Advertisement

Young India ಟಿ20 ಸರಣಿ; ಹೊಸ ಪೀಳಿಗೆಯ ಕ್ರಿಕೆಟಿಗರ ಆಟ ಆರಂಭ

11:45 PM Jul 05, 2024 | Team Udayavani |

ಹರಾರೆ: ಭಾರತ ತಂಡ ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್‌ ಗೆದ್ದು ತವರಿಗೆ ಆಗಮಿಸಿದೆ. ಇದೇ ವೇಳೆ ಭಾರತದ ಮತ್ತೂಂದು ತಂಡ 5 ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆಗೆ ಬಂದಿಳಿದಿದೆ. ಇದು ಶುಭಮನ್‌ ಗಿಲ್‌ ನೇತೃತ್ವದ ಯುವ ಪಡೆ. “ಜೆನ್‌-ನೆಕ್ಸ್ಟ್’ ಎಂದು ಕರೆಯಲ್ಪಡುವ ಮುಂದಿನ ಪೀಳಿಗೆಯ ತಂಡ. ಶನಿವಾರ ಮೊದಲ ಮುಖಾಮುಖಿ.

Advertisement

ವಿಶ್ವಕಪ್‌ ಗೆಲುವಿನ ಬೆನ್ನಲ್ಲೇ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜ ಮೊದಲಾದ ಸೀನಿಯರ್ ನೇಪಥ್ಯಕ್ಕೆ ಸರಿದ ಕಾರಣ ಮುಂದಿನೆರಡು ವರ್ಷಗಳ ಒಳಗೆ ಬಲಾಡ್ಯ ತಂಡವೊಂದನ್ನು ಕಟ್ಟುವ ಮಹತ್ವದ ಜವಾಬ್ದಾರಿ ಬಿಸಿಸಿಐ ಮೇಲಿದೆ. ಈ ಕಾರಣಕ್ಕಾಗಿ ವಿಶ್ವಕಪ್‌ ತಂಡಕ್ಕೆ ಹೊರತಾದ, ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರ ಪಡೆಯೊಂದನ್ನು ರಚಿಸಿ ಜಿಂಬಾಬ್ವೆಗೆ ಕಳುಹಿಸಿದೆ. 2026ರಲ್ಲಿ ಭಾರತದಲ್ಲೇ ನಡೆಯುವ ಟಿ20 ವಿಶ್ವಕಪ್‌ ಹೊತ್ತಿಗೆ ಈ ತಂಡ, ಇಲ್ಲಿನ ಆಟಗಾರರು, ಮುಂದೆ ತಂಡವನ್ನು ಸೇರುವ ಕ್ರಿಕೆಟಿಗರೆಲ್ಲ ಪಕ್ವಗೊಂಡು ಹೋರಾಟಕ್ಕೆ ಅಣಿಯಾಗಬೇಕು. ಇದಕ್ಕೆ ಜಿಂಬಾಬ್ವೆ ಎದುರಿನ ಸರಣಿ ನಾಂದಿಯಾಗಬೇಕಿದೆ.

ಆತಿಥೇಯ ಜಿಂಬಾಬ್ವೆ ಒಂದು ಸಾಮಾನ್ಯ ತಂಡ. ಡೇವಿಡ್‌ ಹಾಟನ್‌, ಫ್ಲವರ್‌ ಬ್ರದರ್ ಅವರ ಕಾಲದಂತೆ ಬಲಿಷ್ಠವಲ್ಲ. ಇತ್ತೀಚಿನ ವರ್ಷಗಳಲ್ಲಿ ವಿಶ್ವಕಪ್‌ ಆಡುವ ಅವಕಾಶ ಕೂಡ ಈ ಆಫ್ರಿಕನ್‌ ದೇಶಕ್ಕೆ ಸಿಗುತ್ತಿಲ್ಲ. ಮೊನ್ನೆಯ ಟಿ20 ವಿಶ್ವಕಪ್‌ನಲ್ಲೂ ಜಿಂಬಾಬ್ವೆ ಆಡಿರಲಿಲ್ಲ. ಆದರೆ “ವಿಶ್ವಕಪ್‌ ವಿಜೇತ’ ಭಾರತ ತಂಡದೆದುರು ಆಡುವುದನ್ನು ತಂಡ ಎದುರು ನೋಡುತ್ತಿದೆ. “ವಿಶ್ವಕಪ್‌ ಹೀರೋಗಳಿಗೆ ಸ್ವಾಗತ’ ಎಂದೇ ಜಿಂಬಾಬ್ವೆ ಈ ಯುವ ತಂಡವನ್ನು ಬರಮಾಡಿಕೊಂಡಿದೆ.

ಐಪಿಎಲ್‌ ಹೀರೋಸ್‌
ಭಾರತ ತಂಡದ ಬಹುತೇಕ ಆಟಗಾರರು 2024ನೇ ಐಪಿಎಲ್‌ನಲ್ಲಿ ಮಿಂಚಿದ ಹೀರೋಗಳೇ ಆಗಿದ್ದಾರೆ. ಟ್ರ್ಯಾವಿಸ್‌ ಹೆಡ್‌ ಜತೆಗೂಡಿ ಸನ್‌ರೈಸರ್ ಹೈದರಾಬಾದ್‌ ತಂಡದ ಬ್ಯಾಟಿಂಗ್‌ಗೆ ಸ್ಫೋಟಕ ಆರಂಭವನ್ನಿತ್ತ ಅಭಿಷೇಕ್‌ ಶರ್ಮ, ರಾಜಸ್ಥಾನ್‌ ರಾಯಲ್ಸ್‌ ತಂಡದ ಬ್ಯಾಟಿಂಗ್‌ ಸರದಿಗೆ ಬಲ ತುಂಬಿದ ರಿಯಾನ್‌ ಪರಾಗ್‌, ಕೀಪರ್‌ ಧ್ರುವ ಜುರೆಲ್‌ ಇವರಲ್ಲಿ ಪ್ರಮುಖರು.

ಟಿ20 ವಿಶ್ವಕಪ್‌ ತಂಡದಲ್ಲಿದ್ದೂ ಆಡುವ ಅವಕಾಶ ಪಡೆಯದ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ ಕೂಡ ತಂಡದಲ್ಲಿದ್ದಾರೆ. ಆದರೆ ಇವರು ಹರಾರೆಗೆ ಬರುವಾಗ ವಿಳಂಬವಾಗಲಿದೆ. ಗಾಯಾಳು ನಿತೀಶ್‌ ರೆಡ್ಡಿ ಬದಲು ಅವಕಾಶ ಪಡೆದ ಶಿವಂ ದುಬೆ ಕೂಡ 3ನೇ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.

Advertisement

ನಾಯಕ ಶುಭಮನ್‌ ಗಿಲ್‌ ಟಿ20 ವಿಶ್ವಕಪ್‌ ತಂಡದ ಮೀಸಲು ಆಟಗಾರನಾಗಿದ್ದರು. ಇವರಿಲ್ಲಿ ಋತುರಾಜ್‌ ಗಾಯಕ್ವಾಡ್‌ ಜತೆಗೂಡಿ ಇನ್ನಿಂಗ್ಸ್‌ ಆರಂಭಿಸಬಹುದು. ಅಥವಾ ಗಾಯಕ್ವಾಡ್‌ 3ನೇ ಕ್ರಮಾಂಕದಲ್ಲಿ ಬಂದು, ಅಭಿಷೇಕ್‌ ಶರ್ಮ ಓಪನಿಂಗ್‌ ಬರಲೂಬಹುದು. ಬ್ಯಾಟಿಂಗ್‌ ಸರದಿಯನ್ನು ಬೆಳೆಸಲು ರಿಯಾನ್‌ ಪರಾಗ್‌, ರಿಂಕು ಸಿಂಗ್‌, ಧ್ರುವ ಜುರೆಲ್‌, ಜಿತೇಶ್‌ ಶರ್ಮ, ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಇದ್ದಾರೆ. ಗಾಯಕ್ವಾಡ್‌ ಕಳೆದ ಏಷ್ಯಾಡ್‌ನ‌ಲ್ಲಿ ಟೀಮ್‌ ಇಂಡಿಯಾವನ್ನು ಮುನ್ನಡೆಸಿ ಚಿನ್ನದ ಪದಕ ಗೆದ್ದಿರುವುದನ್ನು ಮರೆಯುವಂತಿಲ್ಲ.

ಭಾರತದ ಯುವ ಬೌಲಿಂಗ್‌ ವಿಭಾಗ ಹರಾರೆ ಟ್ರ್ಯಾಕ್‌ನಲ್ಲಿ ಅದೆಂಥ ಮ್ಯಾಜಿಕ್‌ ಮಾಡಲಿದೆ ಎಂಬುದೊಂದು ಕುತೂಹಲ. ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ ಟ್ರಂಪ್‌ಕಾರ್ಡ್‌ ಆಗುವ ಸಾಧ್ಯತೆ ಇದೆ. ಆವೇಶ್‌ ಖಾನ್‌, ಖಲೀಲ್‌ ಅಹ್ಮದ್‌, ಮುಕೇಶ್‌ ಕುಮಾರ್‌, ಹರ್ಷಿತ್‌ ರಾಣಾ ಅವರಿಗೆ ಇದೊಂದು ಅಗ್ನಿಪರೀಕ್ಷೆ.

ಅನುಭವಿ ನಾಯಕ
ಜಿಂಬಾಬ್ವೆ ಕೂಡ “ತಾಜಾ ಕ್ರಿಕೆಟ್‌ ಮುಖ’ಗಳನ್ನು ಹೊಂದಿರುವ ತಂಡ. ನಾಯಕ ಸಿಕಂದರ್‌ ರಝ ಅವರಷ್ಟೇ ಅನುಭವಿ. ತವರಿನ ಸರಣಿಯಾದ ಕಾರಣ ತಂಡ ಗಂಭೀರವಾಗಿ ಆಡಬೇಕಾದ ಅಗತ್ಯವಿದೆ. ಜಿಂಬಾಬ್ವೆ ಕ್ರಿಕೆಟಿನ ಭವಿಷ್ಯದ ದೃಷ್ಟಿಯಿಂದಲೂ ಇದು ಅನಿವಾರ್ಯ.

ಟಿ20 ಸರಣಿ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ
ಜುಲೈ 6 1ನೇ ಟಿ20 ಹರಾರೆ ಸಂಜೆ 4.30
ಜುಲೈ 7 2ನೇ ಟಿ20 ಹರಾರೆ ಸಂಜೆ 4.30
ಜುಲೈ 10 3ನೇ ಟಿ20 ಹರಾರೆ ಸಂಜೆ 4.30
ಜುಲೈ 13 4ನೇ ಟಿ20 ಹರಾರೆ ಸಂಜೆ 4.30
ಜುಲೈ 14 5ನೇ ಟಿ20 ಹರಾರೆ ಸಂಜೆ 4.30

ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next