದು ಭಾರತೀಯ ವಿಜ್ಞಾನ ಸಂಸ್ಥೆಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ, ನಗರ ಯೋಜನಾ ಸಂಸ್ಥೆ (ಸಿಐಸಿಎಸ್‌ಟಿಯುಪಿ) ಅಧ್ಯಕ್ಷ ಪ್ರೊ.ಜೆ.ಎಂ. ಚಂದ್ರ ಕಿಶನ್ ಅವರ ಅಭಿಪ್ರಾಯ.
“ಇನ್ನು ಮೆಟ್ರೋ ಎರಡನೇ ಹಂತದ ಯೋಜನೆ ಕೂಡ ಶುರುವಾಗಿದೆ. ಹಾಗಾಗಿ, ಜನವಸತಿ, ಜನರ ಮನರಂಜನಾ ಆಯ್ಕೆಗಳು, ಸಾರಿಗೆ ವ್ಯವಸ್ಥೆಗಳು ಕೂಡ ಬದಲಾಗಲಿವೆ. ಇದೆಲ್ಲವೂ ಭೂಮಾಫಿಯಾ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತ ಸಂಪೂರ್ಣ ಕಾರ್ಯಾರಂಭಗೊಂಡ ನಂತರ ಸಿಐಸಿಎಸ್‌ಟಿಯುಪಿ ಕೂಡ ಉದ್ದೇಶಿತ ಮೆಟ್ರೋ ಮಾರ್ಗದಲ್ಲಿನ ಸಾಮಾಜಿಕ-ಆರ್ಥಿಕ ಬದಲಾವಣೆ ಬಗ್ಗೆ ಅಧ್ಯಯನ ನಡೆಸಲಿದೆ,’ ಎಂದೂ ಪ್ರೊ.ಚಂದ್ರಕಿಶನ್ ಹೇಳಿದ್ದಾರೆ.
ಭೂಮಿ ಬೆಲೆ ಶೇ.20ರಷ್ಟು ಏರಿಕೆ?: “ನೋಟು ರದ್ದತಿ ನಂತರ ರಿಯಲ್ ಎಸ್ಟೇಟ್ ವ್ಯವಹಾರ ಸ್ತಬ್ಧಗೊಂಡಿದೆ. ಮೆಟ್ರೋ ಮೊದಲ ಹಂತ ಪೂರ್ಣಗೊಂಡ ಬೆನ್ನಲ್ಲೇ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಮರುಚಾಲನೆ ದೊರೆಯಲಿದೆ,’ ಎಂದು ಸೇಂಟ್‌ಮಾರ್ಕ್ ರಸ್ತೆಯಲ್ಲಿರುವ ರಾಯಲ್ ರಿಟ್ರೀಟ್ ಹೋಮ್ಸ್ ಪ್ರೈ.ಲಿ.,ನ ವ್ಯವಸ್ಥಾಪಕ ಸಿ.ಕೆ.ಸುರೇಶ್ ಹೇಳುತ್ತಾರೆ.
“ಮೆಟ್ರೋ ಮೊದಲ ಹಂತ ಸಂಪೂರ್ಣವಾಗಿ ಶುರುವಾದ ನಂತರ ನಗರದ ಯಾವುದೇ ಮೂಲೆಯಿಂದ ಕೇವಲ ಅರ್ಧಗಂಟೆಯಲ್ಲಿ ನಗರದ ಹೃದಯಭಾಗವನ್ನು ತಲುಪಬಹುದು. ಹಾಗಾಗಿ, ಸಹಜವಾಗೇ ಜನ ಮೆಟ್ರೋ ಹಾದುಹೋಗುವ ಮಾರ್ಗಗಳ ಸುತ್ತಮುತ್ತ ನೆಲೆಸಲು ಬಯಸುತ್ತಾರೆ. ಪರಿಣಾಮ ನಗರದ ಹೊರವಲಯಗಳಲ್ಲಿ ಭೂಮಿ ಬೆಲೆ ಶೇ.15ರಿಂದ 20ರಷ್ಟು ಏರಿಕೆ ಆಗಬಹುದು,’ ಎಂಬುದು ಸುರೇಶ್ ಅವರ ಅಭಿಪ್ರಾಯ.
ಅಪಘಾತಗಳೂ ತಗ್ಗಲಿವೆ: ಮೆಟ್ರೋ ನಿಲ್ದಾಣಗಳಿಂದ ವ್ಯವಸ್ಥಿತವಾಗಿ ಬಸ್ ಸಂಪರ್ಕ ಸೇವೆ ದೊರೆತರೆ, ಆಟೋ, ಟ್ಯಾಕ್ಸಿಗಳಿಗೂ ಹೊಡೆತ ಬೀಳಲಿದೆ. ಆಗ, ಜನ ಉದ್ದೇಶಿತ ಮಾರ್ಗಗಳಲ್ಲಿ ಸಂಪೂರ್ಣವಾಗಿ ಸಾರ್ವಜನಿಕ ಸಾರಿಗೆ ಮೊರೆಹೋಗುತ್ತಾರೆ. ಆಗ ವಾಹನ ದಟ್ಟಣೆ ಕಡಿಮೆ ಆಗಲಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲಿಕ್ಕೂ ಕಾರಣವಾಗಲಿದೆ. ಎಂದು ಸಾರಿಗೆ ತಜ್ಞರು ವಿವರಿಸುತ್ತಾರೆ.
“ಮೆಟ್ರೋ ರೀತಿಯ ಸಾರಿಗೆ ವ್ಯವಸ್ಥೆ ಉತ್ತಮವಾಗಿರುವ ಪ್ರದೇಶಗಳಲ್ಲಿ ನೆಲೆಸಲು ಜನ ಬಯಸುತ್ತಾರೆ. ಮೆಟ್ರೋ ವ್ಯವಸ್ಥೆಯಿಂದ ಎಲ್ಲ ವರ್ಗದ ಜನರಿಗೆ ಅನುಕೂಲ ಆಗಲಿದೆ. ಸ್ವಂತ ವಾಹನಗಳಿರುವವರೂ ಇನ್ನುಮುಂದೆ ಸಾರ್ವಜನಿಕ ಸಾರಿಗೆಗೆ ಒಗ್ಗಿಕೊಳ್ಳಲಿದ್ದಾರೆ. ಇದು ನಗರದ ಬೆಳವಣಿಗೆಗೆ ಪೂರಕವಾಗಿದೆ,’ ಎನ್ನುತ್ತಾರೆ ನಗರ ತಜ್ಞ ಹಾಗೂ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಎ. ರವೀಂದ್ರ.
ಇತರೆ ವರ್ಗಗಳನ್ನೂ ಸೆಳೆಯುತ್ತಿದೆ ಮೆಟ್ರೋ: ಆರಂಭದಲ್ಲಿ “ನಮ್ಮ ಮೆಟ್ರೋ’ ಕೇವಲ ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗಗಳಿಗೆ ಸೀಮಿತವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಡವರು, ಚಿಲ್ಲರೆ ವ್ಯಾಪಾರಿಗಳನ್ನೂ ಅದು ಸೆಳೆಯುತ್ತಿದೆ. ಬಸ್‌ಗಳಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕರು ಈಗ ಮೆಟ್ರೋ ಏರುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿವಿಧ ಬಡಾವಣೆಗಳಲ್ಲಿ ಚಿಲ್ಲರೆ ವ್ಯಾಪಾರ ಮಾಡುವವರು ಕೂಡ ಮೆಟ್ರೋ ರೈಲುಗಳಲ್ಲಿ ಸಂಚರಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ.
ಇನ್ನು ಮಂಡ್ಯ, ಮೈಸೂರು ಮತ್ತಿತರ ಕಡೆಗಳಿಂದ ಬರುವವರು ಸ್ವಂತ ವಾಹನಗಳಲ್ಲಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದೆ! ಅಂದರೆ, ಮೈಸೂರು ರಸ್ತೆಯಿಂದ ಬರುವವರು ಈ ಮೊದಲು ನಗರದ ಸಂಚಾರದಟ್ಟಣೆ ಕಾರಣಕ್ಕಾಗಿಯೇ ಸ್ವಂತ ವಾಹನಗಳನ್ನು ಬಿಟ್ಟು, ಬಸ್‌ಗಳಲ್ಲಿ ಬರುತ್ತಿದ್ದರು. ಈಗ ಅವರಲ್ಲಿ ಬಹುತೇಕರು ಕಾರು ಅಥವಾ ಬೈಕ್‌ಗಳಲ್ಲಿ ಬಂದು, ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದ ಆವರಣದಲ್ಲಿ ವಾಹನ ನಿಲ್ಲಿಸಿ, ರೈಲು ಏರುತ್ತಿದ್ದಾರೆ.
* ವಿಜಯಕುಮಾರ್ ಚಂದರಗಿ