ಇಂದೋರ್: “ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ’ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಘಾತಕ ಬೌಲಿಂಗ್ ಮೂಲಕ ತಮಿಳುನಾಡು ಮೇಲೆ ಸವಾರಿ ಮಾಡಿದ ಕರ್ನಾಟಕ 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿದೆ.
ರವಿವಾರದ ಮುಖಾಮುಖಿಯಲ್ಲಿ ಬ್ಯಾಟಿಂಗ್ಗೆ ಇಳಿಸಲ್ಪಟ್ಟ ತಮಿಳುನಾಡು ಸರಿಯಾಗಿ 20 ಓವರ್ಗಳಲ್ಲಿ ಕೇವಲ 90 ರನ್ನಿಗೆ ಕುಸಿಯಿತು. ಜವಾಬು ನೀಡಿದ ಕರ್ನಾಟಕ 11.3 ಓವರ್ಗಳಲ್ಲಿ 3 ವಿಕೆಟಿಗೆ 93 ರನ್ ಮಾಡಿ ಸುಲಭ ಜಯ ಸಾಧಿಸಿತು. ಇದು 5 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 3ನೇ ಗೆಲುವು. ಇದರೊಂದಿಗೆ ಕರ್ನಾಟಕದ ರನ್ರೇಟ್ನಲ್ಲಿ ಹೆಚ್ಚಳವಾಗಿದ್ದು, 2.193ಕ್ಕೆ ಏರಿದೆ.
ಕರ್ನಾಟಕ ಸಾಂ ಕ ಬೌಲಿಂಗ್ ಮೂಲಕ ತಮಿಳುನಾಡಿನ ಮೇಲೆರಗಿತು. ವಾಸುಕಿ ಕೌಶಿಕ್ ಮತ್ತು ಮನೋನ್ ಭಾಂಡಗೆ ತಲಾ 3 ವಿಕೆಟ್, ವಿದ್ಯಾಧರ ಪಾಟೀಲ್ 2 ವಿಕೆಟ್, ವಿಜಯ್ಕುಮಾರ್ ವೈಶಾಖ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಕೆಡವಿದರು. ತಮಿಳುನಾಡಿನ 4 ವಿಕೆಟ್ 7 ರನ್ನಿಗೆ ಹಾರಿ ಹೋಗಿತ್ತು. 24 ರನ್ ಮಾಡಿದ ವರುಣ್ ಚಕ್ರವರ್ತಿ ಅವರದೇ ಹೆಚ್ಚಿನ ಗಳಿಕೆ. ನಾಯಕ ಶಾರುಖ್ ಖಾನ್ 19 ರನ್, ಮೊಹಮ್ಮದ್ ಅಲಿ 15 ರನ್ ಮಾಡಿದರು.
ಚೇಸಿಂಗ್ ವೇಳೆ ಮನೀಷ್ ಪಾಂಡೆ (42) ಮತ್ತು ನಾಯಕ ಮಾಯಾಂಕ್ ಅಗರ್ವಾಲ್ (30) ಇಬ್ಬರೇ ಸೇರಿ ತಮಿಳುನಾಡು ಮೊತ್ತವನ್ನು ಮೀರಿಸುವ ಸೂಚನೆ ನೀಡಿದರು. ಆದರೆ 10ನೇ ಓವರ್ನಲ್ಲಿ ಗುರ್ಜಪ್ರೀತ್ ಸಿಂಗ್ ಇವರಿಬ್ಬರನ್ನೂ ಔಟ್ ಮಾಡಿದರು. ಮೊದಲ ವಿಕೆಟಿಗೆ 9.1 ಓವರ್ಗಳಲ್ಲಿ 76 ರನ್ ಒಟ್ಟುಗೂಡಿತ್ತು. ಔಟಾದ ಮತ್ತೋರ್ವ ಆಟಗಾರ ಸ್ಮರಣ್ ರವಿಚಂದ್ರನ್ (1). ಕೃಷ್ಣನ್ ಶ್ರೀಜಿತ್ (9) ಮತ್ತು ಅಭಿನವ್ ಮನೋಹರ್ (2) ಅಜೇಯರಾಗಿ ಉಳಿದರು.
ಕರ್ನಾಟಕ ತನ್ನ ಕೊನೆಯ 2 ಪಂದ್ಯಗಳಲ್ಲಿ ಬರೋಡ (ಡಿ. 3) ಮತ್ತು ಗುಜರಾತ್ (ಡಿ. 5) ವಿರುದ್ಧ ಆಡಲಿದೆ.
ಸಂಕ್ಷಿಪ್ತ ಸ್ಕೋರ್
ತಮಿಳುನಾಡು-20 ಓವರ್ಗಳಲ್ಲಿ 90 (ವರುಣ್ ಚಕ್ರವರ್ತಿ 24, ಶಾರುಖ್ ಖಾನ್ 19, ಮೊಹಮ್ಮದ್ ಅಲಿ 15, ಕೌಶಿಕ್ 10ಕ್ಕೆ 3, ಭಾಂಡಗೆ 19ಕ್ಕೆ 3, ಪಾಟೀಲ್ 20ಕ್ಕೆ 2). ಕರ್ನಾಟಕ-11.3 ಓವರ್ಗಳಲ್ಲಿ 3 ವಿಕೆಟಿಗೆ 93 (ಪಾಂಡೆ 42, ಅಗರ್ವಾಲ್ 30, ಗುರ್ಜಪ್ರೀತ್ 15ಕ್ಕೆ 2).
ಪಂದ್ಯಶ್ರೇಷ್ಠ: ಮನೀಷ್ ಪಾಂಡೆ.