Advertisement

17ಕ್ಕೆ  ಬೃಹತ್‌ ಯೋಗಥಾನ್‌ ಕಾರ್ಯಕ್ರಮ

05:01 PM Sep 03, 2022 | Team Udayavani |

ಚಿಕ್ಕಬಳ್ಳಾಪುರ: ಸೆ.17ರಂದು ಏಕಕಾಲಕ್ಕೆ ರಾಜ್ಯಾದ್ಯಂತ ಯೋಗಥಾನ್‌ ಕಾರ್ಯಕ್ರಮವನ್ನು ನಡೆಸುವ ಮೂಲಕ ಲಿಮ್ಕಾ ಮತ್ತು ಗಿಖಲೆ ಮಾಡಲು ಸರ್ಕಾರವು ಯೋಗಥಾನ್‌ ಕಾರ್ಯಕ್ರಮ ಯೋಜಿಸಿದೆ. ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಕಾರ್ಯೋನ್ಮುಖರಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ಸೂಚನೆ ನೀಡಿದರು.

Advertisement

ಡೀಸಿ ಕಚೇರಿಯಲ್ಲಿ ನಡೆದ ಯೋಗಥಾನ್‌ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಕೇಂದ್ರದ ಸರ್‌. ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಥಾನ್‌ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ಬೆಳಗ್ಗೆ 8 ಗಂಟೆಗೆ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಯೋಗಾಸಕ್ತರು ಪಾಲ್ಗೊಳ್ಳುವ ಮೂಲಕ ದಾಖಲೆ ಬರೆಯಬೇಕಾಗಿದೆ. ಇದಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಿ, ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ರೋಗ ಮುಕ್ತ ರಾಷ್ಟ್ರಕ್ಕೆ ಸಂಕಲ್ಪ: ಈಗಾಗಲೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜಿಲ್ಲೆಯ ಐತಿಹಾಸಿಕ ಸ್ಥಳಗಳಲ್ಲಿ ಆಯೋಜಿಸುವ ಮೂಲಕ ಯಶಸ್ವಿಗೊಳಿಸಲಾಗಿದೆ. ಅದರ ಮುಂದುವರಿದ ಭಾಗವಾಗಿ ಯೋಗ ಕಾರ್ಯಕ್ರಮ ಜಿಲ್ಲೆಯಾ ದ್ಯಂತ ಸರ್ಕಾರದ ನಿರ್ದೇಶನದಂತೆ ಆಯೋಜಿಸಲಾಗುತ್ತಿದೆ. ಯೋಗವು ಒಂದು ಜೀವನ ಶೈಲಿಯಾಗಿದ್ದು, ಯೋಗದ ಮೂಲಕ ರೋಗ ಮುಕ್ತ ರಾಷ್ಟ್ರ ನಿರ್ಮಾಣದ ಸಂಕಲ್ಪದ ಉದ್ದೇಶದಿಂದ ಯೋಗಾಥಾನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ರಾಜ್ಯದಲ್ಲಿ ಸುಮಾರು 10 ಲಕ್ಷ ಜನರು ಏಕಕಾಲದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ಲಿಮ್ಕಾ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ ಮತ್ತು ವಿಶ್ವದಾಖಲೆ ಮಾಡಲು ಸರ್ಕಾರ ಉದ್ದೇಶಿಸಿದೆ. ಅದರ ಭಾಗವಾಗಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಆಯುಷ್‌ ಇಲಾಖೆ, ನೆಹರೂ ಯುವ ಕೇಂದ್ರ, ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನಾ (ಎನ್‌ಎಸ್‌ ಎಸ್‌) ಘಟಕ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಯೋಗಥಾನ್‌ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆಯಲಿದೆ ಎಂದರು.

ಪರಿಣಿತರಿಂದ ವಿಶೇಷ ಉಪನ್ಯಾಸ: ಯೋಗವು ಮಾನಸಿಕ ಆರೋಗ್ಯ, ಬೊಜ್ಜು ನಿಯಂತ್ರಣ, ಸಕಾರಾತ್ಮಕ ಚಿಂತನೆ, ಒತ್ತಡ ನಿರ್ವಹಣೆ, ರೋಗ ನಿರೋಧಕ ಶಕ್ತಿ ವೃದ್ಧಿ, ಆಧ್ಯಾತ್ಮ, ಸ್ಮರಣಶಕ್ತಿ ಈ ವಿಷಯಗಳ ಕುರಿತು ಯೋಗ ಪರಿಣಿತರು ಹಾಗೂ ನುರಿತ ವೈದ್ಯರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು. ಯೋಗ ಪಟುಗಳು, ತರಬೇತುದಾರರು, ಶಿಕ್ಷಕರು, ಯೋಗ ಸಂಸ್ಥೆಗಳು ಯೋಗಾಥಾನ್‌ನಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಯೋಗಥಾನ್‌-2022 ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ನೋಂದಾಯಿಸಿಕೊಂಡವರು ರಿಜಿಸ್ಟರ್‌ ಮಾಡಿದ ಕ್ಯೂ-ಆರ್‌ ಕೋಡ್‌ನ್ನು ಸ್ಕ್ಯಾನ್‌ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ಲಘು ಉಪಹಾರ, ಭದ್ರತೆ, ಸಂಚಾರ ದಟ್ಟಣೆ ನಿರ್ವಹಣೆ, ಜನಸಂದಣಿ ನಿರ್ವಹಣೆ, ಭದ್ರತೆ, ತುರ್ತು ಆರೋಗ್ಯ ಚಿಕಿತ್ಸೆ, ಆ್ಯಂಬುಲೆನ್ಸ್‌ ವ್ಯವಸ್ಥೆ, ಶೌಚಾಲಯ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಿ, ಸಮರ್ಪಕವಾಗಿ ಯೋಗಥಾನ್‌ ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದರು. ಜಿಪಂ ಸಿಇಒ ಪಿ.ಶಿವಶಂಕರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಅಮರೇಶ್‌, ಜಿಲ್ಲಾ ಆಯುಷ್‌ ಅಧಿಕಾರಿ ತಬೀಬಾ ಬಾನು ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಕ್ರೀಡಾ ಅಂಕಣವನ್ನು ನಿಗದಿತ ಜನರಿಗೆ ಒಂದೊಂದು ಅಂಕಣವನ್ನು ಮಾಡಿ, ಅದನ್ನು ವಿಭಾಗಿಸಿ ಪ್ರತಿ ವಿಭಾಗಕ್ಕೂ ಒಬ್ಬ ಯೋಗ ತರಬೇತುದಾರರನ್ನು ನಿಯೋಜಿಸಬೇಕು. ಸ್ವಯಂ ಸೇವಕರನ್ನು ಗುರುತಿಸಿ, ಅವರಿಗೆ ಸೂಕ್ತ ರೀತಿಯಲ್ಲಿ ಸೂಚನೆ ನೀಡಬೇಕು. ಯೋಗಪಟುಗಳಿಗೆ ಪ್ರಥಮ ಚಿಕಿತ್ಸೆ ಕಿಟ್‌, ಟೀ-ಶರ್ಟ್‌ ಸೌಲಭ್ಯ ಕಲ್ಪಿಸಬೇಕು. -ಎನ್‌.ಎಂ.ನಾಗರಾಜ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next