Advertisement
ಮಂಗಳೂರಿನ ಕರ್ಣಾಟಕ ಬ್ಯಾಂಕ್ ಮುಖ್ಯ ಪ್ರಾಯೋಜಕತ್ವದಲ್ಲಿ ಹಾಗೂ ಹಲವಾರು ಸಂಸ್ಥೆಗಳು- ಊರ, ಪರವೂರ ದಾನಿಗಳ ಸಹಕಾರದಿಂದ ಬೆಳೆದು ಬಂದ ಯಕ್ಷಲಹರಿ ಸಂಸ್ಥೆ ಇದೀಗ 27ನೇ ವರ್ಷದ ಯಕ್ಷಗಾನ ಕಲಾ ಪರ್ವದ ಹೊಸ್ತಿಲಲ್ಲಿದೆ. ಜು.31ರಿಂದ ಆಗಸ್ಟ್ 6ರ ತನಕ ತಾಳಮದ್ದಳೆ “ಕೃಷ್ಣಸ್ತು ಭಗವಾನ್ ಸ್ವಯಮ್’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿದೆ. ಪ್ರಸ್ತುತ ರೊ| ಪಿ. ಸತೀಶ್ ರಾವ್ ಅವರ ಅಧ್ಯಕ್ಷತೆಯಲ್ಲಿ, ಯುಗಪುರುಷ ಸಂಸ್ಥೆಯ ಭುವನಾಭಿರಾಮ ಉಡುಪ ಅವರ ಸಹಕಾರದಲ್ಲಿ 14 ಜನ ಸದಸ್ಯರ ತಂಡ ಯಕ್ಷಲಹರಿಯಲ್ಲಿ ತೊಡಗಿಸಿಕೊಂಡಿದೆ. ಈ ವರ್ಷ ಹಿರಿಯ ಕಲಾವಿದರಾದ ವಸಂತ ಶೆಟ್ಟಿ ಮುಂಡ್ಕೂರು, ಉಮೇಶ್ ಶೆಟ್ಟಿ ಮಚ್ಚಾರು, ಉಮೇಶ್ ಮೊಯಿಲಿ, ಸುರೇಂದ್ರ ಪೈ ಸಂಪಿಗೆ, ಪೂರ್ಣಿಮಾ ಯತೀಶ್ ರೈ, ಅನಂತರಾಮ ರಾವ್ ಬೆಳ್ಳಾಯರು, ವಾಸುದೇವ ಆಚಾರ್ಯ ಕುಳಾಯಿ, ರವಿ ಭಟ್ ಪಡುಬಿದ್ರಿ ಅವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಎಲೆಮರೆಯ ಕಾಯಿಯಂತಿರುವ ಹಿರಿಯ ಚೆಂಡೆ ವಾದಕರು ಸುಬ್ರಾಯ ಭಟ್ ಮುಚ್ಚಾರು. ಪ್ರಾಥಮಿಕ ಶಾಲಾ ಹಂತದಲ್ಲಿ ಯಕ್ಷಗಾನದ ಕಡೆಗೆ ಆಕರ್ಷಿತರಾದರು. ಮೂಡಬಿದಿರೆಯ ಸಣ್ಣಪ್ಪನವರಿಂದ ಯಕ್ಷಗಾನ ನಾಟ್ಯಾಭ್ಯಾಸ, ಚೆಂಡೆ ಮದ್ದಲೆಯ ಪ್ರಾಥಮಿಕ ಪಾಠ ಕಲಿತು ಮುಂದೆ ಕೀರ್ತಿಶೇಷ ಹಿರಿಯ ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಸೂಕ್ಷ್ಮತೆಗಳನ್ನು ಕರಗತ ಮಡಿಕೊಂಡರು. ಮುಂದಕ್ಕೆ ಕುದ್ರೆಕೋಡ್ಲು ರಾಮ ಭಟ್ ಹಾಗೂ ಕತ್ತಲ್‌ಸಾರ್ ಅನಂತ ಶೆಣೈ ಮಾಸ್ತರ್ ಅವರಲ್ಲಿ ಚೆಂಡೆ ಮದ್ದಲೆಯ ವಾದನದ ಕೌಶಲವನ್ನು ಅರಿತುಕೊಂಡರು. ಯಕ್ಷಗಾನ ಆಸಕ್ತಿಯ ಜತೆಗೆ ಸುಬ್ರಾಯ ಭಟ್ಟರು ಸಂಗೀತದತ್ತಲೂ ತೀವ್ರ ಸೆಳೆತವನ್ನು ಹೊಂದಿದ್ದರು. ಉಡುಪಿ ವಾಸುದೇವ ಭಟ್ ಅವರ “ನಾದವೈಭವಂ’ ಸಂಸ್ಥೆಯಲ್ಲಿ ಕೊಳಲು, ಮೃದಂಗ, ಹಾರ್ಮೋನಿಯಂನಂತಹ ಪಕ್ಕವಾದ್ಯಗಳ ವಾದನವನ್ನು ಅಭ್ಯಾಸ ಮಾಡಿದರು. ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರೂ ಆದರು. ಕಟೀಲು ಮೇಳದಲ್ಲಿ ಬದಲಿ ಚೆಂಡೆವಾದಕನಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಇರಾ ಗೋಪಾಲಕೃಷ್ಣ ಭಾಗವತರಿಗೆ ಹಿಮ್ಮೇಳ ವಾದಕನಾಗಿ ತಿರುಗಾಟ ನಡೆಸಿದ್ದಾರೆ. ತನ್ನ ಸಹೋದರನ ಜತೆಗೆ ಮುಚ್ಚಾರು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಮೇಳವನ್ನು ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ಮೇಳ ನಷ್ಟಕ್ಕೊಳಗಾದ ಬಳಿಕ ದೂರದ ಮುಂಬಯಿಗೆ ಪ್ರಯಾಣ ಬೆಳೆಸಿ, ಹೊಟೇಲು ಉದ್ಯಮ ನಡೆಸುತ್ತಿ ದ್ದಾಗಲೂ ಅಲ್ಲಿದ್ದ ಊರ ಕಲಾವಿದರಿಗೆ ಆಸರೆಯನ್ನಿತ್ತು ಕಲಾ ಪೋಷಣೆ ಯನ್ನು ಮಾಡಿದ್ದಾರೆ. ಈಗಿನ ಯುವಕರ ಚೆಂಡೆ – ಮದ್ದಲೆ ವಾದನ ಕಸರತ್ತು ಇಷ್ಟವಾಗುವುದಿಲ್ಲ ಎನ್ನುತ್ತ, ಗತಕಾಲದ ಹಿತಮಿತ ಹಿಮ್ಮೇಳ ವಾದನದ ದಿನಗಳನ್ನು ಸುಬ್ರಾಯ ಭಟ್ಟರು ನೆನಪಿಸಿಕೊಳ್ಳುತ್ತಾರೆ. ಅವರ ಕಲಾ ಸೇವೆಯನ್ನು ಗುರುತಿಸಿ ಯಕ್ಷಲಹರಿ ತನ್ನ 27ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಮ್ಮಾನಿಸಲಿದೆ.
Related Articles
Advertisement