ಬೆಂಗಳೂರು: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 10 ವಿವಿಧ ಕ್ಷೇತ್ರಗಳಲ್ಲಿನ 20 ವರ್ಷದೊಳಗಿನ ಸಾಧಕ ಯುವಕರು ಮತ್ತು ಯುವತಿಯರನ್ನು ಗುರುತಿಸಿ ಉತ್ತೇಜನ ನೀಡುವ ಯೊನೆ 20 ಅಂಡರ್ ಟ್ವೆಂಟಿ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಸುಸ್ಥಿರಾಭಿವೃದ್ಧಿ, ಪ್ರದರ್ಶನ, ಕಲೆ, ನಟನೆ, ಉದ್ಯಮಶೀಲತೆ, ಅನ್ವೇಷಣೆ, ಕ್ರೀಡೆ, ಜಾಗತಿಕ ಭಾರತೀಯ, ವಿಕಲಚೇತನ ಕ್ಷೇತ್ರದ ತಲಾ 20 ಯುವಕ, ಯುವತಿಯರನ್ನು ಗೌರವಿಸಲಿದೆ.
ಎಸ್‌ಬಿಐ ಯೊನೊ 20 ಅಂಡರ್ ಟ್ವೆಂಟಿ ಕಾರ್ಯಕ್ರಮ 2018ರಲ್ಲಿ ಸುಮಾರು 100 ಮಂದಿ ಯುವಸಾಧಕರನ್ನು ಗುರುತಿಸುವ ಮೂಲಕ ಆರಂಭಿಸಲಾಗಿತ್ತು. 200 ಮಂದಿ ಪಟ್ಟಿಯಿಂದ ತಲಾ 30 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಈ ಪಟ್ಟಿಯನ್ನು ಎಂಟು ಮಂದಿ ತೀರ್ಪುಗಾರರ ತಂಡ ಪರಿಶೀಲಿಸಿ ತಲಾ 20 ಮಂದಿಯನ್ನು ಆಯ್ಕೆ ಮಾಡಿದೆ.
ಫೆ.4 ರಂದು ಸನ್ಮಾನ: ಬಾಲಿವುಡ್ ನಟರಾದ ಫೈಸಲ್ ಖಾನ್, ಜೈರಾ ವಾಸಿಮ್, ಅಥೀಟ್ ಹಿಮಾದಾಸ್, ಕ್ರಿಕೆಟರ್ ಪೃಥ್ವಿ ಶಾ, ಎನ್‌ಆರ್‌ಐ ಸ್ಪರ್ಶ ಶಾ ಮತ್ತಿತರು ಅಂತಿಮ ಪಟ್ಟಿಯಲ್ಲಿದ್ದು, ಜ.27 ರವರೆಗೆ ಆನ್‌ಲೈನ್ ವೋಟಿಂಗ್ ನಡೆಯಲಿದೆ. ಎಸ್‌ಬಿಐ ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಪ್ರತಿ ಕ್ಷೇತ್ರದಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದಾಗಿದೆ. ವಿಜೇತರನ್ನು ಫೆ.4 ರಂದು ಬೆಂಗಳೂರಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
ತೀರ್ಪುಗಾರ ತಂಡದಲ್ಲಿ ಬಾಲಿವುಡ್ ನಟಿಯರಾದ ಸೋಹಾ ಅಲಿಖಾನ್, ದಿಯಾ ಮಿರ್ಜಾ, ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದಾರ್, ಮೈಕ್ರೋಸಾಫ್ಟ್ ಇಂಡಿಯಾ ಎಂಡಿ ಶಶಿ ಶ್ರೀಧರನ್, ಎನ್‌ಪಿಸಿಐ ಎಂಡಿ ಮತ್ತು ಸಿಇಒ ದಿಲೀಪ್ ಅಸ್ಬೆ, ಸಾಮಾಜಿಕ ಮಾಧ್ಯಮದ ಮಲ್ಲಿಕಾ ದುಹಾ ಇದ್ದಾರೆ.
ಯುವಜನರೊಂದಿಗೆ ಉತ್ತಮ ಸಂಬಂಧ: ಯುವಜನರೊಂದಿಗೆ ಸಂಬಂಧವನ್ನು ಬಲಪಡಿಸಲು ಕೈಗೊಂಡಿರುವ ಉದ್ದೇಶ ಇದಾಗಿದೆ. ಯೊನೊ 20 ಅಂಡರ್ ಟ್ವೆಂಟಿ ವಿಜೇತರು ದೇಶದ ಯುವಜನರ ಮೇಲೆ ಮತ್ತಷ್ಟು ಪ್ರಭಾವ ಬೀರಲಿದ್ದು, ಹೊಸ ಸಾಧನೆಗೆ ಪ್ರೇರೇಪಣೆ ನೀಡಲಿದ್ದಾರೆ. ಆ ನಿಟ್ಟಿನಲ್ಲಿ ಎಸ್‌ಬಿಐ ಯುವಸಾಧಕರಿಗೆ ಅಭಿನಂದನೆ ಸಲ್ಲಿಸಲಿದೆ ಎಂದು ಕಾರ್ಪೊರೇಟ್ ಕ್ಲೈಂಟ್ ಸಮೂಹ ಮತ್ತು ಐಟಿ ವಿಭಾಗದ ಎಂಡಿ ಅರಿಜಿತ್ ಬಸು ತಿಳಿಸಿದ್ದಾರೆ.