Advertisement

ಕಳಸಾ ಬಂಡೂರಿ ನೀರು ತಂದೇ ಕಾಲಿಡುವೆ

12:37 PM Oct 29, 2017 | Team Udayavani |

ಧಾರವಾಡ: ಉತ್ತರ ಕರ್ನಾಟಕ ಭಾಗದ ಅನ್ನದಾತರಿಗೆ ತುರ್ತಾಗಿ ಬೇಕಾಗಿರುವ ಕಳಸಾ-ಬಂಡೂರಿ ನೀರನ್ನು ರಾಜ್ಯಕ್ಕೆ ಪಡೆದ ಮೇಲೆಯೇ ಈ ಭಾಗದಲ್ಲಿ ಸಂಚರಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶಪಥ ಮಾಡಿದರು. 

Advertisement

ಇಲ್ಲಿನ ಸವದತ್ತಿ ರಸ್ತೆ ಬಸವ ಮಾರ್ಗದಲ್ಲಿ ನಿರ್ಮಿಸಿರುವ ಪದ್ಮಾವತಿ ಹತ್ತಿ ಕಾರ್ಖಾನೆ ಉದ್ಘಾಟಿಸಿ ಮಾತನಾಡಿದರು. ಕಳಸಾ-ಬಂಡೂರಿ ನೀರು ಉತ್ತರ ಕರ್ನಾಟಕ ಭಾಗದ ರೈತರಿಗೆ ಎಷ್ಟು ಅಗತ್ಯವಾಗಿ ಬೇಕೆಂಬುದರ ಅರಿವು ನನಗಿದೆ. ಈಗಾಗಲೇ ಈ ಬಗ್ಗೆ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಎರಡೂರು ಸುತ್ತಿನ ಮಾತುಕತೆ ನಡೆಸಲಾಗಿದೆ.

ಈ ಸಂಬಂಧ ನಾನು ಗೋವಾದ ಮುಖ್ಯಮಂತ್ರಿ ಮನೋಹರ್‌ ಪರ್ರಿಕ್ಕರ್‌ ಮತ್ತು ಪ್ರಧಾನಿ ನರೇಂದ್ರ ಮೋದಿವರೊಂದಿಗೆ 10 ದಿನದೊಳಗೆ ಚರ್ಚಿಸುತ್ತೇನೆ. ನವ ಕರ್ನಾಟಕ ಯಾತ್ರೆ ಈ ಭಾಗಕ್ಕೆ ಬರುವ ಮುಂಚೆಯೇ 7.56 ಟಿಎಂಸಿ ಕುಡಿಯುವ ನೀರನ್ನು ಕಳಸಾ ಬಂಡೂರಿಯಿಂದ ಮಲಪ್ರಭೆಗೆ ಹರಿಸುವ ಕೆಲಸ ಮಾಡುತ್ತೇನೆ ಎಂದರು. 

ಸೋನಿಯಾಗಾಂಧಿ ಮತ್ತು ಕಾಂಗ್ರೆಸ್‌ನವರಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ. ನಾನು ರಾಜ್ಯದ ಉಪಮುಖ್ಯಮಂತ್ರಿ ಇದ್ದಾಗ ಹಣಕಾಸು ನೆರವು ನೀಡಿ ಕಾಮಗಾರಿ ಆರಂಭಿಸಿಯೇ ಬಿಟ್ಟಿದ್ದೆ. ಆದರೆ ಕಾಂಗ್ರೆಸ್‌ ಪಕ್ಷದ ನಿಲುವಿನಿಂದ ಯೋಜನೆ ಸಂಕಷ್ಟಕ್ಕೆ ಸಿಲುಕಿತು. ಇದು ಹಿಂದಿನವರು ಮಾಡಿದ ಪ್ರತಿಫಲ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು. 

ಸಾಲ ಮನ್ನಾ ನಿಮ್ಮ ಹೊಣೆ: ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಎರಡು ಬಾರಿ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಸಹಕಾರ ಬ್ಯಾಂಕ್‌ಗಳಲ್ಲಿನ  ಸಾಲವನ್ನು ಮಾತ್ರ ಮನ್ನಾ ಮಾಡಿ ವಾಣಿಜ್ಯ ಬ್ಯಾಂಕ್‌ ಸಾಲಮನ್ನಾ ಮಾಡಲು ನಾಮೇಷ ಎನಿಸುತ್ತಿದ್ದಾರೆ.

Advertisement

ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಕೂಡಲೇ ವಾಣಿಜ್ಯ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಹಣ ಕೊಟ್ಟರೂ ರಾಜ್ಯ ಸರ್ಕಾರ ಅದನ್ನು ಬಳಸಿಕೊಂಡು ಸರಿಯಾಗಿ ಬರ ನಿರ್ವಹಣೆ ಮಾಡುತ್ತಿಲ್ಲ ಎಂದು ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರೇ ಹೇಳಿದ್ದಾರೆ. 

ಇದಕ್ಕಿಂತ ಪುರಾವೆ ನಿಮಗೇನು ಬೇಕು? ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು. ಡಿಸೆಂಬರ್‌ 21ಕ್ಕೆ ಹುಬ್ಬಳ್ಳಿಯಲ್ಲಿ ಬೃಹತ್‌ ಬಿಜೆಪಿ ಸಮಾವೇಶ ನಡೆಯಲಿದ್ದು, ಇದರಲ್ಲಿ 5 ಲಕ್ಷ ಜನರನ್ನು ಸೇರಿಸಲಾಗುವುದು. ಇದಕ್ಕೆ ಶೆಟ್ಟರ್‌ ಮತ್ತು ಜೋಷಿ ಶ್ರಮಿಸಲಿದ್ದಾರೆ ಎಂದರು. 

ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ಬಿಜೆಪಿ ಐದು ವರ್ಷದ ಆಡಳಿತದ ಅವಧಿಯಲ್ಲಿ ಕೇಂದ್ರದತ್ತ ಬೊಟ್ಟು ಮಾಡದೇ ರೈತರ  ಸಾಲ ಮನ್ನಾ ಮಾಡಿತ್ತು. ಇದೀಗ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿನ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ 40 ಸಾವಿರ ಕೋಟಿ ರೂ.ನಷ್ಟು ಸಾಲ ಮನ್ನಾ ಮಾಡಿವೆ.

ಇದನ್ನೇ ಯಾಕೆ ರಾಜ್ಯ ಸರ್ಕಾರ ಮಾಡಬಾರದು ಎಂದು ಪ್ರಶ್ನಿಸಿದರು. ಇದೇ ವೇಳೆ ಉದ್ಯಮಿ ಹಾಗೂ ರಾಜಕಾರಣಿ ತವನಪ್ಪ ಅಷ್ಟಗಿ ದಂಪತಿಯನ್ನು ಸನ್ಮಾನಿಸಲಾಯಿತು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಪ್ರಹ್ಲಾದ ಜೋಷಿ ಮಾತನಾಡಿದರು.

ಮಾಜಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ವೀರಭದ್ರಪ್ಪ ಹಾಲಹರವಿ, ಮೋಹನ ಲಿಂಬಿಕಾಯಿ, ಸೀಮಾ ಮಸೂತಿ, ಎಸ್‌.ಐ.ಚಿಕ್ಕನಗೌಡರ, ಶಿವಾನಂದ ಅಂಬಡಗಟ್ಟಿ, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಸಿ.ಎಂ.ನಿಂಬಣ್ಣವರ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next