Advertisement

ಜನಾರ್ಧನರೆಡ್ಡಿ ಬಳಸಿಕೊಂಡು ಸಿಎಂ ಆದವರು ಕಷ್ಟಕಾಲದಲ್ಲಿ ನೆರವಿಗೆ ನಿಲ್ಲಲಿ: ಯತ್ನಾಳ

04:36 PM Nov 01, 2022 | Team Udayavani |

ವಿಜಯಪುರ: ಮಾಜಿ ಸಚಿವ ಜನಾರ್ಧನರೆಡ್ಡಿ ಪರಿಶ್ರಮದಿಂದ ಬಿಜೆಪಿ ಗೆದ್ದಿದೆ. ಅವರನ್ನು ಬಳಸಿಕೊಂಡೇ ಕೆಲವರು ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದ್ದಾರೆ. ರೆಡ್ಡಿ ಅವರಿಂದ ನೆರವು ಪಡೆದವರು ಕಷ್ಟಕಾಲದಲ್ಲಿ ಅವರ ರಕ್ಷಣೆಗೆ ಧಾವಿಸಲಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕುಟುಕಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಷ್ಟ ಕಾಲದಲ್ಲಿ ತಮ್ಮ ಬೆಂಬಲಕ್ಕೆ ಬಾರದ ಬಿಜೆಪಿ ಪಕ್ಷದ ನಾಯಕರ ಮೇಲೆ ಮಾಜಿ ಸಚಿವ ಜನಾರ್ದನರೆಡ್ಡಿ ಅವರಿಗೆ ಮುನಿಸು ಸಹಜವಾಗಿದೆ. ಪಕ್ಷದ ಹಿರಿಯರು ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಒಂದು ಕಾಲದಲ್ಲಿ ರೆಡ್ಡಿ ಅವರಿಂದ ಬಿಜೆಪಿಗೆ ಅನುಕೂಲ ಮಾಡಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ. ಅಂಥವರು ಜನಾರ್ದನರೆಡ್ಡಿ ಸಹಾಯಕ್ಕೆ ಹೋಗಬೇಕಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಗುಡುಗಿದರು.

ಇದನ್ನೂ ಓದಿ:ನ.8 ಚಂದ್ರಗ್ರಹಣ: ಧರ್ಮಸ್ಥಳ; ದೇವರ ದರ್ಶನದ ಸಮಯ ಬದಲಾವಣೆ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದರೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾರಾದರೂ ಸಚಿವರಾಗಲಿ. ಉತ್ತಮ ಆಡಳಿತ ನೀಡುವ ಸಚಿವರನ್ನು ನಮ್ಮ ಜಿಲ್ಲೆಗೆ ಉಸ್ತುವಾರಿ ಮಾಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಯಾರನ್ನೇ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದರೂ ನನ್ನ ತಕರಾರು ಇಲ್ಲದೇ ಸ್ವಾಗತಿಸುತ್ತೇನೆ ಎಂದರು.

Advertisement

ಈಗಿರುವ ಪರಿಸ್ಥಿತಿಯಲ್ಲಿ ನನಗಂತೂ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ನಿರೀಕ್ಷೆ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೂ ಸಚಿವ ಸಂಪುಟ ವಿಸ್ತರಣೆ ಮಾಡುವ ಆಸಕ್ತಿ ಇಲ್ಲ. ಸಂಪುಟ ವಿಸ್ತರಣೆ ಮಾಡಿದರೆ ಸಹಜವಾಗಿ ಅಸಮಾಧಾನ, ಭಿನ್ನಮತ ಏಳುತ್ತದೆ. ಹೀಗಾಗಿ ಈ ಗೊಂದಲದ ಗೊಡವೆಯೇ ಬೇಡವೆಂದು ಸುರಕ್ಷಿತವಾಗಿ ಇನ್ನು ಆರು ತಿಂಗಳು ರಕ್ಷಣಾತ್ಮಕವಾಗಿ ಅಧಿಕಾರ ನಡೆಸಲು ಬಯಸಿದ್ದಾರೆ ಎಂದು ವ್ಯಾಖ್ಯಾನಿಸಿದರು.

ಬಣಜಿಗ ಸಮಾಜದ ಅವಹೇಳನ ಮಾತನಾಡಿದ್ದೇನೆಂದು ಕೆಲವರು ನನ್ನ ವಿರುದ್ದ ಅನಗತ್ಯವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಣಜಿಗ ಸಮುದಾಯದ ವಿರುದ್ದ ನನ್ನನ್ನು ಎತ್ತಿಕಟ್ಟಲು ಕೆಲವರು ಉದ್ದೇಶಪೂರ್ವಕವಾಗಿ ಈ ಕೆಲಸದಲ್ಲಿ ತೊಡಗಿದ್ದಾರೆ. ಹೀಗೆಲ್ಲಾ ಮಾಡಿದರೆ ಅವರ ಜನಪ್ರತಿನಿಧಿಗಳ ಸಂಖ್ಯೆ ಕಡಿಮೆ ಆಗಲಿದೆ. ಅದನ್ನು ಗಂಭೀರವಾಗಿ ತಿಳಿದುಕೊಳ್ಳಬೇಕು. ಹೀಗೆ ಮಾಡುತ್ತ ಸಾಗಿದರೆ ಭವಿಷ್ಯದಲ್ಲಿ ಅವರ ಮಹಾನ್ ಮೇರು ನಾಯಕನೂ ಔಟ್ ಆದರೆ ಆಶ್ಚರ್ಯವಿಲ್ಲ ಎಂದು ಪರೋಕ್ಷವಾಗಿ ತಮ್ಮ ರಾಜಕೀಯ ವಿರೋಧಿ ನಾಯಕರನ್ನು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next