Advertisement

ಪುತ್ತಿಗೆ ಶ್ರೀ ಪರ್ಯಾಯ: “ನಿಕ್ಲೆನ ಕ್ರಮೊಟು ಪ್ರಾರ್ಥನೆ ಮಲ್ತದ್‌ ಈ ಮರ್ದ್‌ ಗೆತೊನ್ಲೆ’…

01:37 PM Jan 18, 2024 | Team Udayavani |

“ನಿಕ್ಲೆನ ಕ್ರಮೊಟು ಪ್ರಾರ್ಥನೆ ಮಲ್ತದ್‌ ಈ ಮರ್ದ್‌ ಗೆತೊನ್ಲೆ’ ಇದು ಪುತ್ತಿಗೆ ಮಠದ ಹಿಂದಿನ ಗುರು, ಹಳೆ ತಲೆಮಾರಿನವರಾದ
ಶ್ರೀಸುಜ್ಞಾನೇಂದ್ರತೀರ್ಥರ ರೋಗಿ ಯೊಬ್ಬರಿಗೆ ಸಲಹೆ. ಸಂದರ್ಭ ಕ್ರೈಸ್ತ ಮತೀಯ ಮಹಿಳೆಯೊಬ್ಬರು ಕಾಯಿಲೆಗೆ ಔಷಧಿಗಾಗಿ ಬಂದಾಗ… ಈ ಮಾತಿಗೆ ಸಾಕ್ಷಿ ಉಡುಪಿ ರಥಬೀದಿಯಲ್ಲಿರುವ  ಸುಧೀಂದ್ರತೀರ್ಥ ಔಷಧ ಭಂಡಾರದ ಸ್ಥಾಪಕ 97ರ ಹರೆಯದ ಪಂಡಿತ ಲಕ್ಷ್ಮೀನಾರಾಯಣ ಭಟ್‌.

Advertisement

ಪರಮತೀಯ ಮಹಿಳೆಯೊಬ್ಬಳು ಆರೋಗ್ಯ ಸಮಸ್ಯೆಗೆ ಬಂದಾಗ “ನಿಮ್ಮ ಕ್ರಮ, ನಂಬಿಕೆಯಂತೆ ಪ್ರಾರ್ಥನೆ ಮಾಡಿ ಈ ಔಷಧ ತೆಗೆದುಕೊಳ್ಳಿ’ ಎಂದು ಹೇಳಬೇಕಾದರೆ ಹಳೆಯ ಕಾಲದ ಆ “ವೈದ್ಯಸನ್ಯಾಸಿ’ಯ ಧಾರ್ಮಿಕ ಹೃದಯ ವೈಶಾಲ್ಯ ಹೇಗಿದ್ದಿರಬಹುದು? ಇದು 1974ರ ವರೆಗೆ ಪೀಠಾಧಿಪತಿಯಾಗಿದ್ದವರ ನಡವಳಿಕೆ (ಜನನ 1905, ಆಶ್ರಮ 1918, ನಿರ್ಯಾಣ 1974).

ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಗುರುಗಳೇ ಈ ಶ್ರೀಸುಜ್ಞಾನೇಂದ್ರತೀರ್ಥರು. ಆಯುರ್ವೇದ ವೈದ್ಯಕೀಯ ಜ್ಞಾನವನ್ನು ಹೊಂದಿದ್ದ ಶ್ರೀಸುಜ್ಞಾನೇಂದ್ರತೀರ್ಥರು ಪುತ್ತಿಗೆ ಮಠ ಮತ್ತು ಪಾಡಿಗಾರಿನ ಪುತ್ತಿಗೆ ಶಾಖಾ ಮಠದಲ್ಲಿ ಸ್ವತಃ ಔಷಧ ತಯಾರಿಸುತ್ತಿದ್ದರು ಮತ್ತು ಕೆಲವು ಔಷಧಗಳನ್ನು ಲಕ್ಷ್ಮೀನಾರಾಯಣ ಭಟ್ಟರಲ್ಲಿ ಹೇಳಿ ಮಾಡಿಸುತ್ತಿದ್ದರು. “ಇವರು ಎಲ್ಲಿ ಕಲಿತರೋ ಗೊತ್ತಿಲ್ಲ. ಸಂಚಾರದಲ್ಲಿಯೇ ಹೆಚ್ಚಿಗೆ ಇರುತ್ತಿದ್ದರು’ ಎನ್ನುತ್ತಾರೆ ಲಕ್ಷ್ಮೀನಾರಾಯಣ ಭಟ್‌.

ಇವರು ಔಷಧಿಯನ್ನು ಚಿನ್ನ, ಬೆಳ್ಳಿ, ಇಂಗ್ಲಿಕ, ಬೆಟ್ಟಿಲ, ಸಣ್ಣ ಏಲಕ್ಕಿಯಂತಹ ಸಾಮಗ್ರಿಗಳನ್ನು ಹಾಕಿ ತಯಾರಿಸುತ್ತಿದ್ದರು. ಈಗ ಆಯುರ್ವೇದ ಔಷಧ ತಯಾರಿಸುವಾಗ ಹಾಕುವಂತೆ ಚಿನ್ನದ ಭಸ್ಮ ಹಾಕುವುದಲ್ಲ, ಚಿನ್ನದ ತೆಳುವಾದ ಹಾಳೆಯನ್ನೇ ಹಾಕುತ್ತಿದ್ದರು. ಹಿರಿಯ ಆಯುರ್ವೇದ ಪಂಡಿತರ ಪರಿಚಯ ಅವರಿಗಿತ್ತು. ಅವರೊಡನೆ ಚರ್ಚಿಸುತ್ತಿದ್ದರು.

ಬೃಹತ್ತಾದ ಪುಸ್ತಕಗಳಿದ್ದವು. ರೋಗಿಗಳ ರೋಗ ಲಕ್ಷಣ, ಆಹಾರ ಕ್ರಮ ಇತ್ಯಾದಿಗಳನ್ನು ತಿಳಿದು ಲೇಹ, ತೈಲ, ಕಷಾಯಗಳನ್ನು
ಕೊಡುತ್ತಿದ್ದರು. ಭಟ್‌ ಹೇಳುವ ಪ್ರಕಾರ ಎಲ್ಲ ಮಠಗಳ ಸ್ವಾಮೀಜಿಯವರಿಗೂ ಪರ್ಯಾಯವನ್ನು ನಡೆಸಲು ಹಣಕಾಸು ಮುಗ್ಗಟ್ಟು ಇದ್ದಿತ್ತು. ಹೀಗಿದ್ದರೂ ಧರ್ಮಾರ್ಥವಾಗಿ ಔಷಧ ಕೊಡುತ್ತಿದ್ದರು.

Advertisement

“ಹೀಗೆ ಮಾಡಿದರೆ ಹೇಗೆ ಸ್ವಾಮಿ ನಡೆಯುತ್ತದೆ?’ ಎಂದು ಲಕ್ಷ್ಮೀನಾರಾಯಣ ಭಟ್‌ ಕೇಳಿದಾಗ “ಪರಮಾತ್ಮನಿದ್ದಾನೆ. ಸಂಪಾದನೆಯಲ್ಲಿ ಒಂದು ಭಾಗ ಧರ್ಮಕ್ಕೆ, ಇನ್ನೊಂದು ಪಾಲು ಮಠದ ಪೂಜೆ ಪುರಸ್ಕಾರದಂತಹ ಖರ್ಚಿಗೆ’ ಎನ್ನುತ್ತಿದ್ದರು. ಬಹುತೇಕ ರೋಗಿಗಳು ಲಕ್ಷ್ಮೀನಾರಾಯಣ ಭಟ್ಟರ ಮೂಲಕವೇ ಸ್ವಾಮೀಜಿಯವರನ್ನು ಭೇಟಿಯಾಗಿ ಔಷಧಿ ಪಡೆಯುತ್ತಿದ್ದರು.

ಈಗ ಕುತ್ಪಾಡಿಯಲ್ಲಿರುವ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಆರಂಭದಲ್ಲಿ ಆಡಳಿತ ಮಂಡಳಿಯಲ್ಲಿ ಶ್ರೀಸುಜ್ಞಾನೇಂದ್ರತೀರ್ಥರು ಇದ್ದರು. ಇದಕ್ಕಾಗಿಯೇ ಉಡುಪಿ ಹೊರವಲಯದ ಪಾಡಿಗಾರಿನ ಪುತ್ತಿಗೆ ಮಠದಲ್ಲಿ ಗಿಡಮೂಲಿಕೆಯ ವನವನ್ನು ನಿರ್ಮಿಸಿದ್ದರು. ಇವರ ಆಯುರ್ವೇದದ ಜ್ಞಾನಕ್ಕಾಗಿ ಆಂಧ್ರ ವಿಶ್ವವಿದ್ಯಾಲಯ “ವಿದ್ಯಾವಲ್ಲಭ’ ಎಂಬ ಬಿರುದು ನೀಡಿ ಗೌರವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next