Advertisement

ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ

08:34 AM Nov 04, 2024 | Team Udayavani |

ಶಹಾಪುರ: ಶನಿವಾರ(ನ.2) ಸಂಜೆ ತಾಲೂಕಿನ ದೋರನಹಳ್ಳಿ ಗ್ರಾಮ ಬಳಿ ಶಹಾಪುರ – ಯಾದಗಿರಿ ಹೆದ್ದಾರಿಯಲ್ಲಿ ವ್ಯಕ್ತಿಯೋರ್ವನ ಕಗ್ಗೊಲೆ ನಡೆದಿದ್ದು, ಕೊಲೆಯಾದ ವ್ಯಕ್ತಿ ತಾಲೂಕಿನ ಕನ್ಯಾಕೋಳೂರ ವ್ಯಾಪ್ತಿಯ ಜಾಪಾ ನಾಯಕ ತಾಂಡಾದ ನಿವಾಸಿ ತಿಪ್ಪಣ್ಣ ರಾಠೋಡ್(35) ಎಂದು ಗುರುತಿಸಲಾಗಿದೆ.
ಆರೋಪಿಗಳು ಅದೇ ಜಾಪಾ ನಾಯಕ ತಾಂಡಾದ ನಿವಾಸಿಗಳಾಗಿದ್ದು, ಕುಮಾರ (36) ಹೇಮ್ಯಾ ಚವ್ಹಾಣ (36) ಹಾಗೂ ಲಕ್ಷ್ಮಣ ಚವ್ಹಾಣ (38) ಇವರೇ ಆರೋಪಿಗಳೆಂದು ಹೇಳಲಾಗಿದೆ.

Advertisement

ಹತ್ಯೆಯಾದ ತಿಪ್ಪಣ್ಣ ಅವರ ಪತ್ನಿ ಮಂಜುಳಾ ನಗರ ಠಾಣೆಗೆ ನೀಡಿದ ದೂರಿನನ್ವಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳ ವೃತ್ತಿ ಕಳ್ಳತನವಾಗಿದ್ದು, ಲಿಂಗಸೂಗೂರಿನಲ್ಲಿ ಕಳ್ಳತನ ಮಾಡಿ ತಾಂಡಾದಲ್ಲಿ ಭೂಗತವಾಗಿದ್ದ ಆರೋಪಿಗಳ ಬಗ್ಗೆ ಲಿಂಗಸೂಗೂರ ಪೊಲೀಸರಿಗೆ ಹತ್ಯೆಗೊಳಗಾದ ವ್ಯಕ್ತಿ ತಿಪ್ಪಣ್ಣ ರಾಠೋಡ್ ಮಾಹಿತಿ ನೀಡಿರುವ ಹಿನ್ನೆಲೆ ಆರೋಪಿಗಳು ಜೈಲು ಪಾಲಾಗಿದ್ದರು.

ಈಚೆಗೆ ಜೈಲಿನಿಂದ ಹೊರ ಬಂದ ಆರೋಪಿಗಳೇ ತಿಪ್ಪಣ್ಣನ ಮನೆಗೆ ತೆರಳಿ ವಾರ್ನಿಂಗ್ ಮಾಡಿದ್ದರಂತೆ, ಆಗ ಅಕ್ಕಪಕ್ಕ ತಾಂಡಾದ ಜನರು ಬುದ್ಧಿ ಹೇಳಿ ಗಲಾಟೆ ಬಿಡಿಸಿದ್ದರಂತೆ, ಆಗಲೇ ಆರೋಪಿಗಳು ನೀನು ಭೂಮಿ ಮೇಲೆ ಇದ್ದರೇತಾನೆ.? ಎಂದು ಬೆದರಿಕೆವೊಡ್ಡಿದ್ದರಂತೆ, ಹೀಗಾಗಿ ತನ್ನ ಪತಿಗೆ ಕಾಲ್ ಮಾಡಿ ಕರೆದು ಕುಡಿಸಿ ಹಿಂದಿನಿಂದ ಆರೋಪಿಗಳು ಮಾರಕಾಸ್ತ್ರದಿಂದ ಅಂದರೆ ಮೊನಚಾದ ಅಸ್ತ್ರ, ಮಚ್ಚು ಅಥವಾ ಲಾಂಗ್‍ನಿಂದ ಪತಿ ಮೇಲೆ ಹಲ್ಲೆ ನಡೆಸುವ ಮೂಲಕ ಕೊಂದು ಹಾಕಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕೆಂದು ಪತ್ನಿ ಮಂಜುಳಾ ತಿಪ್ಪಣ್ಣ ರಾಠೋಡ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಅಲ್ಲದೆ ಆರೋಪಿಗಳ ಉದ್ಯೋಗವೇ ಕಳ್ಳತನವಾಗಿದ್ದು, ನನ್ನ ಪತಿ ಅವರ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವದೇ ಮುಳುವಾಯಿತು. ಆರೋಪಿಗಳು ಕೋಪಗೊಂಡ ನನ್ನ ಪತಿಯನ್ನು ಕೊಂದಿದ್ದಾರೆ. ಪೊಲೀಸರು ನ್ಯಾಯ ಒದಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

ಈ ಕೊಲೆ ಘಟನೆಯಿಂದ ಜಾಪಾ ನಾಯಕ ತಾಂಡಾದಲ್ಲಿ ನೀರವ ಮೌನ ಆವರಿಸಿದೆ. ದೀಪಾವಳಿ ಅವರ ಪಾಲಿಗೆ ಕಾರ್ಮೋಡ ಕವಿದಂತಾಗಿದೆ. ದೀಪಾವಳಿಯ ಬೆಳಕು ಮೂಡದೇ ಕರಿ ಮೋಡದ ಛಾಯೆ ಕವಿದಿದೆ ಎಂದರೆ ತಪ್ಪಿಲ್ಲ. ಇಡಿ ತಾಂಡಾ ದುರ್ಘಟನೆ ಕುರಿತು ಆತಂಕಕ್ಕೀಡಾಗಿದೆ ಎಂದರೆ ತಪ್ಪಿಲ್ಲ. ಒಂದಡೆ ಭಯಾನಕ ದುರ್ಘಟನೆ ಕುರಿತು ನೋವುಂಟಾದರೆ, ಇನ್ನೊಂದಡೆ ಕೊಲೆಗೈದು ತಾಂಡಾ ಬಿಟ್ಟು ಓಡಿ ಹೋದ ಆರೋಪಿಗಳ ಬಗ್ಗೆ ಪೊಲೀಸರು ತಾಂಡಾಗೆ ಆಗಮಿಸಿ ಮಾಹಿತಿ ಸಂಗ್ರಹಿಸುವ ಕುರಿತು ತಾಂಡಾ ನಿವಾಸಿಗಳಲ್ಲಿ ಅಕ್ಷರಸಃ ನಿರಶನ ಮೂಡಿದೆ.

ಘಟನಾ ಸ್ಥಳಕ್ಕೆ ಎಸ್‍ಪಿ, ಅಧಿಕಾರಿಗಳ ಭೇಟಿ:

ಕೊಲೆ ನಡೆದ ಘಟನಾ ಸ್ಥಳಕ್ಕೆ ಶನಿವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಹಾಗೂ ಹೆಚ್ಚುವರಿ ಎಸ್ಪಿ ಧರಣೇಶ, ಡಿಎಸ್ಪಿ ಜಾವೀದ್ ಇನಾಂದಾರ ಹಾಗೂ ಸ್ಥಳೀಯ ಠಾಣೆಯ ಪಿಐ ಎಸ್.ಎಂ.ಪಾಟೀಲ್ ಭೇಟಿ ನೀರಿ ಪರಿಶೀಲಿಸಿದರು. ಅಲ್ಲದೆ ಇದೇ ವೇಳೆ ಘಟನೆ ಕುರಿತು ಪೊಲೀಸರಿಂದ ಎಸ್ಪಿ ಅವರು ಸಮರ್ಪಕ ಮಾಹಿತಿ ಪಡೆದುಕೊಂಡರು.

ಹತ್ಯೆಯಾದ ವ್ಯಕ್ತಿಯ ಬೈಕ್, ಮೊಬೈಲ್ ವಶಕ್ಕೆ

ಹತ್ಯೆಗೊಳಗಾದ ವ್ಯಕ್ತಿಯ ಬೈಕ್ ನಲ್ಲಿ ಸದಾ ಕೊಡಲಿ ಇರುತ್ತಿಂತೆ. ಕೊಲೆ ವೇಳೆ ತಿಪ್ಪಣ್ಣನ ಬೈಕ್ ನಲ್ಲಿ ಕೊಡ್ಲಿ ಇರುವುದು ಗಮನಿಸಬಹುದು. ಆ ಕೊಡ್ಲಿ ಸೇರಿದಂತೆ ಆತನ ಮೊಬೈಲ್ ಮತ್ತು ಬೈಕ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶನಿವಾರ ತಡ ರಾತ್ರಿವರೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ಯೆಯಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಂತರ ಸಂಬಂಧಿಕರಿಗೆ ಶವ ಸಂಸ್ಕಾರ ಮಾಡಲು ಒಪ್ಪಿಸಿದ್ದಾರೆ.

ತನಿಖೆ ಚುರುಕು
ಘಟನೆ ಕುರಿತು ಆರೋಪಿಗಳ ಬಂಧನಕ್ಕೆ ಪಿಐ ಎಸ್.ಎಂ.ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಕನ್ಯಾಕೋಳೂರ ವ್ಯಾಪ್ತಿಯ ಜಾಪಾ ನಾಯಾಕ ತಾಂಡಕ್ಕೆ ಭೇಟಿ ನೀಡಿ ಸಮರ್ಪಕ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೆ ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಈಗಾಗಲೇ ಆರೋಪಿಗಳ ಮಾಹಿತಿ ದೊರೆತಿದ್ದು, ಶೀಘ್ರದಲ್ಲಿ ಬಂಧಿಸುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ನನ್ನ ಪತಿ, ಈ ಆರೋಪಿಗಳ ದಂಧೆಯಾಗಿರುವ ಕಳ್ಳತನ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಕಾರಣಕ್ಕೆ, ಜೈಲಿನಿಂದ ಬಂದಿದ್ದ ಅವರು ಸೀದಾ ಮನೆಗೆ ಬಂದು ಗಲಾಟೆ ಮಾಡಿದ್ದರು, ಆಗ ತಾಂಡಾದ ಸಂಬಂಧಿಕರು ಎಲ್ಲರೂ ಸೇರಿ ಬುದ್ಧಿವಾದ ಹೇಳಿ ತಡೆದಿದ್ದರು. ನಂತರ ಅವರು ನಿನ್ನ ಮುಗಿಸೋದೆ ಬಿಡುವದಿಲ್ಲ ಎಂದು ಅಂದೇ ಬೆದರಿಕೆಯೊಡ್ಡಿದ್ದರು, ಹೀಗಾಗಿ ಆ ಇಬ್ಬರೇ ಕೊಲೆ ಮಾಡಿದ್ದು, ಅವರಿಗೆ ಸಹಕರಿಸಿದಾತ ಅಂದರೆ ಮನೆಯಲ್ಲಿದ್ದ ನಮ್ಮ‌ ಪತಿಯವರಿಗೆ ಕರೆ ಮಾಡಿ ಕರೆದವರು ಇವರೊಂದಿಗೆ ಕೈಜೋಡಿಸಿರುವದು ಕಂಡು ಬರುತ್ತಿದೆ.
– ಮಂಜುಳಾ ತಿಪ್ಪಣ್ಣ ರಾಠೋಡ. ಕೊಲೆಯಾದ ತಿಪ್ಪಣ್ಣನ ಪತ್ನಿ.

ಇದನ್ನೂ ಓದಿ: Kundapura: ಗುಲ್ವಾಡಿಯ ಮನೆಯಲ್ಲಿ ಗಾಂಜಾ ಮಾರಾಟ; ದಂಪತಿ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next