Advertisement

Ayodhya; ರಾಮ ಮಂದಿರ ಪೂರ್ಣವೇ ಗುರಿ: ಪೇಜಾವರ ಶ್ರೀ

12:44 AM Jan 12, 2025 | Team Udayavani |

ಅಯೋಧ್ಯೆ/ ಉಡುಪಿ: ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ ವರ್ಷ ಕಳೆದಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ಇಡೀ ಮಂದಿರದ ಕಾಮಗಾರಿ ಸಂಪೂರ್ಣಗೊಳಿಸುವುದೇ ನಮ್ಮ ಮುಂದಿರುವ ಏಕೈಕ ಗುರಿಯೇ ವಿನಾ ಮತ್ತೇನೂ ಇಲ್ಲ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

Advertisement

ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಭವ್ಯ ಮಂದಿರ ಲೋಕಾರ್ಪಣೆಯಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿರುವ ಶ್ರೀಗಳು “ಉದಯವಾಣಿ’ಯೊಂದಿಗೆ ಮಾತನಾಡಿ, ಇನ್ಯಾವ ಗುರಿಯೂ ಇಲ್ಲ, ಇರಿಸಿಕೊಂಡಿಲ್ಲ ಎಂದರು. ಬೇರೆ ಯಾವುದೇ ದೊಡ್ಡ ಕಾರ್ಯಕ್ರಮಗಳನ್ನೂ ರೂಪಿಸಿಲ್ಲ ಎಂದರು.

ಸದ್ಯ ಮಂದಿರದ ಸುತ್ತುಪೌಳಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರ ಜತೆಗೆ ಮಂದಿರ ಪ್ರಧಾನ ಭಾಗದಲ್ಲಿ ಗೋಪುರ ನಿರ್ಮಾಣವೂ ಸಾಗುತ್ತಿದೆ. ಇವೆಲ್ಲವನ್ನೂ ನಾವು ವಿಧಿಸಿಕೊಂಡ ಕಾಲಮಿತಿಯೊಳಗೆ ಮುಗಿಸುವುದೇ ನಮ್ಮ ಮುಂದಿರುವ ಸವಾಲು ಎಂದು ಶ್ರೀಗಳು ನುಡಿದರು.

ರಾಮ ದೇವರ ಸೇವೆಯೇ ದೇಶ ಸೇವೆ. ದೇಶ ಸೇವೆಯೇ ರಾಮ ದೇವರ ಸೇವೆ ಎಂಬಂತೆ ನಾವೆಲ್ಲರೂ ನಮ್ಮಿಂದ ಆದಷ್ಟು ಬಡವರ ಸೇವೆ ಮಾಡಬೇಕು. ಆ ಮೂಲಕ ರಾಮ ರಾಜ್ಯದ ಕನಸನ್ನು ಸಾಕಾರ ಮಾಡಲು ಶ್ರಮಿಸಬೇಕು ಎಂದರು.

ಮಂದಿರ ನಿರ್ಮಾಣ ಪೂರ್ವದಲ್ಲಿ, ಮಂದಿರ ಲೋಕಾರ್ಪಣೆಗೊಂಡ ಅನಂತರದಲ್ಲಿಯೂ ಭಕ್ತ ಸಹಕಾರ, ಶ್ರದ್ಧೆ, ಭಕ್ತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶದ ಮೂಲೆ ಮೂಲೆಗಳಿಂದ ಶ್ರೀರಾಮ ದೇವರನ್ನು ನೋಡಲು ನಿತ್ಯವೂ ಭಕ್ತರು ಬರುತ್ತಿದ್ದಾರೆ. ಭಕ್ತರ ದರ್ಶನಕ್ಕೆ ಯಾವುದೇ ಸಮಸ್ಯೆಯಾಗದಂತೆ ಎಲ್ಲ ವ್ಯವಸ್ಥಿತವಾಗಿ ನಡೆಯುತ್ತಿದೆ. ಈವರೆಗೆ ಕೋಟ್ಯಂತರ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಮಂದಿರ ಲೋಕಾರ್ಪಣೆಗೊಂಡ ದಿನದಿಂದ ಈವರೆಗೂ ಭಕ್ತರ ಸಂಖ್ಯೆಯಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ ಎಂದರು.

Advertisement

ಮೂರು ದಿನಗಳ ವಿಶೇಷ ಕಾರ್ಯಕ್ರಮ
ಬಾಲರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಮೂರು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಅಗ್ನಿ ದೇವತೆಗೆ ಆಹುತಿ, 6.6 ಲಕ್ಷ ರಾಮಮಂತ್ರ ಜಪ, ಹನುಮಾನ್‌ ಚಾಲೀಸ್‌, ಪುರುಷ ಸೂತ್ರ, ಶ್ರೀ ಸೂತ್ರ, ಆದಿತ್ಯ ಹೃದಯ ಸ್ತೋತ್ರ, ಅಥರ್ವಶೀರ್ಷ, ರಾಮರಕ್ಷಾಸ್ತೋತ್ರ, ರಾಮಸ್ತವರಾಜ ಆದಿ ಕಾ ಪಾರಾಯಣ ನೆರವೇರಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶನಿವಾರ ಭೇಟಿ ನೀಡಿದ್ದರು. ಆ ಪ್ರಯುಕ್ತ ಸಭಾ ಕಾರ್ಯಕ್ರಮವೂ ನಡೆದಿದೆ ಎಂದು ವಿವರಿಸಿದರು.
ಮೂರು ದಿನವೂ ರಾಮಕಥಾ ನಡೆಯಲಿದೆ. ಧಾರ್ಮಿಕ ಮುಖಂಡರು, ಸಾಧು ಸಂತರಿಂದ ಪ್ರವಚನ, ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಯಜ್ಞ ಯಾಗಾದಿಗಳು, ಪೂರ್ಣಾಹುತಿ, ಪಂಚಾಮೃತ ಅಭಿಷೇಕ ಹೀಗೆ ಎಲ್ಲವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.