Advertisement

ರಂಗದಲ್ಲೇ ಚಿರನಿದ್ರೆಗೆ ಜಾರಿದ ಯಕ್ಷಕಲಾವಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

08:43 AM Mar 24, 2017 | Karthik A |

ಬೆಳ್ತಂಗಡಿ: ಯಕ್ಷರಂಗದ ಮಹಿಷಾಖ್ಯನೆಂದೇ ಅಭಿಮಾನಿಗಳಿಂದ ಗುರುತಿಸಿಕೊಂಡಿದ್ದ, ಮಹಿಷಾಸುರ ವೇಷಕ್ಕೆ ಒಂದು ನೆಗಳ್ತೆಯನ್ನು ತಂದಿದ್ದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಕಲಾಮಾತೆಯ ಮಡಿಲಲ್ಲಿ ಚಿರನಿದ್ರೆಗೆ ಜಾರಿದ್ದಾರೆ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಯಕ್ಷಾಭಿಮಾನಿಗಳಿಗೆ ಕಷ್ಟವಾಗುತ್ತಿದೆ. ಕಟೀಲು ಸಮೀಪದ ಎಕ್ಕಾರಿನಲ್ಲಿ ಕಟೀಲು ಕ್ಷೇತ್ರ ಮಹಾತ್ಮೆಯ ತನ್ನ ಪ್ರೀತಿಯ ಪಾತ್ರವಾದ ಅರುಣಾಸುರ ಪಾತ್ರದಲ್ಲಿದ್ದಾಗಲೇ ಶೆಟ್ಟರು ರಂಗಸ್ಥಳದಲ್ಲಿ ಕುಸಿದು ಬಿದ್ದು ಕಲಾಲೀನರಾಗಿದ್ದಾರೆ.

Advertisement

ಕುರಿಯ ವಿಠ್ಠಲ ಶಾಸ್ತ್ರಿ ಅವರು 1965ರಲ್ಲಿ ಶಿವತಾಂಡವ ಪ್ರಸಂಗದ ತಾಂಡವನೃತ್ಯದ ಕೊನೆಯ ದೃಶ್ಯದ ಸಂದರ್ಭ ರಂಗದಲ್ಲಿ ಕುಸಿದು ಬಿದ್ದಿದ್ದರೂ ಆ ವೇಳೆ ಮಣಿಪಾಲದ ವೈದ್ಯರೊಬ್ಬರು ಘಟನಾ ಸ್ಥಳದಲ್ಲಿದ್ದ ಕಾರಣ ಅವರ ಜೀವ ಉಳಿದಿತ್ತು. ಅಂದು ರಂಗಕ್ಕೆ ಶಾಶ್ವತ ವಿದಾಯ ಹೇಳಿದ್ದ ಅವರು 1972ರಲ್ಲಿ ನಿಧನ ಹೊಂದಿದರು. ಮುಂಬಯಿಯಲ್ಲಿ ದಾಮೋದರ ಮಂಡೆಚ್ಚ ಭಾಗವತರು ಪಂಚವಟಿ ಪ್ರಸಂಗದ ಭಾಗವತಿಕೆ ಮಾಡುತ್ತಿರುವಾಗಲೇ ವಿಧಿವಶರಾಗಿದ್ದರು. ‘ಬನ್ನಿ ಪೋಗುವ ಮುನಿಪನೆಡೆಗೆ…’ ಎಂದು ಭಾಗವತರು ಎತ್ತುಗಡೆ ಮಾಡಿದಲ್ಲಿಗೆ ಕೆರೆಮನೆ ಶಂಭು ಹೆಗಡೆ ಅವರ ರಾಮ ನಿರ್ಯಾಣದ ರಾಮ ರಂಗದಲ್ಲಿ ಕಲಾಯಾನ ಮುಗಿಸಿದ್ದರು. ಶಿರಿಯಾರ ಮಂಜು ನಾಯ್ಕ ಅವರು ರಂಗದಿಂದ ನಿರ್ಗಮಿಸುವ ಪರಶುರಾಮನಾಗಿ ‘ಪರಮ ಶಿಷ್ಯನೇ ನಿನ್ನ ಧುರಕಾನು ಮೆಚ್ಚಿದೆ…’ ಎಂದು ಮಹೇಂದ್ರಾಚಲಕ್ಕೆ ತಪಸ್ಸಿಗೆ ಹೋಗುವೆ ಎಂದು ಹೇಳಿದಲ್ಲಿಗೆ ಕುಸಿದು ಬಿದ್ದಿದ್ದರು. ಬೆಂಗಳೂರಿನಲ್ಲಿ ಚೆಂಡೆ ಬಡಿಯುತ್ತಿದ್ದಾಗಲೇ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ವಿಧಿವಶರಾಗಿದ್ದರು. ಅರುವ ನಾರಾಯಣ ಶೆಟ್ಟರು ಸುಭದ್ರೆಯ ಜತೆಗಿನ ಸಂಭಾಷಣೆ ಸಂದರ್ಭ ರಂಗದಲ್ಲಿ ಕುಸಿದು ಬಿದ್ದು ಕಾಲಲೀನರಾದರು. ಅಂತೆಯೇ ಅರುಣಾಸುರನಾಗಿ ಅಂತ್ಯವಾಗುವ ಸನ್ನಿವೇಶದ ಸಂದರ್ಭವೇ ಗಂಗಯ್ಯ ಶೆಟ್ಟರು ರಂಗದಲ್ಲಿ ಕುಸಿದುಬಿದ್ದು ತಮ್ಮ ಕಲಾಸೇವೆಗೆ ಕೊನೆಯ ಚುಕ್ಕಿ ಇಟ್ಟರು.


15 ವರ್ಷಗಳ ಹಿಂದೆ ಶೆಟ್ಟರಿಗೆ ಹೃದಯಾಘಾತವಾದುದು ಇದೇ ಅರುಣಾಸುರನ ಪಾತ್ರದಲ್ಲಿದ್ದಾಗಲೇ. ಅವರ ಊರಿಗೆ ಸಮೀಪದ ತಾರೆಮಾರು ಎಂಬಲ್ಲಿ ಕೆಲವು ದಶಕಗಳಿಂದ ಗಂಗಯ್ಯ ಶೆಟ್ಟರಿರುವ ಮೇಳವೇ ಕಲಾಪ್ರದರ್ಶನ ನಡೆಸುತ್ತಿತ್ತು. ಆದರೆ ಈ ವರ್ಷ ಮಾ. 22ರಂದು ಕಟೀಲು ಮೂರನೇ ಮೇಳದ ಪ್ರದರ್ಶನ ನಡೆದಿತ್ತು. ಗಂಗಯ್ಯ ಶೆಟ್ಟರ ಮೇಳ ಕಟೀಲಿಗೆ ಸಂಬಂಧಪಟ್ಟ ಕಟೀಲಿಗೆ ಸಮೀಪದ ಎಕ್ಕಾರಿನಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಕಲಾಮಾತೆ ಭ್ರಾಮರಿ ಅವರನ್ನು ತನ್ನತ್ತ ಸೆಳೆದುಕೊಂಡಿದ್ದರೇ ಎಂದು ಕಲಾಭಿಮಾನಿಗಳು ಭಾವುಕರಾಗಿ ಕೇಳುತ್ತಾರೆ. ಕಲಾಮಾತೆಯ ಮಡಿಲಲ್ಲಿ ಚಿರನಿದ್ರೆಗೆ ಹೋದ ಆದರ್ಶ ಮರಣ ಪಡೆದ ಗಂಗಯ್ಯರು. ಅವರ ಅಗಲುವಿಕೆ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ನಷ್ಟ.

ಬಣ್ಣದ ವೇಷಕ್ಕೆ ಸಾಂಪ್ರದಾಯಿಕ‌ ಆವರಣ ಕೊಟ್ಟ ಬಣ್ಣದ ವೇಷಧಾರಿ ಬಣ್ಣದ ಮಾಲಿಂಗ, ಬಣ್ಣದ ಕುಟ್ಯಪುವಿನ ಜತೆಗೆ ನಾಟಕೀಯ ಪಾತ್ರಗಳಿಗೆ ಜೀವ ತುಂಬಿದ ಕಲಾವಿದ ಗಂಗಯ್ಯ ಶೆಟ್ಟರು ದಾರಕಾಸುರ, ಜಲಂಧರ, ಅರುಣಾಸುರ ಇತ್ಯಾದಿ ಬಣ್ಣದ ವೇಷಗಳಿಗೆ ನಾಟಕೀಯವಾಗಿ ಮಾಡುವ ಪಾತ್ರಗಳಲ್ಲಿ ಎತ್ತಿದ ಕೈ. ನಾಟಕೀಯ ವೇಷಗಳಲ್ಲಿ ಬಣ್ಣದ ವೇಷದ ಛಾಯೆಯನ್ನು ತರುತ್ತಿದ್ದ ಅಪೂರ್ವ ಕಲಾವಿದ. ಕೇವಲ ಬಣ್ಣದ ವೇಷಧಾರಿಯಲ್ಲ. ದಮಯಂತಿ ಪುನಃಸ್ವಯಂವರದ ಋತುಪರ್ಣ, ದೇವಿ ಮಹಾತ್ಮೆಯ ರಕ್ತಬೀಜ, ಕಂಸವಧೆಯ ಕಂಸನಂತಹ ಭಾವುಕ ಪಾತ್ರಗಳಲ್ಲಿ ಭಾವಾಭಿವ್ಯಕ್ತಿ ಪ್ರಕಟ ಮಾಡುತ್ತಿದ್ದ ವೇಷಧಾರಿ. ಅವರು ಮಂಡಿಸುತ್ತಿದ್ದ ವಿಚಾರಗಳಲ್ಲಿ ಭಾವನೆಯ ಆವರಣವಿತ್ತು.


ರುದ್ರಭೀಮ, ಮೈರಾವಣ, ಮಹಿಷಾಸುರ, ಪುರುಷಾಮೃಗ ಅವರ ಅಚ್ಚುಮೆಚ್ಚಿನ ಅದ್ಭುತ ಸೃಷ್ಟಿಯ ಪಾತ್ರಗಳು. ವೇಷಗಾರಿಕೆಯಲ್ಲಿ ಈವರೆಗೆ ಮುಖವಾಡ ಬಳಸಿಲ್ಲ ಎನ್ನುವುದು ಅವರ ಹೆಗ್ಗಳಿಕೆ. ವೀರ ರೌದ್ರ ರಸಗಳ ಅಭಿವ್ಯಕ್ತಿಯಲ್ಲಿ ಸಿದ್ಧಹಸ್ತರು. ಕಿರಾತಾರ್ಜುನದ ಕಿರಾತ, ದುಶ್ಯಾಸನ ವಧೆ, ಪುರುಷಾಮೃಗ ಅಲ್ಲದೇ ಬಣ್ಣದ ವೇಷಗಳೇ ಪ್ರಧಾನವಾಗಿರುವ ಪ್ರಸಂಗಗಳಲ್ಲಿ ಸಮಗ್ರ ಮಾಹಿತಿ ಹೊಂದಿ ಹಿಮ್ಮೇಳ ಮುಮ್ಮೇಳ ಸಾಂಗತ್ಯದ ಆಕರ ಕಲಾವಿದರಾಗಿದ್ದರು. ತೆಂಕುತಿಟ್ಟಿನ ಸಾಂಪ್ರದಾಯಿಕ ರಂಗಭೂಮಿಯ ಕಲಾವಿಭಾಗದ ಪ್ರಾತಿನಿಧಿಕ ಕಲಾವಿದರಾಗಿದ್ದರು ಎಂದು ಕಲಾವಿದ ಉಜಿರೆ ಅಶೋಕ ಭಟ್ಟರು ನೆನಪಿಸಿಕೊಳ್ಳುತ್ತಾರೆ.

Advertisement

ಬಣ್ಣದ ವೇಷದ ವಿಭಾಗದಲ್ಲಿ ಸಹಕಲಾವಿದರು ಹಾಗೂ ಕಿರಿಯರಿಗೆ ಮಾರ್ಗದರ್ಶಿಯಾಗಿದ್ದರು. ಕಲಾವಿದರಿಗೆ ಹೇಳಿಕೊಟ್ಟು ತಿದ್ದಿದ ಕಲಾವಿದ. ಅತ್ಯಂತ ಸಣ್ಣ ಪ್ರಾಯದಲ್ಲಿ ಬಣ್ಣದ ವೇಷಕ್ಕೆ ಬಂದ ಕಲಾವಿದ. 18ನೇ ವಯಸ್ಸಿನಲ್ಲಿ ಮಹಿಷಾಸುರ ಪಾತ್ರ ಮಾಡಿದ ಕೀರ್ತಿ. ಸಭೆಯ ಮೂಲಕ ಪ್ರವೇಷ, ದೊಂದಿಯ ಬಳಕೆ, ರಂಗದಲ್ಲಿ ನಡೆ ಕುಟ್ಯಪ್ಪುವಿನ ಅನಂತರದಲ್ಲಿ ರಂಗದಲ್ಲಿ ಕಾಣಿಸಿಕೊಂಡ ಕಲಾವಿದ. ಕುರಿಯ ಗಣಪತಿ ಶಾಸ್ತ್ರಿ, ನೆಡ್ಲೆ ನರಸಿಂಹ ಭಟ್‌, ಪದ್ಯಾಣ ಶಂಕರ ನಾರಾಯಣ ಭಟ್ಟರು ಇವರ ಪ್ರತಿಭೆಯನ್ನು ಅನಾವರಣಗೊಳಿಸಿದ ಖ್ಯಾತಿಯ ಹಿಮ್ಮೇಳ. ಕಲಾಮಾತೆಯಲ್ಲಿ ತಮ್ಮ ಆತ್ಮ ಲೀನವಾಗಿಸಿಕೊಂಡ ಗಂಗಯ್ಯ ಶೆಟ್ಟರು ಯಕ್ಷಗಾನದ ಕೊಂಡಿಯಂತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next