ಯಲಬುರ್ಗಾ: ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆ ಮೀರಿ ಅಂದರೇ ತಾಲೂಕಿನಲ್ಲಿ 8710 ಹೇಕ್ಟರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದೆ. ಆದರೆ, ಈಗ ತೇವಾಂಶ ಕೊರತೆ ಮತ್ತು ಹಳದಿ ರೋಗ ಕಾಣಿಸಿಕೊಂಡಿದ್ದು ರೈತರು ಕಂಗಾಲಾಗಿದ್ದಾರೆ.
ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದರಿಂದ ರೈತರು ಹೆಸರು ಬಿತ್ತನೆ ಮಾಡಿದ್ದರು. ಈಗ ಹೂವರಳಿ, ಕಾಯಿ ಕಟ್ಟುವ ಹಂತಕ್ಕೆ ಬಂದಿದ್ದು ತೇವಾಂಶ ಕೊರತೆ ಎದುರಾಗಿದೆ. ಸದ್ಯ ಮಳೆ ಲಭಿಸಿದರೇ ಹೆಸರು ಬೆಳೆ ಕೈ ಹಿಡಿಯುತ್ತದೆ. ಇಲ್ಲವಾದರೇ ಇಡೀ ಬೆಳೆ ನಾಶವಾಗುತ್ತದೆ. ಇದರ ಜೊತೆಗೆ ತಾಲೂಕಿನ ಹಲವಡೆ ಹಳದಿ ರೋಗವು ಕಾಣಿಸಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹೆಸರಿನ ಜತೆಗೆ ಸೋಯಾಬಿನ್, ಶೇಂಗಾ, ಉಳ್ಳಾಗಡ್ಡಿ ಸಹ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡಿರುವ ಶೇಂಗಾ ಈ ಸಮಯದಲ್ಲಿ ಕಾಳು ಕಟ್ಟುವ ಹಂತದಲ್ಲಿ ಇರಬೇಕಿತ್ತು. ಆದರೇ ಮಳೆ ಕೊರತೆಯಿಂದ ಬೆಳೆ ಬಾಡತೊಡಗಿದೆ. ಕೆಲವಡೆ ಜಿಂಕೆ ಹಾವಳಿಯಿಂದ ಬೆಳೆ ಹಾಳಾಗಿದೆ.
ಕೃಷಿ ಅಧಿಕಾರಿಗಳ ನಿರ್ಲಕ್ಷ್ಯ: ರೋಗ ತಗುಲಿರುವ ಜಮೀನುಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಅಗತ್ಯ ಕ್ರಮಗಳನ್ನು ಅನುಸರಿಸಲು ಮಾರ್ಗದರ್ಶನ ನೀಡುತ್ತಿಲ್ಲ. ರೈತರು ಸಲಹೆ ಕೇಳಲು ಕಚೇರಿಗೆ ಆಗಮಿಸಿದರೆ ಕಚೇರಿ ಸಿಬ್ಬಂದಿಗಳನ್ನು ಅ ಧಿಕಾರಿಗಳನ್ನು ಭೇಟಿ ಮಾಡಲು ಬಿಡದೇ ಸತಾಯಿಸುತ್ತಾರೆ. ಕೃಷಿ ತಾಲೂಕು ಅಧಿಕಾರಿ ಹಾರೋನ ರಾಶೀದ್ ಅವರ ಮಾತನ್ನು ಸಿಬ್ಬಂದಿಗಳು ಕೇಳುತ್ತಿಲ್ಲ ಎಂಬುದು ರೈತರ ಆರೋಪ.
ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭದಲ್ಲೆ ಕಿತ್ತು ಮಣ್ಣಿನಲ್ಲಿ ಹೂಳಬೇಕು. ರೋಗ ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಡೈಮಿಥೋಯೇಟ್ 30 ಇಸಿ ಕೀಟನಾಶಕವನ್ನು ಪ್ರತಿ ಲೀಟರ್ ನೀರಿಗೆ 1.7 ಮಿ.ಲೀ. ಅಥವಾ ಅಂತರ್ ವ್ಯಾಪ್ತಿ ಕೀಟನಾಶಕ ಸಿಂಪರಣೆ ಮಾಡಬೇಕು.
ಹಾರೋನ ರಾಶೀದ, ಸಹಾಯಕ
ನಿರ್ದೇಶಕರು, ಕೃಷಿ ಇಲಾಖೆ