ಅಂದು ಪುಟಾಣಿ ಸಂಜನಾ, ತನಗೆ ಶಾಲೆಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಬಗ್ಗೆ ಚೈತ್ರಾ ಆಂಟಿಯ ಬಳಿ ಹೇಳಿ ಸಂಭ್ರಮಿಸುತ್ತಿದ್ದಳು. “ಹೌದಾ ಚಿನ್ನಿ? ಎಲ್ಲಿ, ಒಂದ್ಸಲ ಆ ಹಾಡನ್ನು ನಂಗಾಗಿ ಹಾಡ್ತೀಯಾ?’ ಅಂತ ಹುರಿದುಂಬಿಸಿದಳು. ಮರಿ ಕೋಗಿಲೆಯಂತೆ ಹಾಡತೊಡಗಿದ ಆ ಪುಟಾಣಿಯ ಹಾಡು ಕೇಳಲು ಸುಮಾರು ಜನ ನೆರೆದಿದ್ದರು. ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸಂಜನಾಳನ್ನು ಚೈತ್ರಾ, “ನೀನು ಸಂಗೀತ ಕ್ಲಾಸ್‌ಗೆ ಹೋಗ್ತಿದ್ದೀಯ?’ ಅಂತ ಕೇಳಿದಾಗ, ಹುಡುಗಿಯ ಮುಖ ಸಪ್ಪಗಾಯಿತು. ಯಾಕೆ ಅಂತ ವಿಚಾರಿಸಿದಾಗ, ಸಂಜನಾ ಕೊಟ್ಟ ಉತ್ತರ ಕೇಳಿ ಚೈತ್ರಾಳಿಗೆ ಬೇಸರವಾಯ್ತು.
“ಅಮ್ಮ ಬೆಳಗ್ಗೆ ಎದ್ದು, ನನ್ನನ್ನು ಎಬ್ಬಿಸಿ ಶಾಲೆಗೆ ರೆಡಿ ಮಾಡಿ, ಅಪ್ಪನ ಡಬ್ಬಿಗೂ ತಿಂಡಿ ತುಂಬಿ, ಅಪ್ಪನನ್ನು ಕಚೇರಿಗೆ, ನನ್ನನ್ನು ಶಾಲೆಗೆ ಕಳಿಸ್ತಾಳೆ. ಆಮೇಲೆ, ಅವಳೂ ಆಫೀಸಿಗೆ ಹೊರಡ್ತಾಳೆ. ಅಪ್ಪ-ಅಮ್ಮ ಬರೋದೇ ರಾತ್ರಿ 8 ಗಂಟೆಗೆ. ಶಾಲೆ ಮುಗಿಸಿ, ನಾನು ಅಜ್ಜ-ಅಜ್ಜಿ ಮನೆಗೆ ಹೋಗ್ತಿನಿ. ಅಲ್ಲಿಂದ ಸಂಗೀತ ಕ್ಲಾಸ್‌ಗೆ ತುಂಬಾ ದೂರ ಆಗುತ್ತೆ. ಅಜ್ಜ-ಅಜ್ಜಿಗೆ ನನ್ನ ಜೊತೆ ಅಲ್ಲಿಯ ತನಕ ನಡೆಯೋಕೆ ಆಗಲ್ಲ. ನಾನು ಒಬ್ಬಳೇ ಹೋಗೋದು ಬೇಡ ಅಂತಾಳೆ ಅಮ್ಮ. ಅಜ್ಜಿ ಮನೆ ಪಕ್ಕದಲ್ಲೇ ಇದೆ ಅಂತ ಕರಾಟೆ ಕ್ಲಾಸ್‌ಗೆ ಸೇರಿಸಿದ್ದಾರೆ ನನ್ನ’ ಎಂದಳು ಸಪ್ಪೆಯಾಗಿ.
ಇಂದು ತಾಯಂದಿರಿಗೆ ನೌಕರಿಗೆ ಹೋಗುವುದೂ ಅನಿವಾರ್ಯ ಆಗಿದೆ. ದಿನನಿತ್ಯ ಮನೆ, ಕಚೇರಿ ಕೆಲಸ, ಮಕ್ಕಳನ್ನು ಶಾಲೆಗೆ ಕಳುಹಿಸುವ ಸಿದ್ಧತೆಯಲ್ಲಿ ಬ್ಯುಸಿಯಾಗಿರುವ ಅವರಿಗೆ, ಮಕ್ಕಳ ಜೊತೆಗೆ ಸಮಯ ಕಳೆಯಲು ಸಮಯವೇ ಸಿಗುವುದಿಲ್ಲ. ಅಡುಗೆ ಮಾಡಿ, ಮಕ್ಕಳಿಗೆ ತಿನ್ನಿಸಿ, ಅವರನ್ನು ಶಾಲೆಗೆ ಕಳುಹಿಸಿ, ಹೋಂ ವರ್ಕ್ ಮಾಡಿಸಿದರೆ ದೊಡ್ಡ ಜವಾಬ್ದಾರಿ ಕಳೆದಂತೆ ಎಂದು ಭಾವಿಸುವ ತಾಯಂದಿರಿಗೆ, ತಮ್ಮ ಮಗುವಿನಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪೋಷಿಸಲು ಸಾಧ್ಯವಾಗದೇ ಇರಬಹುದು.
ಸಾಮಾನ್ಯವಾಗಿ ಎಲ್ಲಾ ಮಕ್ಕಳಲ್ಲೂ ಸುಪ್ತ ಪ್ರತಿಭೆಯೊಂದು ಅಡಗಿರುತ್ತದೆ. ಅದನ್ನು ಮೊದಲು ಗುರುತಿಸಬೇಕಾದವರು ಹೆತ್ತವರು. ಆಗ ಮಾತ್ರ ಮಕ್ಕಳು ಓರ್ವ ಮಹಾನ್ ಸಂಗೀತಕಾರ, ನಿರ್ದೇಶಕ, ಕ್ರೀಡಾಪಟು ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ತಮ್ಮ ಪತ್ರಿಭೆಯನ್ನು ತೋರಿಸಲು ಸಾಧ್ಯ. ಕೆಲಸದ ಒತ್ತಡದಲ್ಲಿರುವ ಪೋಷಕರು, ಮಕ್ಕಳನ್ನು ಸರಿಯಾಗಿ ಅರಿತುಕೊಳ್ಳದಿದ್ದರೆ ಪ್ರತಿಭೆ ಹೊರಬರಲು ಸಾಧ್ಯವಿಲ್ಲ. ಹಾಗಂತ ಮಕ್ಕಳ ಮೇಲೆ ಸಲ್ಲದ ಒತ್ತಡ ಹೇರುವುದೂ ಸರಿಯಲ್ಲ. ಯಾವ ಕ್ಷೇತ್ರದಲ್ಲಿ ಮಕ್ಕಳು ಆಸಕ್ತಿ ತೋರಿಸುತ್ತಾರೋ, ಅದರಲ್ಲಿಯೇ ಮುಂದುವರಿಯುವಂತೆ ಪ್ರೇರೇಪಿಸಿದರೆ ಒಳ್ಳೆಯದು.
ಜ್ಯೋತಿ ಸಿ.