ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ನಾವು ಪ್ರವರ್ಗ 2ಎ ಮೀಸಲಾತಿಯನ್ನು ಕೇಳಿಲ್ಲ. ನಾವು ಮೊದಲಿನಿಂದಲೂ 2ಎ ಬೇಡ ಎಂದಿದ್ದೇವೆ. ಯಾಕೆಂದರೆ, ಅಲ್ಲಿ 104 ಸಮುದಾಯಗಳು ಇವೆ. ಅವರ ಹಕ್ಕು ಕಸಿದುಕೊಳ್ಳಲು ನಾವು ತಯಾರಿಲ್ಲ. 2ಎ ಪ್ರಸ್ತಾವನೆ ಮಾಡಿದ್ದು, ಕಾಂಗ್ರೆಸ್‌ನ ಹಿಂದಿನ ಮಾಜಿ, ಈಗಿನ ಹಾಲಿ ಶಾಸಕ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯಾನಂದ ಕಾಶಪ್ಪನವರ ಹೆಸರು ಪ್ರಸ್ತಾಪಿಸದೆಯೇ ದೂರಿದರು.
ನಗರದಲ್ಲಿ ಡಿ.15ರ ರವಿವಾರ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್, ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮುಖ್ಯಮಂತ್ರಿಗಳು ಸಂವಿಧಾನ ವಿರೋಧಿ ಎಂದು ಹೇಳುತ್ತಾರೆ. ಆದರೆ, ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿರುವುದೇ ಸಂವಿಧಾನ ವಿರೋಧಿಯಾಗಿದೆ. ಹಿಂದೂಗಳಲ್ಲಿ ಯಾವುದೇ ಜಾತಿಗಳಿಗೆ ಮೀಸಲಾತಿ ಕೊಟ್ಟರೆ, ಅದು ಸಂವಿಧಾನ ವಿರೋಧಿಯಲ್ಲ. ಆಂಧ್ರ, ಪಶ್ಚಿಮ ಬಂಗಾಳ ಹೈಕೋರ್ಟ್ ನಲ್ಲಿ ಧರ್ಮಾಧಾರಿತ ಮೀಸಲಾತಿ ಆ ಸಂವಿಧಾನಿಕ ಎಂಬ ಆದೇಶ ಬಂದಿದೆ. ಪಶ್ಚಿಮ ಬಂಗಾಳ ವರ್ಸಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಪೀಠ ಸಹ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮೀಸಲಾತಿ ಹೇಗೆ ಕೊಡಲಾಗಿದೆ ಎಂದೂ ತರಾಟೆಗೆ ತೆಗೆದುಕೊಂಡಿದೆ. ಅದೇ ರೀತಿ ರಾಜ್ಯದಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿದ್ಹೇಗೆ?. ಈ ಶೇ.4ರಷ್ಟು ಮೀಸಲಾತಿ ರದ್ದುಮಾಡಬೇಕು. ಒಬ್ಬ ರಾಜ್ಯದ ಮುಖ್ಯಮಂತ್ರಿಗೆ ಸಂವಿಧಾನ ಎಂದರೆ ಏನು ಅಂತಾ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದರು.
ದೇವೇಗೌಡರು ಇದ್ದಾಗ ಒಕ್ಕಲಿಗರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿದ್ದರು. ಲಿಂಗಾಯತರು ಪ್ರವರ್ಗ 3ಬಿಯಲ್ಲಿದ್ದರು. ಇದರಲ್ಲೂ ಕೆಲವರು 3ಬಿ ಮತ್ತು 2ಎನಲ್ಲೂ ಇದ್ದಾರೆ. ಸಾಮಾನ್ಯವಾಗಿ ಎಲ್ಲ ಕಡೆ ಲಾಭ ಪಡೆಯುತ್ತಿದ್ದರು. ಹೀಗಾಗಿ, ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಶೋಭಾ ಕರಂದ್ಲಾಜೆ, ಬೊಮ್ಮಾಯಿ ಸೇರಿದಂತೆ ನಾವು ಒಂದು ಸೂತ್ರವನ್ನು ಮಾಡಿ, ರಾಜ್ಯದಲ್ಲಿ ಮುಸ್ಲಿಮರಿಗೆ ಕೊಟ್ಟಿದ್ದ ಶೇ.4ರಷ್ಟು ಮೀಸಲಾತಿಯನ್ನು ತೆಗೆದುಹಾಕಲಾಗಿತ್ತು. ಒಕ್ಕಲಿಗರ ಇಡೀ ಸಮುದಾಯಗಳಿಗೆ ಶೇ.6ರಷ್ಟು ಮೀಸಲಾತಿ ಹಾಗೂ ಲಿಂಗಾಯತರು, ವೀರಶೈವ ಲಿಂಗಾಯತರು, ಮರಾಠರು, ಜೈನರು, ಕುರುಬ, ವೈಷ್ಣವರು, ಕ್ರಿಸ್ಚಿಯನರನ್ನು ಒಳಗೊಂಡು ಒಟ್ಟು ಶೇ.7ರಷ್ಟು ಮೀಸಲಾತಿ ಕೊಡಲಾಗಿತ್ತು. ಇದು ಕೇವಲ ಪಂಚಮಸಾಲಿಗಳಿಗೆ ಕೊಟ್ಟಿರಲಿಲ್ಲ. ಈ ಶೇ.7ರಷ್ಟು ಮೀಸಲಾತಿಯಲ್ಲಿ 40 ಜಾತಿಗಳು ಬರುತ್ತವೆ ಎಂದರು.
ಪ್ರವರ್ಗ 2ಎನಲ್ಲಿ 104 ಜಾತಿಗಳು, 2ಸಿಯಲ್ಲಿ ಒಕ್ಕಲಿಗರು ಸೇರಿ 67 ಜಾತಿಗಳು ಇವೆ. ನಾವು 2ಎ ಮೀಸಲಾತಿಯನ್ನೇ ಬೇಡಿಲ್ಲ. ವಿಧಾನಸೌಧದಲ್ಲೂ ನಮಗೆ 2ಎ ಬೇಡ ಎಂದು ನಾನು ಹೇಳಿರುವೆ. ಹಿಂದುಳಿದ ವರ್ಗಗಳ 104 ಸಮುದಾಯಗಳಿಗೆ ಅನ್ಯಾಯ ಮಾಡಲು ಹೇಳಿಲ್ಲ. ನಮ್ಮದೇ ಆದ ಪ್ರತ್ಯೇಕ ಪ್ರವರ್ಗ ಇದೆ. ಶೇ.7ರಷ್ಟು ಮೀಸಲಾತಿಯಲ್ಲಿ ಕುರುಬ ಕೂಡ ಬರುತ್ತದೆ. ನಾವು ಯಾವ ಸಮುದಾಯಗಳ ಬಗ್ಗೆ ತಕಾರರು ಮಾಡಿಲ್ಲ. ಇದರಲ್ಲಿ ನಮಗೆ ಕೇವಲ ಶೇ.2ರಷ್ಟು ಸಿಗಬಹುದು ಅಷ್ಟೇ. ನಾವು ಎಲ್ಲರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಪ್ರಚೋದಿಸುವುದು ಸರಿಯಲ್ಲ. ನಾವು ಮೀಸಲಾತಿ ಬೇಡಲು ಸಿದ್ದರಾಮಯ್ಯ ಬಳಿಗೆ ಹೋಗುವುದಿಲ್ಲ. ಮುಸ್ಲಿಮರ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ನಡೆದಿದೆ. ಈ ಮೀಸಲಾತಿ ರದ್ದಾದರೆ, ನಮಗೆ ತಾನಾಗಿಯೇ 2ಸಿ, 2ಡಿ ಮೀಸಲಾತಿ ಬರುತ್ತದೆ. ನಾವು ಯಾವುದೇ ಕಾರಣಕ್ಕೂ 2ಎನಲ್ಲಿ ಹೋಗುವುದಿಲ್ಲ. ಸ್ವಾಮೀಜಿಗಳಿಗೆ ನಿಂದಿಸುವುದು ಬೇಡ. ಬೆಂಕಿ ಹಚ್ಚಿದವರೇ ಕಾಂಗ್ರೆಸ್‌ನವರು. ಈಗ ಮಾತನಾಡುತ್ತಿರುವ ಶಾಸಕ ನಮ್ಮ ಸರ್ಕಾರ ಬಂದರೆ ಶೇ.15ರಷ್ಟು ಸಂಪೂರ್ಣ ಮೀಸಲಾತಿಯನ್ನು ಪಂಚಮಸಾಲಿಗಳಿಗೆ ಕೊಡುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದ. ತಲೆಯಲ್ಲಿ ಏನಾದರೂ ಇರಬೇಕಲ್ಲ ಎಂದು ಯತ್ನಾಳ್ ಅವರು ವಿಜಯಾನಂದ ಕಾಶಪ್ಪನವರ ವಿರುದ್ಧ ಹರಿಹಾಯ್ದರು.