ಬಳ್ಳಾರಿ: ಜೆಡಿಎಸ್, ಅಪ್ಪ ಮಕ್ಕಳ ಪಕ್ಷ. ಮಾಜಿ ಪ್ರಧಾನಿ ದೇವೇಗೌಡರದ್ದು ಕುಟುಂಬ ರಾಜಕಾರಣ ಎನ್ನುವ ಯಡಿಯೂರಪ್ಪನವರಿಗೆ ಶಿವಮೊಗ್ಗ, ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಕಾರ್ಯಕರ್ತರಾರೂ ಸಿಗಲಿಲ್ಲವಾ ಎಂದು ಸಚಿವ ಎಚ್.ಡಿ.ರೇವಣ್ಣ ಪ್ರಶ್ನಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ, ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ಶ್ರೀರಾಮುಲು ಸಹೋದರಿ ಜೆ. ಶಾಂತಾ ಅವರನ್ನು ಕಣಕ್ಕಿಳಿಸಲಾಗಿದೆ. ಈ ಎರಡೂ ಜಿಲ್ಲೆಗಳಲ್ಲಿ ಸ್ಪರ್ಧಿಸಲು ಬಿಜೆಪಿಯಲ್ಲಿ ಕಾರ್ಯಕರ್ತರೇ ಇರಲಿಲ್ವಾ. ಹಾಗಾದರೆ ಯಡಿಯೂರಪ್ಪ, ಶ್ರೀರಾಮುಲು ಅವರದ್ದು ಕುಟುಂಬ ರಾಜಕಾರಣ ಅಲ್ವಾ ಎಂದು ವಾಗ್ಧಾಳಿ ನಡೆಸಿದರು.
ವರ್ಗಾವಣೆ ದಂಧೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಶಿಕಾರಿಪುರ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಆಗಿ ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯಡಿಯೂರಪ್ಪನವರ ಅಳಿಯನ ವರ್ಗಾವಣೆಗೆ ಇವರು ಎಷ್ಟು ಹಣ ಕೊಟ್ಟಿದ್ದಾರಂತೆ. ಅವರನ್ನು ವರ್ಗಾಯಿಸುವಂತೆ ಸ್ವತಃ ಯಡಿಯೂರಪ್ಪನವರೇ ಬರೆದ ಪತ್ರ ನನ್ನ ಬಳಿಯಿದೆ. ಅವರು ಹೇಳಿದರೆ ಬಿಡುಗಡೆಗೊಳಿಸುವೆ. ವರ್ಗಾವಣೆಗೆ ಸೂಟ್‌ಕೇಸ್ ಪಡೆಯುವ ಸಂಸ್ಕೃತಿ ನಮ್ಮದಲ್ಲ. ಯಡಿಯೂರಪ್ಪನವರ ಆರೋಪ ಸುಳ್ಳು. ಅದೇನಿದ್ದರೂ ಬಿಜೆಪಿಯವರ ಸಂಸ್ಕೃತಿಯಾಗಿರಬಹುದು ಎಂದರು.
ರಾಜ್ಯದಲ್ಲಿನ ರೈತರ ಸಾಲ ಮನ್ನಾ ಮಾಡುವುದನ್ನು ಬಿಟ್ಟು, ತಂದೆ-ಮಕ್ಕಳು ವರ್ಗಾವಣೆ ದಂಧೆಯಲ್ಲಿ ನಿರತರಾಗಿದ್ದಾರೆ. ರಾಜ್ಯದ ಜನತೆಗೆ ಮೋಸ ಮಾಡುತ್ತಿದ್ದಾರೆ.
● ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ