Advertisement

ಯಕ್ಷ ಕವಿಗಳ ಪರಿಚಯಿಸಲು “ಯಕ್ಷಗಾನ ಕವಿ-ಕಾವ್ಯ’ಯೋಜನೆ

12:35 PM Aug 30, 2018 | |

ಬೆಂಗಳೂರು: ಯಕ್ಷಗಾನವನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಕ್ಷಗಾನ ಸಾಹಿತಿ ಮತ್ತು ಕವಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಮುಂದಾಗಿದೆ. ಈ ನಿಟ್ಟಿನಲ್ಲಿ “ಯಕ್ಷಗಾನ ಕವಿ-ಕಾವ್ಯ’ ಯೋಜನೆ ರೂಪಿಸಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಯಕ್ಷಗಾನ ಸಾಹಿತ್ಯವನ್ನು ಮುನ್ನೆಲೆಗೆ ತರುವ ಉದ್ದೇಶ ಹೊಂದಿದೆ.

Advertisement

ಪೌರಾಣಿಕ ಮತ್ತು ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯಕ್ಷಗಾನದಲ್ಲಿ ಅಪರೂಪದ ಮತ್ತು ಅಪಾರ ಸಾಹಿತ್ಯವಿದ್ದರೂ ಅದನ್ನು ಸಾಹಿತ್ಯ ಪ್ರಕಾರವೆಂದು ಪರಿಗಣಿಸದ ಕಾರಣ, ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಯಕ್ಷಗಾನ ಸಾಹಿತ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಆದ್ಯತೆ ತಂದುಕೊಡುವ ಉದ್ದೇಶ ಯಕ್ಷಗಾನ ಅಕಾಡೆಮಿಯದ್ದಾಗಿದೆ.

ಯಕ್ಷಗಾನ ಸಾಹಿತ್ಯದ ಅಂಶಗಳು: ಯಕ್ಷಗಾನ ಸಾಹಿತ್ಯದಲ್ಲಿ ಮಾತ್ರವೇ ಕನ್ನಡ ವ್ಯಾಕರಣದ ಛಂದಸ್ಸಿನ ಎಲ್ಲ ಪ್ರಕಾರ ಹಾಗೂ ವೃತ್ತಗಳನ್ನು ಸರಿಯಾಗಿ ಬಳಸಲಾಗಿದೆ. ಸಂಸ್ಕೃತ ಹಾಗೂ ಕನ್ನಡ ವ್ಯಾಕರಣದ ಪರಿಭಾಷೆ ಸಮರ್ಪಕವಾಗಿ ಬಳಕೆಯಾಗಿರುವುದು ಕೂಡ ಯಕ್ಷಗಾನ ಸಾಹಿತ್ಯದಲ್ಲಿ ಎನ್ನುವ ಮಾತಿದೆ.

ಹೀಗಾಗಿ ಯಕ್ಷಗಾನ ಸಾಹಿತ್ಯ ಕಲಿಕೆಯಿಂದ ವಿವಿಧ ವೃತ್ತಗಳ ಅಂಶ ಗಣನೆ ಪ್ರಯೋಗ ಹಾಗೂ ಛಂದಸ್ಸಿನ ಮಾತ್ರೆ, ಗಣಗಳ ಕುರಿತು ಸರಿಯಾದ ತಿಳಿವಳಿಕೆ ಬರಲಿದೆ. ಕನ್ನಡ ವ್ಯಾಕರಣದ ಅನುಸಾರವಾಗಿ ರಚಿತವಾದ ಐದು ಸಾವಿರಕ್ಕೂ ಹೆಚ್ಚಿನ ಪ್ರಸಂಗಗಳು ಯಕ್ಷಗಾನದಲ್ಲಿವೆ. ಆದರೆ, ಕನ್ನಡ ಸಾಹಿತ್ಯ ಅದನ್ನು ಗುರುತಿಸುವ ಕಾರ್ಯ ಮಾಡಿಲ್ಲ.

ಪಾರ್ಥಿಸುಬ್ಬನ ವಾಲಿ ವಧೆ, ಪಂಚವಟಿ, ಪಟ್ಟಾಭಿಷೇಕ ಕೃತಿಗಳು ಶತಮಾನಗಳ ಹಿಂದೆ ರಚಿತವಾಗಿದ್ದರೂ ಅವುಗಳ ಆಕರ್ಷಣೆ ಮಾತ್ರ ಹಾಗೇ ಇರುವುದು ಯಕ್ಷಗಾನ ಸಾಹಿತ್ಯದ ಶ್ರೇಷ್ಠತೆ ಎನ್ನುತ್ತಾರೆ ಯಕ್ಷಾಭಿಮಾನಿಗಳು. ಪ್ರಸ್ತುತ, ಪಾರ್ಥಿಸುಬ್ಬನ ಕುರಿತು ವಿಮರ್ಶಕ ಎಸ್‌.ಆರ್‌.ವಿಜಯಶಂಕರ್‌ ಹಾಗೂ ದೇವಿದಾಸನ ಕುರಿತು ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಕೃತಿ ರಚಿಸುತ್ತಿದ್ದಾರೆ. 

Advertisement

ಒಂದು ತಿಂಗಳಿಂದ ಈ ಕಾರ್ಯದಲ್ಲಿ ತೊಡಗಿರುವ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಸಾಹಿತ್ಯ ರಚಿಸಿದ 15ರಿಂದ 20 ಕವಿಗಳ ಕುರಿತು ಕೃತಿ ಹೊರತರುವ ಆಲೋಚನೆಯಲ್ಲಿದೆ. ಬ್ರಹ್ಮಾವರದ ವಿಷ್ಣು, ಹಟ್ಟಿಯಂಗಡಿ ರಾಮಭಟ್ಟ, ಮುದ್ದಣ್ಣ, ಹಲನಹಳ್ಳಿ ನರಸಿಂಹಶಾಸಿŒ ಹಾಗೂ ಆಧುನಿಕ ಯಕ್ಷಗಾನ ಕವಿಗಳ ಕುರಿತು ಕೃತಿ ಪ್ರಕಟಿಸುವ ಗುರಿಯಿದೆ. ಯೋಜನೆಯಡಿ ಪ್ರತಿ ವರ್ಷ ಇಬ್ಬರಿಂದ ಮೂರು ಯಕ್ಷಗಾನ ಕವಿಗಳ ಬಗ್ಗೆ ಪುಸ್ತಕ ತರುವ ಆಲೋಚನೆ ಇದೆ ಎಂದು ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ತಿಳಿಸಿದ್ದಾರೆ.

ಯಕ್ಷಗಾನ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಕ್ಷೇತ್ರ ಒಪ್ಪಿಕೊಂಡಿಲ್ಲ. ಎಲ್ಲ ಸಾಹಿತ್ಯ ಪ್ರಕಾರಗಳಂತೆ ಯಕ್ಷಗಾನ ಸಾಹಿತ್ಯವೂ ಒಂದು. ಇದನ್ನು ಕನ್ನಡ ಸಾಹಿತ್ಯ ಕ್ಷೇತ್ರ ಒಪ್ಪಿಕೊಳ್ಳಬೇಕು. ಯಕ್ಷಗಾನ ಸಾಹಿತ್ಯ ರಚಿಸಿದ ಕವಿಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು.
-ಪ್ರೊ.ಎಂ.ಎ.ಹೆಗಡೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ಮೂಲೆ ಸೇರಿದ ಯಕ್ಷಗಾನ ಸಾಹಿತ್ಯ: ರಂ.ಶ್ರೀ.ಮುಗಳಿ ಕನ್ನಡ ಸಾಹಿತ್ಯ ಚರಿತ್ರೆ ರಚಿಸುವುದಕ್ಕೂ ಮುನ್ನ ಯಕ್ಷಗಾನ ಸಾಹಿತ್ಯವನ್ನು ಸಾಹಿತ್ಯ ಪ್ರಕಾರಗಳಲ್ಲಿ ಒಂದು ಎಂದು ಒಪ್ಪಿಕೊಳ್ಳಲಾಗಿತ್ತು. ಆದರೆ ರಂ.ಶ್ರೀ.ಮುಗಳಿ ರಚಿಸಿದ ಕನ್ನಡ ಸಾಹಿತ್ಯ ಚರಿತ್ರೆ ಕನ್ನಡ ಸಾಹಿತ್ಯಕ್ಕೊಂದು ಅಧಿಕೃತ ಗ್ರಂಥವೆಂದು ಬಿಂಬಿತವಾಯಿತು. ಅಲ್ಲಿಂದ ಮುಂದೆ ಯಾವುದೇ ಸಾಹಿತಿಗಳು ಯಕ್ಷಗಾನ ಸಾಹಿತ್ಯವನ್ನು ಸಾಹಿತ್ಯ ಪ್ರಕಾರವೆಂದು ಒಪ್ಪಿಕೊಳ್ಳಲೇ ಇಲ್ಲ. ನಂತರದ ದಿನಗಳಲ್ಲಿ ಯಕ್ಷಗಾನ ಸಾಹಿತ್ಯ ಮೂಲೆಗೆ ಸರಿಯಿತು.

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next