ಮೂಡಬಿದಿರೆ: ಭಾರತೀಯ ಕಲಾ ಸಂಸ್ಕೃತಿಯಲ್ಲಿ ಶ್ರೀಮಂತ ಕಲೆ ಎಂದರೆ ಅದು ಯಕ್ಷಗಾನ. ಭಕ್ತಿ, ಶಕ್ತಿ, ಶಾಂತಿ, ಆಧ್ಯಾತ್ಮಗಳಿಂದ ಕೂಡಿದ ಮನಸ್ಸಿಗೆ ಸುಖ ನೀಡುವ ಕಲೆ ಇದಾಗಿದೆ. ಕಲಾವಿದರು ತಾವು ಬಡವರಾಗಿ ಉಳಿದರೂ ಈ ಕಲೆಯನ್ನು ತಲೆಮಾರುಗಳಿಂದ ಈಗಿನವರೆಗೂ ದಾಟಿಸಿಕೊಂಡು ಬರುವಲ್ಲಿ ತೋರಿರುವ ಶ್ರದ್ಧೆ, ಪರಿಶ್ರಮವನ್ನು ಶ್ಲಾಘನೀಯ ಎಂದು ನಿಟ್ಟೆ ಜ| ಕೆ. ಎಸ್. ಹೆಗ್ಡೆ ಉದ್ಯಮಾಡಳಿತ ಕಾಲೇಜಿನ ಪ್ರಾಧ್ಯಾಪಕ ಡಾ| ಸುಧೀರ್ ರಾಜ್ ಕೆ. ತಿಳಿಸಿದರು.
ಕಾಂತಾವರ ಯಕ್ಷದೇಗುಲದ ಆಶ್ರಯದಲ್ಲಿ ಏರ್ಪಡಿಸಲಾಗಿರುವ ನಾಲ್ಕನೇ ವರ್ಷದ ಬೇಸಗೆ ರಜಾಕಾಲದ ಉಚಿತ ಯಕ್ಷಗಾನ ತರಬೇತಿ ಶಿಬಿರವನ್ನು ಅವರು ಉದ್ಘಾಟಿಸಿ, ಮಾತನಾಡಿದರು.
ಯಕ್ಷದೇಗುಲದ ಅಧ್ಯಕ್ಷ ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಜಯ ಎಸ್. ಕೋಟ್ಯಾನ್, ಶಾಲಾ ಮುಖ್ಯ ಅಧ್ಯಾಪಿಕೆ ಶ್ಯಾಮಲಾ ಕುಮಾರಿ ಹಾಗೂ ಧರ್ಮರಾಜ ಕಂಬಳಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉತ್ತಮ ದಾಖಲಾತಿ
ಹಳ್ಳಿಯ ವಾತಾವರಣದಲ್ಲಿ ನಡೆಯುತ್ತಿರುವ ಹದಿನೈದು ದಿನಗಳ ಈ ಶಿಬಿರದಲ್ಲಿ 87 ಮಂದಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ ಎಂದು ಸಭಾಧ್ಯಕ್ಷ ಶ್ರೀಪತಿ ರಾವ್ ಅಭಿಪ್ರಾಯಪಟ್ಟರು. ಕಲಾವಿದ, ಯಕ್ಷಗುರು ಮಹಾವೀರ ಪಾಂಡಿ ಸ್ವಾಗತಿಸಿ, ಶಿಬಿರದ ನಿಯಮ ಹಾಗೂ ತರಗತಿಗಳ ವಿವರ ತಿಳಿಸಿ ವಂದಿಸಿದರು.
ಅಜೆಕಾರು, ಕಾರ್ಕಳ, ನಿಟ್ಟೆ, ರೆಂಜಾಳ, ಕಾಂತಾವರ, ಬೋಳ, ಬಾರಾಡಿ, ಮಾರ್ನಾಡು, ಪುತ್ತಿಗೆ, ನಾರಾವಿ, ದೂರದ ಕೋಟ ಸೇರಿದಂತೆ ವಿವಿಧೆಡೆಗಳಿಂದ 2ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ 87 ಮಂದಿ ಹುಡುಗ, ಹುಡುಗಿಯರು ಸರಿಸಮವಾಗಿ ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಪ್ರಯತ್ನ ಶ್ಲಾಘನೀಯ
ಈ ಕಲೆಯನ್ನು ಶ್ರದ್ಧೆಯಿಂದ ತಮ್ಮದಾಗಿಸಿಕೊಳ್ಳುವವರಿಗೆ ಜ್ಞಾನ, ದರ್ಶನ, ಭಕ್ತಿ, ಶಕ್ತಿ, ಸಂಸ್ಕಾರ ಒದಗಿಬರುವುದು. ಕಲೆಯ ಉಳಿವು, ಬೆಳವಣಿಗೆಯಲ್ಲಿ ಇಂಥ ಶಿಬಿರಗಳ ಪಾತ್ರ ಮಹತ್ವಪೂರ್ಣವಾಗಿದೆ ಎಂದ ಅವರು ಯಕ್ಷಗುರು ಮಹಾವೀರ ಪಾಂಡಿ ಅವರ ಪ್ರಯತ್ನ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.