Advertisement

ಸೂರಿಲ್ಲದ ಬಡ ಕಲಾವಿದನಿಗೆ ‘ಯಕ್ಷಾಶ್ರಯ’

01:23 PM Dec 25, 2017 | Team Udayavani |

ಕೊಣಾಜೆ: ಕಳೆದ ಮಳೆಗಾಲದಲ್ಲಿ ಮನೆ ಕಳಕೊಂಡು ಅತಂತ್ರ ಸ್ಥಿತಿಯಲ್ಲಿದ್ದ ಕಟೀಲು ಮೇಳದ ನೇಪಥ್ಯ ಕಲಾವಿದ ಕೊಣಾಜೆ ಅಣ್ಣೆರೆಪಾಲು ನಿವಾಸಿ ದೇವಪ್ಪ ಗೌಡ ಅವರಿಗೆ ಸೂರು ಸಿಕ್ಕಿದೆ. ಯಕ್ಷದ್ರುವ ಪಟ್ಲ ಫೌಂಡೇಷನ್‌ ಆಶ್ರಯದಲ್ಲಿ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ದೇವಪ್ಪ ಗೌಡರ ನೂತನ ಮನೆ ಕೆಲಸ ಪೂರ್ಣಗೊಂ ಡಿದ್ದು, ಪಟ್ಲ ಯಕ್ಷಾಶ್ರಯ ಯೋಜನೆ ಯಡಿ ನಿರ್ಮಾಣವಾಗಿರುವ ‘ಶ್ರೀದೇವಿ ನಿಲಯ’ ಡಿ. 25ರಂದು ಉದ್ಘಾಟನೆಯಾಗಲಿದೆ.

Advertisement

ಕಟೀಲು ಮೇಳದಲ್ಲಿ ಏಳು ವರ್ಷಗಳಿಂದ ನೇಪಥ್ಯ ಕಲಾವಿದರಾಗಿರುವ ದೇವಪ್ಪ ಗೌಡ ಕೊಣಾಜೆ ಸಮೀಪದ ಅಣ್ಣೆರೆಪಾಲು ಎಂಬಲ್ಲಿ ತಮ್ಮ ಸಹೋದರಿ, ತಾಯಿಯೊಂದಿಗೆ ವಾಸವಿದ್ದರು. ಕಳೆದ ಮಳೆಗಾಲದಲ್ಲಿ ಗಾಳಿ- ಮಳೆಗೆ ಹಳೆಯ ಹೆಂಚಿನ ಮನೆ ಸಂಪೂರ್ಣ ಧರಾಶಾಹಿಯಾಗಿತ್ತು.

ಸ್ಥಳೀಯರು, ಸಮಾಜದವರು ಸಹಕಾರ ನೀಡಿದರೂ ಬಡತನದ ಕಾರಣದಿಂದ ಮನೆ ಕಟ್ಟುವುದು ಸಾಧ್ಯವಾಗಲಿಲ್ಲ. ಸ್ಥಳೀಯ ಗ್ರಾ.ಪಂ. ಸದಸ್ಯ ರಾಮಚಂದ್ರ ಎಂ. ಹಾಗೂ ಇತರರ ಕೋರಿಕೆಯ ಮೇರೆಗೆ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ನೇತೃತ್ವದಲ್ಲಿ ಯಕ್ಷದ್ರುವ ಪಟ್ಲ ಫೌಂಡೇಷನ್‌ನ ಪಟ್ಲ ಸತೀಶ್‌ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ, ಮನೆ
ನಿರ್ಮಾಣಕ್ಕೆ ಸಮ್ಮತಿಸಿದರು.

ಸಂಘಟನೆಗಳ ಶ್ರಮದಾನ
ಪಟ್ಲ ಯಕ್ಷಾಶ್ರಯ ಯೋಜನೆಯಡಿ 2 ಲಕ್ಷ ರೂ., ಪ್ರಕೃತಿ ವಿಕೋಪದಡಿ ಕೊಣಾಜೆ ಗ್ರಾ.ಪಂ. ಮೂಲಕ ಜಿಲ್ಲಾಡಳಿತದಿಂದ ಒಂದು ಲಕ್ಷ ರೂ. ನೆರವು ಸಿಕ್ಕಿತು. ಒಟ್ಟು 5 ಲಕ್ಷ ರೂ. ವೆಚ್ಚದ ಮನೆ ನಿರ್ಮಾಣದಲ್ಲಿ ಶಾರದಾನಗರದ ಸಪ್ತಸ್ವರ ಕಲಾತಂಡ ಮತ್ತು ಗುಡ್ಡುಪಾಲಿನ ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸದಸ್ಯರು ಪಟ್ಲ ಯಕ್ಷಾಶ್ರಯದೊಂದಿಗೆ ಶ್ರಮದಾನ ಮಾಡಿದ್ದು, ಗ್ರಾ.ಪಂ. ಸದಸ್ಯ ರಾಮಚಂದ್ರ ಗಟ್ಟಿ ಮೇಲ್ತೋಟ ಅವರ ಮಾರ್ಗದರ್ಶನದಲ್ಲಿ 6 ತಿಂಗಳಲ್ಲಿ ಮನೆ ಸುಂದರವಾಗಿ ಪೂರ್ಣಗೊಂಡಿದೆ ಎಂದು ಕುಡುಬಿ ಸಮುದಾಯದ ಮುಖಂಡ ನರ್ಸು ಗೌಡ ವಿವರಿಸಿದರು.

ಹೇಗಿದೆ ಮನೆ?
ಸುಮಾರು 600 ಚದರಡಿಯ ಮನೆಯಲ್ಲಿ ಒಂದು ಹಾಲ್‌, ಒಂದು ಅಡುಗೆ ಕೋಣೆ ಮತ್ತು ಒಂದು ಬೆಡ್‌ರೂಂ ಇದ್ದು, ನೆಲಕ್ಕೆ ಟೈಲ್ಸ್‌ ಅಳವಡಿಸಲಾಗಿದೆ.

Advertisement

ಡಿ. 25ಕ್ಕೆ ಉದ್ಘಾಟನೆ
ಪಟ್ಲ ಯಕ್ಷಾಶ್ರಯ ಯೋಜನೆಯಡಿ ನಿರ್ಮಾಣಗೊಂಡ ಮೊದಲ ಮನೆ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಐಕಳ ಹರೀಶ್‌ ಶೆಟ್ಟಿ, ಯಕ್ಷಗಾನ ಭಾಗವತರಾದ ಪಟ್ಲ ಸತೀಶ್‌ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಡಿ. 25ರಂದು ಉದ್ಘಾಟನೆಗೊಳ್ಳಲಿದೆ.

ಮನೆ ಕಳಕೊಂಡಾಗ ಸಂಪೂರ್ಣ ಕುಗ್ಗಿ ಹೋಗಿದ್ದೆ. ಆಗ ನೆರವಿಗೆ ಬಂದವರು ಪಟ್ಲ ಸತೀಶ್‌ ಶೆಟ್ಟಿ ಅವರು. ಇದರೊಂದಿಗೆ ಸಪ್ತಸ್ವರ ಕಲಾತಂಡ ಹಾಗೂ ರಾಮಾಜಂನೇಯ ವ್ಯಾಯಾಮ ಶಾಲೆಯ ಸದಸ್ಯರ ಸಹಕಾರದಿಂದ ಸುಂದರವಾದ ಮನೆ ನಿರ್ಮಾಣವಾಗಿದೆ. ನಾನು ಅವರೆಲ್ಲರಿಗೂ ಋಣಿ.
ದೇವಪ್ಪ ಗೌಡ
  ಕಟೀಲು ಮೇಳದ ನೇಪಥ್ಯ ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next