ಯಾದಗಿರಿ: ಇಲ್ಲಿನ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಕೋಲಾಹಲ ಉಂಟಾಗಿ, ಸಭೆ ಅರ್ಧ ಗಂಟೆ ಮುಂದೂಡಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಶೇಖರ ಗೌಡ ವಜ್ಜಲ್ ಅಧ್ಯಕ್ಷೆಯ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕೋಲಾಹಲ ಸೃಷ್ಟಿಯಾಯಿತು.
ಜಿ.ಪಂ. ಸದಸ್ಯ ವಿನೋದ ಪಾಟೀಲ್ ಅವರು ಜಿ.ಪಂ. ಉಪ ಕಾರ್ಯದರ್ಶಿ ಮುಕ್ಕಣ್ಣ ಕಾರಿಗಾರ ಸರಿಯಾದ ಮಾಹಿತಿ ನೀಡದೆ ತಮಗೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದನ್ನು ಖಂಡಿಸಿದರು.
ಬಳಿಕ ಕೊಂಕಲ್ ಜಿ.ಪಂ. ಸದಸ್ಯ ಬಸರೆಡ್ಡಿ ಅನಪೂರ ತಮ್ಮ ಪತ್ರದ ಸುಳ್ಳು ಉಲ್ಲೇಖ ನಮೂದಿಸಿ ಜಿಲ್ಲಾ ಆರೋಗ್ಯ ಅಧಿಕಾರಿ ಎಂ.ಎಸ್ ಪಾಟೀಲ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದಾರೆ, ತಾವು ಯಾವುದೇ ಪತ್ರವನ್ನು ನೀಡಿಲ್ಲ ಅದರೂ ತಮ್ಮ ಹೆಸರು ಹೇಗೆ ಉಲ್ಲೇಖವಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳ ವಿರುದ್ದ ಹರಿಹಾಯ್ದ ಪ್ರಸಂಗ ನಡೆಯಿತು.
ಸದಸ್ಯರ ಘನತೆಗೆ ಅಗೌರವ ತೋರಿದ ಅಧಿಕಾರಿಯ ವಿರುಧ್ಧ ಕ್ರಮಕ್ಕೆ ಸರ್ಕಾರಕ್ಕೆ ವರದಿ ಬರೆಯಬೇಕು ಎಂದು ಸದಸ್ಯರು ಒತ್ತಾಯಿಸಿ ಸಭೆಯಿಂದ ಹೊರನಡೆದರು.
ಬಳಿಕ ಪರಿಸ್ಥಿತಿ ತಿಳಿಗೊಳಿಸಲು ಜಿ.ಪಂ. ಅಧ್ಯಕ್ಷರು ಸಭೆಯಲ್ಲಿ ಅರ್ಧಗಂಟೆ ಮುಂದೂಡಿದರು.