Advertisement

ಮನೆಗಳಲ್ಲಿ ಯೋಗ ದಿನಾಚರಣೆ

07:29 AM Jun 22, 2020 | mahesh |

ಮಂಗಳೂರು /ಉಡುಪಿ: ಇತ್ತೀಚಿನ ವರ್ಷಗಳಲ್ಲಿ ಜಗತ್ತಿನೆಲ್ಲೆಡೆ ಸಂಭ್ರಮದಿಂದ ಆಚರಿಸಲ್ಪಡುತ್ತಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೇಲೆ ಈ ಬಾರಿ ಕೊರೊನಾ ಮಹಾಮಾರಿಯು ಪರಿಣಾಮ ಬೀರಿದೆ. ಎಲ್ಲೆಡೆಯಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ರವಿವಾರ ಜನ‌ರು ತಮ್ಮ ಮನೆಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಯೋಗದಲ್ಲಿ ತೊಡಗಿದ್ದರು.

Advertisement

“ಮನೆಯಲ್ಲೇ ಯೋಗ ಕುಟುಂಬ ದೊಂದಿಗೆ ಯೋಗ’ ಎಂಬುದು 2020ರ ಯೋಗ ದಿನಾಚರಣೆಯ ಪರಿಕಲ್ಪನೆ ಯಾಗಿತ್ತು. ಇದೇ ಕಾರಣಕ್ಕೆ ಮನೆಯಲ್ಲೇ ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗ ನಡೆಸಲಾಯಿತು. ಕೆಲವು ಕಡೆಗಳಲ್ಲಿ ಆನ್‌ಲೈನ್‌ ಮುಖೇನವೂ ಯೋಗ ನಡೆಯಿತು. ಕೆಲವೊಂದು ಸಂಸ್ಥೆಗಳು ಆನ್‌ಲೈನ್‌ ಯೋಗ ಕಾರ್ಯಾಗಾರ ಆಯೋಜನೆ ಮಾಡಿದ್ದವು. ವಿವಿಧ ಆ್ಯಪ್‌ ಮೂಲಕ ನೇರ ಪ್ರಸಾರವಾಗಿ ಯೋಗ ವೀಕ್ಷಣೆ ಕೂಡ ಆಯೋಜನೆ ಮಾಡಿದ್ದರು.

ವಿಶ್ವಮಾನ್ಯ ಯೋಗ: ಡಾ| ಹೆಗ್ಗಡೆ
ಬೆಳ್ತಂಗಡಿ: ಯೋಗವು ಅಸಾಂಪ್ರದಾಯಿಕ ವಿಚಾರ ಎಂದು ಮೂಲೆಗಟ್ಟಿರುವ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ಜೀವನಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದ್ದಾರೆ. ಪ್ರಸ್ತುತ ಯೋಗ‌ವು ಧರ್ಮ, ಜಾತಿ ಸಹಿತ ಎಲ್ಲ ಅಂತರಗಳನ್ನು ಮೀರಿ ನಿಂತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ರವಿವಾರ ಆಚರಿಸಲಾದ 6ನೇ ವಿಶ್ವ ಯೋಗ ದಿನಾಚರಣೆ ಸಂದರ್ಭ ಸಂದೇಶ ನೀಡಿದ ಅವರು, ನಾವು ಮಾಡಬೇಕಾದ ಒಂದೇ ಒಂದು ಸಾಧನೆ ಎಂದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯದೊಂದಿಗೆ ದೀರ್ಘ‌ಕಾಲ ಜೀವನಕ್ಕೆ ಬೇಕಾದ ಸೂತ್ರಗಳನ್ನು ಅಳವಡಿಸಿಕೊಳ್ಳುವುದು ಎಂದರು.

ಕೋವಿಡ್‌-19 ಸಂಕಷ್ಟದಿಂದಾಗಿ ಕಳೆದ ಮೂರು ತಿಂಗಳಿಂದ ಮನೆಬಿಟ್ಟು ಹೊರಹೋಗದೆ ತಪಸ್ಸಿನ ರೀತಿಯಲ್ಲಿ ಅಂತರ್ಮುಖೀಗಳಾಗಿ ನಮ್ಮನ್ನು ನಾವು ಗಮನಿಸಿದ್ದೇವೆ. ಕೋವಿಡ್‌ ನಿಯಮ ಪಾಲನೆಯೊಂದಿಗೆ ಪೌಷ್ಟಿಕ ಆಹಾರ ಸೇವಿಸಿ ದಿನ ನಿತ್ಯವೂ ಯೋಗಾಭ್ಯಾಸದಲ್ಲಿ ನಿರತರಾಗಿ ಎಂದು ಡಾ| ಹೆಗ್ಗಡೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next