Advertisement

ಗೌರಿಗಾಗಿ ಮೈಸೂರಿಂದ ಬಂದ ಯದುನಂದನ

10:44 AM Apr 25, 2020 | mahesh |

ಆನೇಕಲ್‌: ಕಳೆದ ಎರಡು ವರ್ಷಗಳಿಂದ ಏಕಾಂಗಿಯಾಗಿದ್ದ ಗೌರಿ ಜಿರಾಫೆಗೆ ಈಗ ಹೊಸ ಗೆಳೆಯ ಯದುನಂದನ ಸಿಕ್ಕಿದ್ದು, ಆತ್ಮೀಯವಾಗಿ ಬರಮಾಡಿಕೊಂಡಿದ್ದಾಳೆ. ಅಲ್ಲದೆ
ಪ್ರವಾಸಿಗರಿಗೂ ಕೂಡ ಎರಡು ಜಿರಾಫೆಗಳನ್ನು ಕಣ್ತುಂಬಿಕೊಳ್ಳುವ ಭಾಗ್ಯ ಸಿಗಲಿದೆ. ಬನ್ನೇರುಘಟ್ಟ ಉದ್ಯಾನವನಕ್ಕೆ ಗಂಡು ಜಿರಾಫೆ ತರಿಸಿಕೊಳ್ಳಬೇಕೆಂಬ ಯತ್ನ ಹಲವು ವರ್ಷಗಳ ಬಳಿಕ ಯಶಸ್ವಿಯಾಗಿದೆ. ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿನ ಕೃಷ್ಣರಾಜ ಮತ್ತು ಬಬ್ಲಿ ಜೋಡಿಗೆ ಜನಿಸಿದ, ಒಂದು ವರ್ಷ, ಐದು ತಿಂಗಳ ಗಂಡು ಜಿರಾಫೆ ಯದುನಂದನ, ಈಗ ಉದ್ಯಾನವನದ ಹೆಣ್ಣು ಜಿರಾಫೆ ಗೌರಿಗೆ ಸಾಥ್‌ ನೀಡಲಿದೆ.

Advertisement

ಜಿರಾಫೆ ಬಂದಿದ್ದು ಹೇಗೆ?: ಜಿರಾಫೆಯನ್ನು ಸಾಗಿಸುವುದೇ ಸಾಹಸದ ಕೆಲಸ. ಬನ್ನೇರುಘಟ್ಟ ಉದ್ಯಾನವನಕ್ಕೆ ಸಾಗಿಸುವ ಮೊದಲು ಜಿರಾಫೆ ವಿಶೇಷ ಕೇಜ್‌ ಅನ್ನು ಮೈಸೂರು ಮೃಗಾಲಯಲ್ಲಿನ ಜಿರಾಫೆ ಆವರಣದಲ್ಲಿ ಇಟ್ಟು, ಯದುನಂದನನಿಗೆ ಒಳಗೆ ಹೋಗಿ ಬರುವ ಅಭ್ಯಾಸ ಮಾಡಿಸಲಾಯಿತು. ಬಳಿಕ 24 ಚಕ್ರಗಳಿರುವ ಲಾರಿ ತರಿಸಿಕೊಂಡು, 15 ಅಡಿಎತ್ತರವಿರುವ ಕೇಜ್‌ನೊಳಗೆ ಜಿರಾಫೆ ಹಾಕಿ, ಕ್ರೇನ್‌ ಸಹಾಯದಿಂದ ಕೇಜ್‌ಅನ್ನು ಟ್ರಕ್‌ನಲ್ಲಿಟ್ಟು ಸಾಗಿಸಲಾಯಿತು. ಜತೆಗೆ ವಿದ್ಯುತ್‌ ಇಲಾಖೆ ಸಹಕಾರವನ್ನೂ ಕೋರಲಾಯಿತು.

ಜಿರಾಫೆ ಬರುವ ಹಿನ್ನೆಲೆ: ರಾಜ್ಯದಲ್ಲಿ ಈವರೆಗೂ ಮೈಸೂರು ಮೃಗಾಲಯದಲ್ಲಿ ಮಾತ್ರ ಜಿರಾಫೆಗಳಿದ್ದವು. ಹೀಗಾಗಿ ರಾಜಧಾನಿಯ ಬನ್ನೇರುಘಟ್ಟ ಉದ್ಯಾನವನಕ್ಕೆ ವಿದೇಶಿ ಪ್ರವಾಸಿಗರು, ಜಿರಾಫೆ ಕಾಣುವ ಕುತೂಹಲ ವ್ಯಕ್ತಪಡಿಸಿದ್ದರಿಂದ ಅಧಿಕಾರಿಗಳು ಕಾರ್ಯಪ್ರವೃತ್ತರಾದರು. ಸತತ 4 ವರ್ಷಗಳ ಯತ್ನದ ಬಳಿಕ 2018 ರ ಏಪ್ರಿಲ್‌ 3ರಂದು ಉದ್ಯಾನವನಕ್ಕೆ ಹೆಣ್ಣು ಜಿರಾಫೆ ಬಂದಿತ್ತು. ಆದರೆ ಜೊತೆಗಾರ ಸಿಕ್ಕಿರಲಿಲ್ಲ. ಹೀಗಾಗಿ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರ ವಿಶೇಷ ಕಾಳಜಿಯಿಂದ ಮೈಸೂರು ಮೃಗಾಲಯದಿಂದಲೇ ಮತ್ತೂಂದು ಗಂಡು
ಜಿರಾಫೆ ತರಿಸಿಕೊಳ್ಳಲಾಗಿದೆ. ಎರಡೂ ಜಿರಾಫೆಗಳು ಆತ್ಮೀಯವಾಗಿದ್ದವು. ಆದರೆ ಸದ್ಯ ಜಿರಾಫೆಗಳನ್ನು ಬೇರೆ ಬೇರೆಯಾಗಿಟ್ಟು, ಕೆಲದಿನಗಳ ಬಳಿಕ ಒಟ್ಟಿಗೆ ಇರಿಸಲಾಗುವುದು. ಉದ್ಯಾನವನಕ್ಕೆ ಗಂಡು ಜಿರಾಫೆ ಬರಲು ಕಾರಣರಾದ ಮೃಗಾಲಯ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಮೈಸೂರು ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ ಅವರಿಗೆ ಅಭಿನಂದನೆಗಳು ಎಂದು ವನಶ್ರೀ ತಿಳಿಸಿದರು.

ಮೈಸೂರು ಮೃಗಾಲಯದಲ್ಲಿ 7 ಜಿರಾಫೆಗಳಿದ್ದು, ಅದರಲ್ಲಿ ಒಂದು ಜಿರಾಫೆಯನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಪ್ರಾಣಿಗಳ ನಿಯಮಗಳಂತೆ ಜಿರಾಫೆ ತರಿಸಿಕೊಳ್ಳಲಾಗಿದೆ.
●ವನಶ್ರೀ ವಿಪಿನ್‌ಸಿಂಗ್‌, ಉದ್ಯಾನ ವನದ ಕಾರ್ಯನಿರ್ವಾಹಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next