ನವದೆಹಲಿ:ಕೋವಿಡ್ 19 ಮಹಾಮಾರಿಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾರಿಗೆ ತಂದಿದ್ದ ಲಾಕ್ ಡೌನ್ ಅನ್ನು ಹಂತಹಂತವಾಗಿ ತೆರವುಗೊಳಿಸಿದ್ದು, ಈಗ ಮೂರನೇ ಹಂತದ ಅನ್ ಲಾಕ್ ನಲ್ಲಿ ಜಿಮ್ ಹಾಗೂ ಯೋಗ ತರಗತಿ ತೆರೆಯಲು ಕೇಂದ್ರ ಸರ್ಕಾರ ಆಗಸ್ಟ್ 5ರಿಂದ ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯದ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಕೋವಿಡ್ 19 ಸೋಂಕು ಅತೀ ಹೆಚ್ಚಿರುವ ಪ್ರದೇಶಗಳಲ್ಲಿನ ಜಿಮ್ನೇಶಿಯಂ ಹಾಗೂ ಯೋಗ ತರಗತಿ ತೆರೆಯಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸೋಮವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ, 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಗರ್ಭಿಣಿ ಮಹಿಳೆ ಹಾಗೂ 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಯಾವುದೇ ಕಾರಣಕ್ಕೂ ಮುಚ್ಚಿದ ಜಾಗದಲ್ಲಿರುವ ಜಿಮ್ನೇಶಿಯಂ ಅಥವಾ ಯೋಗ ತರಗತಿಯಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ದೇಶನ ನೀಡಿದೆ.
ಫಿಟ್ನೆಸ್ ಕೇಂದ್ರಕ್ಕೆ ಬರುವವರು ಮತ್ತು ಹೋಗುವವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಬ್ಯಾಚಸ್ ಮಾಡಬೇಕೆಂದು ಕೇಂದ್ರ ತಿಳಿಸಿದೆ. ಪ್ರತಿಯೊಂದು ಬ್ಯಾಚ್ ನಡುವೆ 15ರಿಂದ 30 ನಿಮಿಷಗಳ ಅಂತರ ಇರಲಿ. ಈ ಸಮಯದಲ್ಲಿ ಸ್ವಚ್ಛಗೊಳಿಸುವುದು ಹಾಗೂ ಸ್ಯಾನಿಟೈಸ್ ಮಾಡಲು ಬಳಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಯಾವ ವ್ಯಕ್ತಿಗೆ ಉಸಿರಾಟ ಸ್ಯಾಚುರೇಶನ್ ಪ್ರಮಾಣ ಶೇ.95ಕ್ಕಿಂತ ಕೆಳಮಟ್ಟದಲ್ಲಿದ್ದರೆ ಅವರಿಗೆ ಜಿಮ್ ಮಾಡಲು ಅವಕಾಶ ನೀಡಬೇಡಿ ಎಂದು ವರದಿ ತಿಳಿಸಿದೆ.