Advertisement

ಏತಡ್ಕ ದೇವಸ್ಥಾನದಲ್ಲಿ ಹಲಸಿನ ಹಣ್ಣಿನ ಅಪ್ಪ  ಸೇವೆ

03:20 AM Jul 10, 2017 | Team Udayavani |

ಏತಡ್ಕ: ಏತಡ್ಕದ ಶ್ರೀ ಸದಾಶಿವ ದೇವಸ್ಥಾನದಲ್ಲಿ ರವಿವಾರ “ಹಲಸಿನ ಹಣ್ಣಿನ ಅಪ್ಪ ಸೇವೆ’ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಅರ್ಚಕ ಲಕ್ಷ್ಮೀನಾರಾಯಣ ಭಟ್‌ ಪಡಿಕ್ಕಲ್‌ ಅವರು ಕಾರ್ಯಕ್ರಮದ ವಿಧಿವಿಧಾನಗಳನ್ನು ನೆರವೇರಿಸಿದರು.

Advertisement

ಕಳೆದ ಐವತ್ತು ವರ್ಷಗಳಿಂದ ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಆಚರಣೆ “ಹಲಸಿನ ಹಣ್ಣಿನ ಅಪ್ಪ ಸೇವೆ’ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತಾದಿಗಳು ಭಾಗವಹಿಸಿದರು. ಭಕ್ತಾದಿಗಳು ತಮ್ಮಲ್ಲಿ ಬೆಳೆದ ಅತ್ಯುತ್ತಮ ಹಲಸಿನ ಹಣ್ಣನ್ನು ಅರ್ಪಿಸುವ ಮೂಲಕ ಹಲಸಿನ ಹಣ್ಣಿನ ಸೇವೆ ಸಂಪನ್ನಗೊಂಡಿತು.

ಹಿನ್ನೆಲೆ: 1940ರಲ್ಲಿ ಏತಡ್ಕ ಸಮೀಪದ ಪಡ್ರೆ ಗ್ರಾಮದಲ್ಲಿರುವ ಈ ದೇವಸ್ಥಾನದ ಮೂಡು ಭಾಗದಲ್ಲಿ ಪ್ರದಕ್ಷಿಣಾಕಾರದಲ್ಲಿ ಹರಿದು ಪಳ್ಳತ್ತಡ್ಕ ದಾರಿಯಾಗಿ ಕುಂಬಳೆ ಸೇರುವ ನದಿಯಲ್ಲಿ ಹಿಂದೆಂದೂ ಕೇಳರಿಯದ ನೆರೆ ಬಂದು ಸುತ್ತುಮುತ್ತಲಿನ ಅನೇಕ ಮನೆಗಳು ಕುಸಿದು ನೆರೆ ಪಾಲಾದವು. ಅಕ್ಕಪಕ್ಕದ ಕೃಷಿ ಭೂಮಿಗಳು ಹೂಳು ತುಂಬಿ ಕೃಷಿ ಅಯೋಗ್ಯವಾಗಿ ರೂಪುಗೊಂಡವು. 1941 ರಲ್ಲಿ ಏತಡ್ಕ ಸುಬ್ರಾಯ ಭಟ್‌ ಅವರು ಅಪರೂಪವಾಗಿದ್ದ ದೇವಸ್ಥಾನವಿದ್ದ ಜಾಗವನ್ನು ಖರೀದಿಸಿದರು. 1948 ರಲ್ಲಿ ಜೀರ್ಣೋದ್ಧಾರ, ಬ್ರಹ್ಮಕಲಶ ನೆರವೇರಿಸಿದರು. ಧನ-ಧಾನ್ಯ ಎರಡೂ ದುರ್ಲಭ ಎನ್ನುವ ಪರಿಸ್ಥಿತಿ. ಇಡೀ ಊರವರ ಹಸಿವಿನ ದಿನಗಳಲ್ಲಿ ಕೈ ಹಿಡಿದು ಅನ್ನ ಕೋಶವನ್ನು ತುಂಬಿದ್ದು “ಹಲಸಿನ ಕಾಯಿ ಮತ್ತು ಹಣ್ಣು’. ದಿನದ ಮೂರೂ ಹೊತ್ತು ಹಲಸಿನ ಹಲವು ಬಗೆ, ಅನ್ನ, ತರಕಾರಿ, ಹಣ್ಣು ಹಂಪಲು ಎಲ್ಲವೂ ಒಂದರಲ್ಲಿ ಎಂದರೆ ಹಲಸಿನ ಕಾಯಿಯೇ. ದಿ| ಏತಡ್ಕ ಸುಬ್ರಾಯ ಭಟ್‌ ಅವರು ಈ ಮರಕ್ಕೆ ಊರವರು ಚಿರಋಣಿಯಾಗಿರಬೇಕು ಎನ್ನುವ ಪರಿಕಲ್ಪನೆಯಿಂದ  “ಹಲಸಿನ ಹಣ್ಣಿನ ಅಪ್ಪ ಸೇವೆ’ಯನ್ನು  ಆಚರಣೆಗೆ ತಂದರು. ಆ ಬಳಿಕ ಪ್ರತೀ ವರ್ಷವೂ ತಪ್ಪದೆ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆಯುತ್ತಿದೆ.

ಚಿತ್ರ: ಚಂದ್ರಶೇಖರ್‌ ಏತಡ್ಕ

Advertisement

Udayavani is now on Telegram. Click here to join our channel and stay updated with the latest news.

Next