Advertisement

ಯಡ್ತಾಡಿಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ

12:30 AM Feb 22, 2019 | Team Udayavani |

ಕೋಟ:  ಸಾೖಬ್ರಕಟ್ಟೆ ಸಮೀಪದ ಯಡ್ತಾಡಿ ಗ್ರಾ.ಪಂ ವ್ಯಾಪ್ತಿಯ ಪ್ರದೇಶಗಳು ಶಿಲೆಗಲ್ಲು ಗಣಿಗಾರಿಕೆಗೆ ಹೆಸರಾಗಿದೆ. ಆದರೆ ಇದೇ ಕಲ್ಲಿನಿಂದಾಗಿ ಇಲ್ಲಿನ ಹಲವು  ಪ್ರದೇಶಗಳಲ್ಲಿ ಬಾವಿ, ಬೋರ್‌ವೆಲ್‌ಗ‌ಳನ್ನು ಕೊರೆದಾಗ ನೀರು ಸಿಗುತ್ತಿಲ್ಲ. ಇದರಿಂದ ಇಲ್ಲಿನ 2 ಕಾಲನಿಗಳಲ್ಲಿ ವರ್ಷದ ಬಹುತೇಕ ದಿನಗಳಲ್ಲಿ ನೀರಿನ ಸಮಸ್ಯೆ ಇದ್ದು ನಳ್ಳಿ ನೀರು ಅನಿವಾರ್ಯವಾಗಿದೆ.
  
ಸಾವಿರಾರು ಕುಟುಂಬಕ್ಕೆ ಸಮಸ್ಯೆ 
ಈ ಗ್ರಾ.ಪಂ. ಹೇರಾಡಿ, ಯಡ್ತಾಡಿ ಗ್ರಾಮಗಳನ್ನು ಒಳಗೊಂಡಿದ್ದು  ಇಲ್ಲಿನ  ಸಾೖಬ್ರಕಟ್ಟೆ, ಜನತಾ ಕಾಲನಿ, ರಂಗನಕೆರೆ ಜನತಾ ಕಾಲನಿಯ ಸುಮಾರು 350 ಮನೆಗಳು ಸೇರಿದಂತೆ, ಕಾಜ್ರಲ್ಲಿ, ಅಲ್ತಾರು ಕ್ಯಾದಿಕೆರೆ, ಬಳೆಗಾರ್‌ಬೆಟ್ಟು, ಗರಿಕೆಮಠ ಮುಂತಾದ ಕಡೆಗಳ ಸಾವಿರಕ್ಕೂ ಹೆಚ್ಚು ಮನೆಗಳಲ್ಲಿ  ಭೀಕರ ನೀರಿನ ಸಮಸ್ಯೆ ಎದುರಾಗಿದೆ. ಸರಕಾರಿ ಬಾವಿಗಳು ಸೇರಿ, ನೀರಿನ ಮೂಲಗಳು ಬರಿದಾಗಿದ್ದು, 700 ಅಡಿ ಬೋರ್‌ವೆಲ್‌ ಕೊರೆಸಿದರೂ ನೀರು ಸಿಗುತ್ತಿಲ್ಲ.  

Advertisement

ಶುದ್ಧ ಕುಡಿಯುವ ನೀರಿನ 
ಘಟಕ ವ್ಯರ್ಥ?  

ಇಲ್ಲಿನ ಸಾೖಬ್ರಕಟ್ಟೆ  ಬಾಲಕರ ಹಾಸ್ಟೆಲ್‌ ಸಮೀಪ ಜಿ.ಪಂ. ಅನುದಾನದಲ್ಲಿ  ಶುದ್ಧ ನೀರಿನ ಘಟಕವೊಂದನ್ನು ಸ್ಥಾಪಿಸಲಾಗಿದೆ. ಆದರೆ ಇದು ಸೂಕ್ತ ಪ್ರದೇಶದಲ್ಲಿಲ್ಲದ ಕಾರಣ ವ್ಯರ್ಥವಾಗಿದೆ ಎನ್ನುವುದು ಜನರ ಅಭಿಪ್ರಾಯ. ಕಾಲನಿಯವರಿಗೆ ಪ್ರಯೋಜನವಾಗಲಿ ಎಂದು ನಿರ್ಮಿಸಿದ್ದು, ಜನರಿಗೆ ಮಹತ್ವ ತಿಳಿದಿಲ್ಲ. ಈಗ ಆ ಘಟಕಕ್ಕೂ ಸರಬರಾಜು ಮಾಡಲು ನೀರಿಲ್ಲ ಎನ್ನುವುದು ಪಂಚಾಯತ್‌ನವರ ಸ್ಪಷ್ಟನೆಯಾಗಿದೆ.

ಶಿರಿಯಾರದಲ್ಲಿ ಗ್ರಾ.ಪಂ.ನಲ್ಲೂ ಎರಡು ದಿನಕ್ಕೊಮ್ಮೆ ನೀರು 
ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಕೆದ್ಲಹಕ್ಲು, ಗರಿಕೆಮಠ, ಕಾಜ್ರಲ್ಲಿ ಮುಂತಾದ ಭಾಗಗಳಲ್ಲಿ ಆಗಾಗ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಇಲ್ಲಿ ಬೇಸಿಗೆ ಆರಂಭಕ್ಕೆ  ಮೊದಲೇ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಿ ಕೊರತೆಯನ್ನು ಪ್ರಮಾಣವನ್ನು ಹೊಂದಾಣಿಕೆ ಮಾಡಲಾಗುತ್ತದೆ ಹಾಗೂ ನೀರಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ಶಾಶ್ವತ ಯೋಜನೆ ಕಾರ್ಯಗತವಾದರೆ ಸಮಸ್ಯೆ ದೂರ
ಯಡ್ತಾಡಿ, ಶಿರಿಯಾರ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಕೃಷಿಭೂಮಿಗೆ ನೀರುಣಿಸುವ ಸಲುವಾಗಿ ವಾರಾಹಿ ಎಡದಂಡೆ ಏತ ನೀರಾವರಿ ಕಾಲುವೆ ವಿಸ್ತರಣೆ ಕಾಮಗಾರಿ ಸಿದ್ಧಗೊಂಡಿದೆ.  ಹೈಕಾಡಿ ಸಮೀಪ ಕಾಸಾಡಿಯಿಂದ ಶಿರೂರು ಮೂಕೈì ತನಕ ನೇರ ಕಾಲುವೆ ಹಾಗೂ ಶಿರೂರು ಮೂಕೈìಯಿಂದ ಎರಡು ಕಾಲುವೆಗಳನ್ನು ನಿರ್ಮಿಸಿ ರೈತರ ಜಮೀನಿಗೆ ನೀರುಣಿಸಲು 276.66 ಕೋಟಿ ರೂ. ಬೃಹತ್‌ ಯೋಜನೆ ಟೆಂಡರ್‌ ಆಗಿ ಕೆಲಸ ಆರಂಭವಾಗಿದೆ.  ಈ ಕಾಲುವೆ ಸಮರ್ಪಕವಾಗಿ ವಿಸ್ತರಣೆಯಾದರೆ ಅಂತರ್ಜಲ ಮಟ್ಟ ಏರಿಕೆಯಾಗಿ ಶಿರಿಯಾರ, ಬಿಲ್ಲಾಡಿ, ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯ ನೀರಿನ ಸಮಸ್ಯೆ ಬಹುತೇಕ ನೀಗಲಿದೆ. ಹತ್ತಾರು ಎಕ್ರೆ ವಿಸ್ತೀರ್ಣದ ಶಿರಿಯಾರ ಮದಗಕ್ಕೆ  ವಾರಾಹಿ ಕಾಲುವೆಯನ್ನು ಸಂಪರ್ಕಿಸಲು ಕಾಲುವೆ ನಿರ್ಮಾಣವಾಗಿದೆ. ಆದರೆ  ಮಧ್ಯ ಜಾಗದ ವಿವಾದವಿರುವುದರಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಗೆ  ಬಂಡೀಮಠ ಉಪ್ಪುನೀರು ತಡೆ ಅಣೆಕಟ್ಟು ಅಥವಾ ಸ್ಥಳೀಯ ಹೊಳೆಯ ನೀರನ್ನು  ಶುದ್ಧೀಕರಿಸಿ ನೀಡುವ  ಶಾಶ್ವತ ಯೋಜನೆ ಕೂಡ ಪ್ರಸ್ತಾವನೆಯಲ್ಲಿದೆ. ಈ ಮೂರರಲ್ಲಿ  ಯಾವುದಾದರು ಒಂದು ಯೋಜನೆ  ಸರಿಯಾಗಿ ಕಾರ್ಯಗತವಾದರೂ ಇಲ್ಲಿನ ಜನರ ನೀರಿನ ಸಮಸ್ಯೆ ನೀಗಲಿದೆ.


ತುರ್ತು ಟ್ಯಾಂಕರ್‌ ನೀರು ಅಗತ್ಯ: ಶಾಶ್ವತ ಯೋಜನೆ ಬೇಕು
ಕಲ್ಲಿನ ಸಮಸ್ಯೆಯಿಂದ ಅಂತರ್ಜಲ ಲಭ್ಯವಿಲ್ಲ. ಟ್ಯಾಂಕರ್‌ ನೀರು ಸರಬರಾಜು ಮಾಡಲು ಅನುಮತಿ ಸಿಗುತ್ತಿಲ್ಲ. ಹೀಗಾಗಿ ಮುಂದೆ ಸಮಸ್ಯೆ ಭೀಕರಗೊಳ್ಳಲಿದೆ. ವಾರಾಹಿ ಎಡದಂಡೆ ಏತ ನೀರಾವರಿ ಅಥವಾ ಬಂಡೀಮಠ ಉಪ್ಪುನೀರು ತಡೆ ಅಣೆಕಟ್ಟಿನ ಮೂಲಕ ನೀರು ಶುದ್ಧೀಕರಿಸಿ ನೀಡುವ  ಯೋಜನೆ ಅನುಷ್ಠಾನಗೊಂಡರೆ ಮಾತ್ರ ಸಮಸ್ಯೆ ಶಾಶ್ವತ ಪರಿಹಾರಸಿಗಲಿದೆ.
 – ಎಚ್‌.ಪ್ರಕಾಶ್‌ ಶೆಟ್ಟಿ,ಅಧ್ಯಕ್ಷರು ಯಡ್ತಾಡಿ ಗ್ರಾ.ಪಂ.

ಕೊರತೆ ಪ್ರಮಾಣದ ಹೊಂದಾಣಿಕೆ
ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲೂ ಪ್ರತಿದಿನ ನೀರು ಸರಬರಾಜು ಮಾಡುವಷ್ಟು ನೀರಿಲ್ಲ. ಎರಡು-ಮೂರು ದಿನಕ್ಕೊಮ್ಮೆ ಸರಬರಾಜು ಮಾಡುವ ಮೂಲಕ ಕೊರತೆಯನ್ನು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ. ಶಿರಿಯಾರ ಸಮೀಪ ನಮ್ಮ ಕುಡಿಯುವ ನೀರಿನ ಬಾವಿಗೆ ಮಳೆಗಾಲದಲ್ಲಿ ಹೊಳೆಯ ಕಲುಷಿತ ನೀರು ಬಂದು ಸೇರಿಕೊಳ್ಳುತ್ತಿದ್ದು ಇದರ ಎತ್ತರವನ್ನು ಹೆಚ್ಚಿಸಲು ಅನುದಾನ  ಮಂಜೂರಾಗಿದೆ.
– ಆನಂದ ನಾಯ್ಕ, ಪಿ.ಡಿ.ಒ. ಶಿರಿಯಾರ ಗ್ರಾ.ಪಂ.

Advertisement

ಸಮಸ್ಯೆ ಪರಿಹಾರಕ್ಕೆ ಯತ್ನ
ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿದೆ ಹಾಗೂ ಇದನ್ನು ನಿವಾರಿಸಲು  ಬಾವಿ ದುರಸ್ತಿ, ಪೈಪ್‌ಲೈನ್‌ ಕಾಮಗಾರಿಗೆ ಯೋಜನೆ ಸಿದ್ಧಪಡಿಸಲಾಗಿದೆ. ಟ್ಯಾಂಕರ್‌ ನೀರಿನ ಸಲುವಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ.
– ವಿನೋದ ಕಾಮತ್‌,ಪಿ.ಡಿ.ಒ,ಯಡ್ತಾಡಿ ಗ್ರಾ.ಪಂ

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next