Advertisement
ಯಕ್ಷಗಾನ ಕಲೆಯು ನಮ್ಮ ಪುರಾಣದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವುದರ ಜತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಸಮಾಜದಲ್ಲಿ ಸಜ್ಜನಿಕೆಯ ನಡವಳಿಕೆಗಳಿಗೆ ಪ್ರೇರಣಾದಾಯಕವಾಗಿದೆ.
Related Articles
Advertisement
ಕಲಾಭಿಮಾನಿಗಳಾಗಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ನಾವು ಶಾಶ್ವತವಾದ ಕೊಡುಗೆಯನ್ನು ಕೊಟ್ಟಲ್ಲಿ ಸಮಾಜದಲ್ಲಿ ಧರ್ಮ ಜಾಗೃತಿ ಉಂಟಾಗಿ ಒಂದು ಸುವ್ಯಸ್ಥಿತ ನೆಮ್ಮದಿಯ ಮಾನವ ಜೀವನಕ್ಕೆ ನಾಂದಿಯಾಗಬಹುದು. ಒಬ್ಬ ಕಲಾವಿದನನ್ನು ಸಮಾಜವು ಬೇಗನೆ ಗುರುತಿಸಿ ಗೌರವವನ್ನು ಕೊಡುವಷ್ಟರ ಮಟ್ಟಿಗೆ ಕಲೆಗೆ ತನ್ನದೇ ದೈವಿಕವಾದ ಶಕ್ತಿಯು ಇದೆ. ತಮ್ಮದೇ ಆದ ಆಕರ್ಷಕ ಕಲಾ ಶೈಲಿಯಿಂದ ಅನೇಕ ಕಲಾವಿದರು, ಕಲಾಭಿಮಾನಿ ಬಳಗದ ಸ್ಮತಿ ಪಟಲದ ನೆನಪಿನಂಗಳದಲ್ಲಿ ಉಳಿದಿರುತ್ತಾರೆ. ಕನಿಷ್ಠ ಶಿಕ್ಷಣ ಪಡೆದವರೂ ಕಲಾಕ್ಷೇತ್ರದಲ್ಲಿ ಮೇರು ಕಲಾವಿದರಾಗಿ ಬೆಳೆದು ಇಂದಿನ ಯುವ ಸಮುದಾಯಕ್ಕೆ ಪ್ರೇರಕರಾಗಿದ್ಧಾರೆ.
ಕಲೆಯಲ್ಲಿ ಶ್ರದ್ಧೆ, ಭಕ್ತಿಗಳ ಜತೆಗೆ ವೃತ್ತಿ ಗೌರವವನ್ನು ಕಾಪಾಡಿಕೊಂಡು ಸಾಧನಾಶೀಲ ಕಲಾವಿದರಾಗಿ ಗುರುತಿಸಿಕೊಂಡಿರುವ ಅನೇಕ ಕಲಾವಿದರನ್ನು ನಾವು ಕಲಾಕ್ಷೇತ್ರದಲ್ಲಿ ಕಾಣುತಿದ್ದೇವೆ.
ಇಂತಹ ಒಂದು ಅದ್ಭುತ ಸಮಾಜ ಸುಧಾರಣೆ ಕಾರ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿರುವ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಸರಕಾರವು ನಿರೀಕ್ಷಿತ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿಲ್ಲ. ಕಲಾವಿದರಿಗೆ ಜೀವನ ನಿರ್ವಹಣೆಗೆ ಬೇಕಾದ ಸೌಲಭ್ಯಗಳು ಮತ್ತು ಆವಶ್ಯಕತೆಗಳಿಗೆ ಸ್ಪಂದಿಸದಿರುವುದು ಬಹಳ ಬೇಸರದ ಸಂಗತಿ. ಕಳೆದ ಹಲವಾರು ವರ್ಷಗಳಿಂದ ಸರಕಾರವು ಕಲಾಕ್ಷೇತ್ರವನ್ನು ಅವಗಣಿಸುತ್ತಲೇ ಬಂದಿದೆ. ಅನೇಕ ಪ್ರಸಿದ್ಧ ಮೇಳಗಳು ಆರ್ಥಿಕವಾಗಿ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದರೂ ಕಲಾವಿದರಿಗೆ ಸಮರ್ಪಕವಾದ ಸೌಲಭ್ಯಗಳು ಸಿಗುತ್ತಿಲ್ಲ. ಯಕ್ಷಗಾನ ಪರಂಪರೆ ಉಳಿಯಬೇಕಾದರೆ ಸರಕಾರವು ಈ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಿದೆ.
ಬಡ ಕಲಾವಿದರ ಬದುಕಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಮುಖ್ಯವಾಗಿ ನಿವೃತ್ತಿ ವೇತನ, ಗೃಹ ಸಾಲ, ಮಕ್ಕಳ ಶಿಕ್ಷಣ ಮೊದಲಾದ ಸೌಲಭ್ಯಗಳನ್ನು ಕಾರ್ಮಿಕ ಕಾನೂನು ನಿಬಂಧನೆಗಳಿಗೆ ಒಳಪಟ್ಟು ಜಾರಿ ಮಾಡಬೇಕು. ಸಾತ್ವಿಕ ಬದುಕಿಗೆ ಸಾರ್ಥಕತೆಯನ್ನು ಕೊಡುವ ಯಕ್ಷಗಾನವನ್ನು ಉಳಿಸಿ, ಬೆಳೆಸಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸೋಣ.
ಹರಿಶ್ಚಂದ್ರ, ಕುಪ್ಪೆಪದವು