Advertisement

ಪರಂಪರೆ ಮುಂದೊಯ್ದ ವೀರ ಸುಧನ್ವ ಕಾಳಗ 

06:00 AM Oct 05, 2018 | |

ಕಲಾಧರ ಯಕ್ಷರಂಗ ಬಳಗ (ರಿ.) ಜಲವಳ್ಳಿ, ಹೊನ್ನಾವರ ಇವರು ಕೊಡವೂರು ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ಪ್ರಸ್ತುತ ಪಡಿಸಿದ ಸೀಮಿತ ಅವಧಿಯ ಯಕ್ಷಗಾನ ವೀರ ಸುಧನ್ವ ಕಾಳಗ ಜನಮೆಚ್ಚುಗೆ ಗಳಿಸಿತು. ಪೂರ್ವ ಪೀಠಿಕೆ ನಂತರ ಸುಧನ್ವನ ಪ್ರವೇಶ, ಬರುವಾಗಲೇ ಅಪ್ಪ ಹಂಸಧ್ವಜನಿಂದ ವೀರಾಗ್ರೇಸರ ಪಾರ್ಥನನ್ನು ಯುದ್ಧ ಮಾಡಿ ಸೋಲಿಸುವ ಪಂಥಾಹ್ವನವನ್ನು ಪಡೆದು ನೇರವಾಗಿ ತನ್ನ ಮಡದಿ ಪ್ರಭಾವತಿ ಅಂತಃಪುರವನ್ನು ಪ್ರವೇಶಿಸುತ್ತಾನೆ. ಯುದ್ಧ ಕವಚವನ್ನು ಧರಿಸಿ ಬಂದ ಸುಧನ್ವನನ್ನು ಕಂಡ ಪ್ರಭಾವತಿ ಹೌಹಾರುತ್ತಾಳೆ. ಪಾಂಡವರ ಆಶ್ವಮೇಧಯಾಗದ ಕುದುರೆಯನ್ನು ಕಟ್ಟಿ ಹಾಕಿದ ಕಾರಣಕ್ಕಾಗಿ ಅದಕ್ಕೆ ಬೆಂಗಾವಲಾಗಿ ಬಂದಿರುವ ಅರ್ಜುನನನ್ನು ಯುದ್ಧದಲ್ಲಿ ಎದುರಿಸಲು ಹೋಗುತ್ತಿರುವುದಾಗಿ ಸುಧನ್ವ ಹೇಳಿದಾಗ ಅರ್ಜುನನನ್ನು ಸೋಲಿಸುವುದು ಸಾಧ್ಯವೇ ? ಒಂದು ವೇಳೆ ಸಾಧ್ಯವಾದರೂ ಶ್ರೀ ಕೃಷ್ಣ ಅವನನ್ನು ಸೋಲಲು ಬಿಡುವನೆ ಎಂದು ವ್ಯಥಿಸಿದಾಗ ತನ್ನ ಆರಾಧ್ಯ ದೇವರನ್ನು ಯುದ್ಧರಂಗದಲ್ಲಿ ಕಾಣುವ ಸುಯೋಗ ಈ ಕಾರಣದಿಂದಲಾದರೂ ಸಿಗಲಿ ಎಂದು ಸುಧನ್ವ ಆಕೆಯನ್ನು ಸಮಾಧಾನ ಪಡಿಸುತ್ತಾನೆ. ಆಗ ಪ್ರಭಾವತಿಯು “ಸುತಹೀನ ಜೀವನವು ತರವಲ್ಲ’ ಎಂದು ಸಂತಾನ ಭಿಕ್ಷೆಯನ್ನು ಬೇಡಲು ಪ್ರಭಾವತಿಯ ಕೋರಿಕೆಯನ್ನು ತಿರಸ್ಕರಿಸಲಾಗದೆ “ಸತಿಗೆ ಪೋಡಶದ ಋತು ಸಮಯ…’ “ಜನಕನಾಜ್ಞೆಯ ಮೀರಿ ವನಿತೆಗೆ ಋತುದಾನವನು ಕೊಟ್ಟುದರಿಂದ ಪಾತಕವು|| ತನಗಿಲ್ಲವೆನ್ನುತಲಿ’ ಸತಿಯ ಕೋರಿಕೆಯನ್ನು ಮನ್ನಿಸಿ ನಂತರ ಆಕೆಯಿಂದ ವೀರೋಚಿತ ಬೀಳ್ಕೊಡುಗೆಯನ್ನು ಪಡೆದು ಮನಮುಟ್ಟುವಂತೆ ಅಭಿನಯಿಸಿದವರು ಸುಧನ್ವನಾಗಿ ಕಾರ್ತಿಕ್‌ ಚಿಟ್ಟಾಣಿ ಹಾಗೂ ಪ್ರಭಾವತಿಯಾಗಿ ನೀಲ್ಗೊàಡು ಶಂಕರ್‌.

Advertisement

ಯುದ್ಧದಲ್ಲಿ ವೃಷಕೇತು (ವಿನಾಯಕ್‌) ಹಾಗೂ ಪ್ರದ್ಯುಮ್ನ (ಪರಿಶುದ್ಧ ಆಚಾರ್ಯ) ಮುಂತಾದವರನ್ನು ಸೋಲಿಸಿ ಸುಧನ್ವ ಮುಂದುವರಿಯುತ್ತಾನೆ. ಸುಧನ್ವಾರ್ಜರು ಒಬ್ಬರನ್ನೊಬ್ಬರು ಮೂದಲಿಸಿಕೊಂಡು ತಮ್ಮ ಹೆಗ್ಗಳಿಕೆಯನ್ನು ಪ್ರಸ್ತುತ ಪಡಿಸುವ ಭಾವಾಭಿನಯ ಹಾಗೂ ಹೆಜ್ಜೆಗಾರಿಕೆ ಪ್ರಶಂಸನೀಯವಾಗಿತ್ತು. ಕಾರ್ತಿಕ್‌ ಚಿಟ್ಟಾಣಿ ಹಾಗೂ ಅರ್ಜುನನಾಗಿ ಜಲವಳ್ಳಿ ವಿದ್ಯಾಧರ ರಾವ್‌ ತಮ್ಮ ತೀರ್ಥರೂಪರ ಸಮರ್ಥ ರಾಯಭಾರಿಗಳು ಎನ್ನುವುದನ್ನು ನಿರೂಪಿಸಿದರು. ಯುದ್ಧದಲ್ಲಿ ಸೋತ ಅರ್ಜುನ ಸಹಾಯಕ್ಕಾಗಿ ಕೃಷ್ಣನನ್ನು ಪ್ರಾರ್ಥಿಸುತ್ತಾನೆ. ಬಹಳಷ್ಟು ಅವಕಾಶವಿಲ್ಲದಿದ್ದರೂ ಶ್ರೀಕೃಷ್ಣ ಪಾತ್ರಧಾರಿ ವಿನಯ ಭಟ್‌ ಯಥೋಚಿತವಾಗಿ ತಮ್ಮ ಪಾತ್ರ ನಿರ್ವಹಿಸಿದರು. ಕೃಷ್ಣನನ್ನು ಕಂಡು ಆನಂದ ತುಂದಿಲನಾದ ಸುಧನ್ವನು ,ಅರ್ಜುನನ ಬೆನ್ನಿಗೆ ನೀನು ನಿಂತಿದ್ದರೂ ಆತನ ಬಾಣ ಪ್ರಯೋಗವನ್ನು ನಿಷ#ಲಗೊಳಿಸದಿದ್ದರೆ ನಾನು ನಿನ್ನ ಭಕ್ತನಲ್ಲ ಎಂದು ಕೃಷ್ಣ ಭಕ್ತಿಯನ್ನು ವ್ಯಕ್ತಪಡಿಸುತ್ತಾನೆ. ಸುಧನ್ವನ ಪರಾಕ್ರಮ ಕಂಡು ಕೃಷ್ಣನೂ ಬೆರಗಾಗುತ್ತಾನೆ. “ವೀರ ವೈಷ್ಣವನಿವನು ನಿನ್ನಿಂದಲೆನಗೀತ | ಸಾರಸದ್ಭಕ್ತನಾಗಿಹನು’ ಸುಧನ್ವನು ನನ್ನ ಪರಮ ಭಕ್ತ, ಭಕ್ತಿಭಾವದಿಂದ ತುಂಬಿ ತುಳುಕುತ್ತಿರುವ ಅವನ ಸಂಹಾರಕ್ಕೆ ನಿನಗೆ ಹೇಗೆ ಸಹಾಯ ಮಾಡಲಿ ಎಂದಾಗ ಅರ್ಜುನ ಅವನದು ಭಕ್ತಿಭಾವ ಮಾತ್ರ ಆದರೆ ನೀನು ನನಗೆ ಭಾವ, ನಿನ್ನಲ್ಲಿ ನನಗೆ ಭಕ್ತಿಯೂ ಇದೆ ಎಂದಾಗ ಕೃಷ್ಣನ ತೊಳಲಾಟ ಕಂಡು ಸುಧನ್ವನು “ತಿಳಿದೆನು ನಿನ್ನಯ ಚಿತ್ತದು | ಮ್ಮಳಿಕೆಯ ನಿಜದೊಲವ | ನ್ನಳಿವುದು ಕಾಯ ಜಗದೊಳ | ಗುಳಿವುದು ಕೀರ್ತಿ’ – ಕೃಷ್ಣಾ ನೀನೇನು ಯೋಚಿಸದಿರು, ದೇಹ ಅಳಿದರೂ ಜಗತ್ತಿನಲ್ಲಿ ಕೀರ್ತಿ ಶಾಶ್ವತವಾಗುಳಿಯುವ ಸದವಕಾಶವನ್ನು ನನಗೆ ತಂದಿತ್ತೆ. ಹೇಡಿಯಂತೆ ರಣರಂಗಕ್ಕೆ ಬೆನ್ನು ತೋರಿಸಿದರೆ ಅವನನ್ನು ಮಡದಿ ಮಕ್ಕಳೂ ಕ್ಷಮಿಸುವುದಿಲ್ಲ ಎನ್ನುವ ಸುಧನ್ವನ ಮಾತು ಇಂದಿಗೂ ಅನ್ವಯಿಸುತ್ತದೆ. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು,ಮದ್ದಲೆಯಲ್ಲಿ ಎನ್‌.ಜಿ. ಹೆಗಡೆ, ಚೆಂಡೆ ವಾದಕರಾಗಿ ಜನಾರ್ದನ ಆಚಾರಿ ಸಹಕರಿಸಿದರು. 

ಜನನಿ ಭಾಸ್ಕರ್‌ ಕೊಡವೂರು 

Advertisement

Udayavani is now on Telegram. Click here to join our channel and stay updated with the latest news.

Next