ಹರಪನಹಳ್ಳಿ: ಉಪ ಚುನಾವಣೆಯಲ್ಲಿ ಗೆಲುವು ಪಡೆದ ಪಂಚಮಸಾಲಿ ಸಮುದಾಯದ ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡದಿರುವುದು ಪಂಚಮಸಾಲಿ ಸಮಾಜ ತುಳಿಯುವ ಹುನ್ನಾರವಲ್ಲದೇ ಮತ್ತೇನು ಎಂದು ಹರಿಹರದ ವೀರಶೈವ ಲಿಂಗಾಯಿತ ಪಂಚಮ ಸಾಲಿ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಪ್ರಶ್ನಿಸಿದರು.
ಹರಪನಹಳ್ಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹೇಶ ಕುಮಟಳ್ಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚಿಸುವ ಉದ್ದೇಶದಿಂದ ಬಂದಿದ್ದಾರೆ. ಅಂದರೆ ಬಿಜೆಪಿ ಸರ್ಕಾರ ರಚಿಸುವಲ್ಲಿ ಮಹೇಶ ಕುಮಟಳ್ಳಿ ಅವರ ಪಾತ್ರವಿದೆ ಅಲ್ಲವೇ? ಎಂದರು.
ನಮ್ಮ ಸಮುದಾಯಕ್ಕೆ ಮಂತ್ರಿ ಸ್ಥಾನ ನೀಡಬೇಕು ಎಂದು ನೀಡಿರುವ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಮುಖ್ಯಮಂತ್ರಿಗಳಿಗೆ ಕ್ಷಮೆ ಕೋರಿದ್ದೇನೆ ಎನ್ನುವುದು ವದಂತಿ. ನಾವೇನು ಚುನಾವಣೆಗೆ ಸ್ಪರ್ಧಿಸಲ್ಲ, ಆದರೆ ನಮ್ಮ ಸಮಾಜದವರಿಗೆ ಅಧಿಕಾರ ಕಲ್ಪಿಸಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮೇಲೆತ್ತುವ ಉದ್ದೇಶ ನಮ್ಮದಾಗಿದೆ ಎಂದು ತಿಳಿಸಿದರು.
ಮುರುಗೇಶ ನಿರಾಣಿ ಬಗ್ಗೆ ಮಾತನಾಡಿದ ವಿಷಯವನ್ನು ಕೆಲವರು ಹುನ್ನಾರ ನಡೆಸಿ ದೊಡ್ಡದು ಮಾಡಿದರು. ನಂತರ, ಸತ್ಯ ಅರಿವಾಗಿದೆ. ಇದೀಗ ಸಚಿವ ಸಂಪುಟ ರಚನೆಯಾದ ನಂತರ ಪಂಚಮಸಾಲಿ ಸಮುದಾಯ ಜಾಗೃತವಾಗಿದ್ದು, ಉದ್ದೇಶ ಪೂರ್ವಕವಾಗಿ ನಮ್ಮ ಸಮುದಾಯವನ್ನು ತುಳಿಯುತ್ತಿದ್ದಾರೆ ಎಂಬದು ಮನವರಿಕೆಯಾಗಿದೆ ಎಂದರು.
ನಮ್ಮ ಸಮಾಜದ ಪರವಾಗಿ ನಾವು ಧ್ವನಿ ಎತ್ತದೇ ಮತ್ಯಾರು ಕೇಳಬೇಕು? ನನ್ನ ಉಸಿರು ಇರುವವರೆಗೂ ನಾನು ಸಮಾಜದ ಪರವಾಗಿಯೇ ಇರುತ್ತೇನೆ. ಹರ ಜಾತ್ರೆಯಲ್ಲಿ ಸ್ವಾಮೀಜಿ ನೀವು ಮಾತನಾಡಿದ್ದು ಸರಿ ಇದೆ ಎಂದು ಭಕ್ತರು ಪ್ರತಿಪಾದಿಸುತ್ತಿದ್ದಾರೆ ಎಂದರು.
ರಾಜ್ಯಾದ್ಯಂತ ಗ್ರಾಮ ದರ್ಶನ: ಪಂಚಮಸಾಲಿ ಸಮಾಜದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ ಮೊದಲನೇ ವಾರದಿಂದ ಇಡೀ ರಾಜ್ಯಾದ್ಯಂತ ಗ್ರಾಮ ದರ್ಶನ ನಡೆಸಲಿದ್ದೇವೆ. ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆ ಆಲಿಸುತ್ತೇನೆ. ಗ್ರಾಮಾಂತರ ಭಾಗಕ್ಕೆ ತೆರಳುವುದರಿಂದ ಸಮಸ್ಯೆಗಳ ಅರಿವು ಉಂಟಾಗುವುದರ ಜೊತೆಗೆ ಸಮಾಜದ ಸಂಘಟನೆಗೆ ಒತ್ತು ನೀಡಲು ಸಹಾಯಕವಾಗಲಿದೆ ಎಂದು ವಚನಾನಂದ ಶ್ರೀ ಹೇಳಿದರು.