ಬೆಂಗಳೂರು: ಮೀಟರ್ ಬಡ್ಡಿ ವಸೂಲಿ ಪ್ರಕರಣದಲ್ಲಿ ಸುದ್ದಿಯಾಗಿದ್ದ ರೌಡಿಶೀಟರ್ ಆಗಿರುವ ಯಶಸ್ವಿನಿ ಗೌಡಗೆ ಶ್ರೀರಾಮ ಸೇನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಶನಿವಾರ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಯಶಸ್ವಿನಿ ಅವರಿಗೆ ಅಭಿನಂದಿಸಿ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.
ಯಶಸ್ವಿನಿ ಸುಬ್ರಹ್ಮಣ್ಯ ಪುರ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಹಲವು ಪ್ರಕರಣಗಳು ಈಕೆಯ ಮೇಲೆ ದಾಖಲಾಗಿವೆ.ಯಶಸ್ವಿನಿ ವಿರುದ್ದ ಮೊದಲ ಗಂಡನನ್ನು ಹತ್ಯೆಗೈದ ಆರೋಪವೂ ಇದೆ.
ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ ಯಶಸ್ವಿನಿ ‘ನಾವೇನು ಸಮಾಜಸೇವೆ ಮಾಡಬಾರದೇ, ನಾನು ಯಾರಿಗೂ ಹಲ್ಲೆ ನಡೆಸಿಲ್ಲ. ಬಡ್ಡಿ ವಸೂಲಿ ಹಲ್ಲೆ ದೂರು ನೀಡಿದವರು ಹೈಕೋರ್ಟ್‌ನಲ್ಲಿ ರಾಜಿಯಾಗಿದ್ದಾರೆ. ಎಲ್ಲಾ ಆರೋಪಗಳಿಗೆ ದಾಖಲೆ ಸಹಿತ ಉತ್ತರ ನೀಡುತ್ತೇನೆ’ ಎಂದಿದ್ದಾರೆ.
ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿ ‘ರೌಡಿ ಶೀಟರ್ ಅನ್ನುವುದು ಇವತ್ತಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಹಲವು ರೌಡಿ ಶೀಟರ್ ಕೇಸ್‌ಗಳನ್ನು ದಾಖಲಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಅವರು ರೌಡಿಗಳೇ’ ಎಂದು ಪ್ರಶ್ನಿಸಿದರು.
ಯಶಸ್ವಿನಿ ಅವರ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿವೆ, ಅವರೆಲ್ಲಿಯಾದರು ಅಪರಾಧಿ ಎಂದು ತೀರ್ಪು ಬಂದರೆ ಅವರನ್ನು ಸಂಘಟನೆಯಿಂದ ಮುಕ್ತ ಮಾಡುತ್ತೇವೆ ಎಂದರು.