Advertisement

ಯಡಿಯೂರಪ್ಪ ಒಂದು ಶಕ್ತಿ -ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ವಿಜಯೇಂದ್ರ

09:47 PM Apr 22, 2023 | Team Udayavani |

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜನಪ್ರಿಯತೆ ಈಗಲೂ ಕುಗ್ಗಿಲ್ಲ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಯಡಿಯೂರಪ್ಪನವರು ಒಂದು ಶಕ್ತಿ, ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯನ್ನು ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತಿದ್ದು ಪಕ್ಷ ಅಧಿಕಾರಕ್ಕೆ ಬಂದ ನಂತರ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಶಾಸಕರ ಅಭಿಪ್ರಾಯ ಪಡೆದು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

ದೇಶವನ್ನು ದಿವಾಳಿ ಮಾಡಿರುವ ಕಾಂಗ್ರೆಸ್‌ ಪಕ್ಷ ಹೇಗಾದರೂ ಮಾಡಿ ಅಧಿಕಾರ ಹಿಡಿದು ತನ್ನ ನಾಯಕರಿಗೆ ಕರ್ನಾಟಕ ಎಟಿಎಂ ಆಗಬೇಕೆಂದು ಬಯಸಿದೆ. ಜೆಡಿಎಸ್‌ನವರು ಅತಂತ್ರ ಫ‌ಲಿತಾಂಶ ಬರಲೆಂದು ಕಾಯುತ್ತಿದ್ದಾರೆ. ಆದರೆ, ರಾಜ್ಯದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ. ಕೇಂದ್ರ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಗುರುತಿಸಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಲಿದ್ಧಾರೆ ಎಂದು ಹೇಳಿದರು.

ವರುಣ ಮೇಲೆ ನನಗೆ ಅಪಾರ ಪ್ರೀತಿ:

ವರುಣ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ವರುಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ-ಸಿದ್ದರಾಮಯ್ಯ ನಡುವೆ ಯಾವುದೇ ರೀತಿಯ ಒಳ ಒಪ್ಪಂದವಾಗಿಲ್ಲ. ವರುಣದಿಂದಲೇ ರಾಜ್ಯದ ಜನರು ನನ್ನನ್ನು ಗುರುತಿಸಿದರು. ಹೀಗಾಗಿ ವರುಣ ಮೇಲೆ ನನಗೆ ಅಪಾರ ಪ್ರೀತಿಯಿದೆ ಎಂದರು.

Advertisement

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಮಾಜಿ ಮುಖ್ಯಮಂತ್ರಿ  ಜಗದೀಶ್‌ ಶೆಟ್ಟರ್‌ ಅವರ ಬಗ್ಗೆ ನಾನು ಕೀಳಾಗಿ ಟೀಕಿಸುವುದಿಲ್ಲ. ಅವರು ಪಕ್ಷೇತರವಾಗಿ ಸ್ಪರ್ಧಿಸಬಹುದಿತ್ತು. ಆದರೆ ಕಾಂಗ್ರೆಸ್‌ಗೆ ಹೋಗಿದ್ದು ತಪ್ಪು. ವೀರಶೈವ- ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದ ಕಾಂಗ್ರೆಸ್‌ ಪಕ್ಷ ಸೇರಿದ್ದು ಬೇಸರ ತರಿಸಿದೆ. ವೀರಶೈವ-ಲಿಂಗಾಯತ ಸಮುದಾಯದ ವೀರೇಂದ್ರ ಪಾಟೀಲ್‌ ಅವರನ್ನು ಕಾಂಗ್ರೆಸ್‌ ಕೆಟ್ಟದಾಗಿ ನಡೆಸಿಕೊಂಡಿತು. ಕಾಂಗ್ರೆಸ್‌ ಸೇರಿರುವ ಜಗದೀಶ ಶೆಟ್ಟರ್‌ ಅವರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ವರುಣಾ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಬಿಜೆಪಿ ಅಭ್ಯರ್ಥಿ ಸಚಿವ ವಿ. ಸೋಮಣ್ಣ ಅವರು ಗೆಲುವು ಸಾಧಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next