Advertisement

“ಯುವಜನರಲ್ಲಿ ಯಕ್ಷಗಾನ ಅಭಿರುಚಿ ಹೆಚ್ಚಳ ಶ್ಲಾಘನೀಯ’

03:45 AM Jul 03, 2017 | Team Udayavani |

ಉಡುಪಿ: ಪ್ರಸ್ತುತ ಯುವಜನತೆ ಮೊಬೈಲ್‌, ಇಂಟರ್‌ನೆಟ್‌, ಫೇಸ್‌ಬುಕ್‌ನಂತಹ ಆಧುನಿಕ ಮಾಧ್ಯಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಪರಿಣಾಮ ದೈಹಿಕ ಪರಿಶ್ರಮಕ್ಕೆ ಸಂಬಂಧಿಸಿದ ಆಟೋಟಗಳು, ಕ್ರೀಡೆಗಳು, ಸಾಂಸ್ಕೃತಿಕ ಕಲಾ ಪ್ರಕಾರಗಳ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಅಲ್ಲಲ್ಲಿ ಯುವಜನರು ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರು ನುಡಿದರು.

Advertisement

ಶಿರ್ವ ಮಂಚಕಲ್ಲಿನ ಕುಶಲ ಶೇಖರ ಸಭಾಭವನದ ಪದ್ದಕ್ಕ ಸುಬ್ಬಣ್ಣ ಶೆಟ್ಟಿ ವೇದಿಕೆಯಲ್ಲಿ ಪಂಜಿಮಾರಿನ ಹರೀಶ್‌ ಬಂಗೇರ ಮತ್ತು ಮನೆಯವರ ಆಶ್ರಯದಲ್ಲಿ ನಡೆದ ಕಲಾ ಸಾಧಕರಿಗೆ ಸಮ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಯಕ್ಷಗಾನ ಕಲೆಯನ್ನು ಉಳಿಸಿ
ಜಾನಪದ ಕಲೆಗಳಲ್ಲಿ ಒಂದಾದ “ಕರಾವಳಿಯ ಗಂಡುಕಲೆ’ ಎನಿಸಿಕೊಂಡ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಬೇಕಾದರೆ ಕಲಾವಿದರನ್ನು ಗೌರವಿಸುವುದರೊಂದಿಗೆ ಕಲೆಯ ಬಗ್ಗೆ ಯುವಜನತೆ ಆಕರ್ಷಿತರಾಗುವಂತೆ ಮಾಡಬೇಕಾಗಿದೆ. ತನ್ಮೂಲಕ ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯತ್ನಶೀಲರಾಗಬೇಕೆಂದು ಕರೆ ನೀಡಿದರು.

ಸಮ್ಮಾನ
ಕಲಾ ಸಾಧಕರಾದ ಸ್ತ್ರೀ ಪಾತ್ರಧಾರಿ ರಕ್ಷಿತ್‌ ಪೂಜಾರಿ ಹಾಗೂ ಶ್ಯಾಮ ರಾವ್‌ ಅವರನ್ನು ಶ್ರೀ ರಮಾನಂದ ಗುರೂಜೀ ಮತ್ತು ಆಗಮ ವಿದ್ವಾಂಸ ಕೇಂಜ ಶ್ರೀಧರ ತಂತ್ರಿ ಅವರು ಸಮ್ಮಾನಿಸಿದರು.

ಉಪಸ್ಥಿತಿ
ಕುತ್ಯಾರು ನವೀನ್‌ ಶೆಟ್ಟಿ, ಮುಲ್ಕಾಡಿ ರೋಹಿತ್‌ ಭಟ್‌, ಪಂಜಿಮಾರು ದೊಡ್ಡಮನೆ ವೀರೇಂದ್ರ ಶೆಟ್ಟಿ, ಕಳತ್ತೂರು ಕುಶಲ ಶೆಟ್ಟಿ, ಯಕ್ಷಗಾನ ಕಲಾವಿದ ದಾಸಪ್ಪ ರೈ, ಪಂಜಿಮಾರು ತುಕ್ರ ಬಂಗೇರ ಉಪಸ್ಥಿತರಿದ್ದರು. “ಗೆಜ್ಜೆ ಪೂಜೆ’ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

Advertisement

ಗೌರವಾರ್ಪಣೆ
ಇದೇ ಸಂದರ್ಭ “ಧಾರ್ಮಿಕ ಕ್ಷೇತ್ರದ ಕ್ಷಿಪ್ರ ಕ್ರಾಂತಿಯ ಹರಿಕಾರ’, ನೊಂದು ಬಂದ ಜನತೆಗೆ ಸದ್ದಿಲ್ಲದೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ, ಜನರಿಂದಲೇ ಗುರುಪಟ್ಟಕ್ಕೇರಿದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರನ್ನು ಸಾರ್ವಜನಿಕವಾಗಿ ಗೌರವಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next