ಲಕ್ನೋ : ಅಯೋಧ್ಯೆಯಲ್ಲಿ ನೂರು ಮೀಟರ್ ಎತ್ತರದ ಶ್ರೀರಾಮ ದೇವರ ವಿಗ್ರಹವನ್ನು ಸ್ಥಾಪಿಸಲು ಉತ್ತರ ಪ್ರದೇಶ ಸರಕಾರ ಯೋಜಿಸಿದೆ.
ಅಯೋಧ್ಯೆಯಲ್ಲಿನ ಸರಯೂ ನದೀ ತೀರದಲ್ಲಿ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಉದ್ದೇಶಿಸಿರುವ ಬಗ್ಗೆ ರಾಜಭವನವು ಹೊರಡಿಸಿರುವ ಪ್ರಕಟನೆಯನ್ನು ವರದಿಗಳು ಉಲ್ಲೇಖೀಸಿವೆ.
ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯಕ್ ಅವರಿಗೆ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಈ ಕುರಿತ ಪ್ರಸ್ತಾವವನ್ನು ಸಲ್ಲಿಸಿದೆ. ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.
ಉತ್ತರ ಪ್ರದೇಶ ಪ್ರವಾಸೋದ್ಯ ಸಚಿವಾಲಯವು ಈಚೆಗೆ ಬಿಡುಗಡೆ ಮಾಡಿದ್ದ ಟೂರಿಸಂ ಬುಕ್‌ಲೆಟ್‌ನಲ್ಲಿ ವಿಶ್ವವಿಖ್ಯಾತ ತಾಜ್ ಮಹಲನ್ನು ಕೈಬಿಟ್ಟಿರುವುದರಿಂದ ಉಂಟಾಗಿರುವ ವ್ಯಾಪಕ ವಿವಾದಗಳ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯನ್ನು ಸ್ಥಾಪಿಸುವ ಸರಕಾರದ ನಿರ್ಧಾರವು ಹೊಸ ವಿವಾದವನ್ನು ಹುಟ್ಟುಹಾಕಿದಂತಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಆಗ್ರಾದ ವಿಶ್ವ ವಿಖ್ಯಾತ ತಾಜಮಹಲನ್ನು ಉತ್ತರ ಪ್ರದೇಶ ಸರಕಾರ ಕಡೆಗಣಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು “ಅಂಧೇರ್ ನಗರೀ ಚೌಪಟ್ ರಾಜಾ’ ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ವಾಕ್ ದಾಳಿಗೆ ಚಾಲನೆ ನೀಡಿದ್ದಾರೆ.