Advertisement

Pilikula: 10 ವರ್ಷಗಳ ಬಳಿಕ ನಡೆಯಲಿದೆ ಕಂಬಳ!

03:20 PM Oct 22, 2024 | Team Udayavani |

ಪಿಲಿಕುಳ: 10 ವರ್ಷದ ಹಿಂದೆ ನಿಂತುಹೋಗಿದ್ದ ಸರಕಾರಿ ಪ್ರಾಯೋಜಿತ ಪಿಲಿಕುಳ ಕಂಬಳ ನ.17, 18ರಂದು ನಡೆಯಲಿದ್ದು, ಕರೆಗಳನ್ನು ಮರುಸಜ್ಜುಗೊಳಿಸುವ ಕಾರ್ಯ ಭರದಿಂದ ನಡೆದಿದೆ.

Advertisement

ಕಂಬಳ ನಡೆಸದೆ ಇರುವುದರಿಂದ ಕರೆಗಳಲ್ಲಿ ಹೂಳು ತುಂಬಿ, ಗಿಡ- ಗಂಟಿ ಬೆಳೆದಿತ್ತು. ಕರೆ ಸಂಪೂರ್ಣವಾಗಿ ಪಾಳುಬಿದ್ದ ಸ್ವರೂಪದಲ್ಲಿತ್ತು. ಇದೀಗ ಕಂಬಳ ಕರೆಯ ಮರುನಿರ್ಮಾಣ, ನೀರು ಹಾಗೂ ಇತರ ಸೌಲಭ್ಯಗಳನ್ನು ವ್ಯವಸ್ಥೆ ಮುಂತಾದ ಕೆಲಸಗಳು ನಡೆಸಲಾಗುತ್ತಿದೆ.

ಸೆ.4ರಂದು ನೂತನ ಕರೆಗೆ ಮುಹೂರ್ತ ನಡೆದಿತ್ತು. ಪಿಲಿಕುಳ ಜೋಡುಕರೆ ಕಂಬಳದ ಕರೆ 133 ಮೀ. (180 ಕೋಲು) ಉದ್ದವಿದೆ. ಸುಮಾರು 11 ಸಾವಿರ ಕೆಂಪುಕಲ್ಲು 60 ಲೋಡ್‌ ಮರಳು ಹಾಗೂ ಜಲ್ಲಿ ಹುಡಿ ಬಳಸಿ ಕಂಬಳ ಗದ್ದೆ ಸಿದ್ದಪಡಿಸಲಾಗಿದೆ. ತಿರುವೈಲುಗುತ್ತು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳದ ಸ್ಥಾಪಕಾಧ್ಯಕ್ಷ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು ಅವರು ಕರೆ ನಿರ್ಮಾಣದ ಉಸ್ತುವಾರಿ ನೋಡಿಕೊಂಡಿದ್ದಾರೆ.

2014ರಲ್ಲಿ ಕೊನೆಯ ಕಂಬಳ
ಪಿಲಿಕುಳದಲ್ಲಿ 2014ರಲ್ಲಿ ಕೊನೆಯ ಕಂಬಳ ನಡೆದಿತ್ತು. ಗುತ್ತಿನ ಮನೆಯ ಮುಂಭಾಗದಲ್ಲಿರುವ “ನೇತ್ರಾವತಿ- ಫಲ್ಗುಣಿ’ ಜೋಡುಕರೆಯಲ್ಲಿ ಕಂಬಳ ವಿಜೃಂಭಣೆಯಿಂದ ನಡೆದಿದ್ದು 85 ಜತೆ ಕೋಣಗಳು ಪಾಲ್ಗೊಂಡಿದ್ದವು. ಆದರೆ ಆ ಬಳಿಕ ಕಂಬಳದ ವಿರುದ್ಧ ಪೆಟಾ ಸಂಸೆœ ನ್ಯಾಯಾಲಯದಲ್ಲಿ ಕಾನೂನು ಸಮರ ಆರಂಭಿಸಿದ ಪರಿಣಾಮ ಜಿಲ್ಲಾಡಳಿತ ಪಿಲಿಕುಳದಲ್ಲಿ ಕಂಬಳವನ್ನು ಸ್ಥಗಿತಗೊಳಿಸಿತ್ತು. ಇದೀಗ ಕಾನೂನಿಗೆ ತಿದ್ದುಪಡಿ ತಂದು ಕಾನೂನಾತ್ಮಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. 2018ರ ಕಂಬಳ ಋತುವಿನಲ್ಲೂ ಜಿಲ್ಲಾಡಳಿತ ಕಂಬಳ ನಡೆಸಲು ನಿರ್ಧರಿಸಿದ್ದರೂ ಅನುದಾನ ದೊರೆಯದ ಹಿನ್ನಲೆಯಲ್ಲಿ ಪ್ರಸ್ತಾವನೆಯನ್ನು ಕೈಬಿಡಲಾಗಿತ್ತು.

ಪಿಲಿಕುಳ ಕಂಬಳ ಯಶಸ್ವಿಯಾಗಿ ನಡೆಸುವ ಪೂರ್ವಭಾವಿಯಾಗಿ ಕಂಬಳದ ಶಾಶ್ವತ ಕರೆಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಆಳ್ವಾಸ್‌ ಸಂಸ್ಥೆಯ ಡಾ|ಎಂ.ಮೋಹನ್‌ ಆಳ್ವ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮಂಜುನಾಥ ಭಂಡಾರಿ ಸಹಿತ ಹಲವು ಪ್ರಮುಖರ ಮಾರ್ಗದರ್ಶನ, ಸಹಕಾರದಲ್ಲಿ ಸಿದ್ದತೆಗಳನ್ನು ನಡೆಸಲಾಗುತ್ತಿದೆ.
-ನವೀನ್‌ಚಂದ್ರ ಆಳ್ವ, ಉಪಾಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

Advertisement

ನ.14ರಿಂದ 7 ದಿನದ ಉತ್ಸವ
ಜಿಲ್ಲಾಧಿಕಾರಿ  ಮುಲ್ಲೈ ಮುಗಿಲನ್‌ ನಿರ್ದೇಶನದಂತೆ ಪಿಲಿಕುಳ ಕಂಬಳ ಹಾಗೂ 7 ದಿನಗಳ ತುಳುನಾಡೋತ್ಸವ ನ.14ರಿಂದ 21ರವರೆಗೆ ನಡೆಯಲಿದೆ. ಮಕ್ಕಳ ಹಬ್ಬ, ವಿಜ್ಞಾನ ಮೇಳ, ಕೃಷಿ ಮೇಳ, ಆಹಾರ ಉತ್ಸವ, ಸಾಂಸ್ಕೃತಿಕ ಮೇಳ, ಕೆಸರ್‌ಡೊಂಜಿ ದಿನ, ದೋಣಿಯಲ್ಲಿ ಸಾಹಸ ಕ್ರೀಡೆ ನಡೆಸುವ ಸಂಬಂಧ ಮಾತುಕತೆ ನಡೆಯುತ್ತಿದೆ.

ನವೆಂಬರ್‌ 9ರ ಬದಲು ನ. 17
‘ವಿಧಾನಪರಿಷತ್‌ ಚುನಾವಣೆಗಾಗಿ ನೀತಿ ಸಂಹಿತೆ ಇದ್ದ ಕಾರಣದಿಂದ ಕಂಬಳ ಸಮಿತಿ ಈಗಾಗಲೇ ನಿಗದಿ ಮಾಡಿದ್ದ ಪಿಲಿಕುಳ ಕಂಬಳದ ದಿನಾಂಕವನ್ನು ನ.9ರ ಬದಲಿಗೆ ನ.17, ನ.18ಕ್ಕೆ ಮರುನಿಗದಿಮಾಡಲಾಗಿದೆ. ಕರೆ ನಿರ್ಮಾಣ ಬಹುತೇಕ ಪೂರ್ಣವಾಗಿದೆ’ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ|ದೇವಿಪ್ರಸಾದ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next