Advertisement

ಅರಣ್ಯ ನಾಶದಿಂದ ತಾಪಮಾನ ಹೆಚ್ಚಳ

10:57 AM Jun 06, 2019 | Naveen |

ಯಾದಗಿರಿ: ಜಾಗತಿಕವಾಗಿ ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದೇ ರೀತಿ ಮುಂದುವರೆದಲ್ಲಿ ಮುಂದೆ ಮಾನವ ಕುಲವೇ ನಾಶವಾಗುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ. ಸಾಲಮಂಟಪಿ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಸ್ತೆ ಅಗಲಿಕರಣ, ನಗರಿಕರಣದಿಂದಾಗಿ ಸಾಕಷ್ಟು ಮರಗಳು ನಾಶವಾಗುತ್ತಿವೆ. ಇದರಿಂದ ಮುಂದಿನ ಪೀಳಿಗೆಗೆ ಆಕ್ಸಿಜನ್‌ ಕೊರತೆ ಎದುರಾಗಬಹುದು. ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ವಿವಿಧ ಇಲಾಖೆ ಸಹಯೋಗದೊಂದಿಗೆ ದೇಶದಲ್ಲಿ 25 ಲಕ್ಷ ಗಿಡಗಳನ್ನು ನೆಟ್ಟು, ಪೋಷಣೆ ಮಾಡಲು ತೀರ್ಮಾನಿಸಿದೆ ಎಂದು ಹೇಳಿದರು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದು,್ದ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿ ಪೋಷಣೆ ಮಾಡುವ ಮೂಲಕ ಪರಿಸರ ಸಮತೋಲನ ಕಾಪಾಡಬೇಕು ಎಂದು ಒತ್ತಿ ಹೇಳಿದರು.

ಸಿವಿಲ್ ನ್ಯಾಯಾಧೀಶ ಲೋಕೇಶ ಧನಪಾಲ್ ಹವಲೆ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕಾನೂನಿನ ಕುರಿತು ಅರಿವು ಮೂಡಿಸುವ ಮತ್ತು ನೆರವು ನೀಡುವ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಪರಿಸರದ ರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸಲು ಮತ್ತು ಜಾಗೃತಗೊಳಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಹೇಳಿದರು.

Advertisement

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌. ರವಿಶಂಕರ ಮಾತನಾಡಿ, ಭೂಮಿಯ ವಾತಾವರಣ ಸಮತೋಲನವಾಗಿರಲು 33% ಅರಣ್ಯವಿರಬೇಕು. ಆದರೆ, ಮಾನವನ ಹಸ್ತಕ್ಷೇಪದಿಂದ ಅರಣ್ಯ ಕ್ಷಿಣಿಸುತ್ತಿದೆ. ಜಿಲ್ಲೆಯಲ್ಲಿ ಕೇವಲ 5% ಮಾತ್ರ ಅರಣ್ಯವಿದ್ದು, ಮಳೆಯ ಕೊರತೆ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಮನೆಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾದ ಎಸ್‌.ಪಿ. ನಾಡೇಕರ್‌ ಮಾತನಾಡಿ, ಮರಗಳ ಮಾರಣ ಹೋಮದಿಂದಾಗಿ ದೇಶದಲ್ಲಿ ಆಕ್ಸಿಜನ್‌ ಪ್ರಮಾಣ ಕಡಿಮೆಯಾಗಿ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚಾಗಿ ವಾಯು ಮಾಲಿನ್ಯ ಉಂಟಾಗುತ್ತಿದೆ. ರಾಷ್ಟ್ರೀಯ ಹಸಿರು ಪೀಠದ ಪ್ರಕಾರ ಒಂದು ಮರ ಕಡಿದರೆ ಹತ್ತು ಗಿಡಗಳನ್ನು ನೆಡಬೇಕು. ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ಗಿಡಗಳನ್ನು ದತ್ತು ಪಡೆದು ಬೆಳೆಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸಸಿ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮೀತಾ ಮಾಲಗಾಂವೆ, ವಲಯ ಅರಣ್ಯ ಅಧಿಕಾರಿ ಬಸವರಾಜ ಡಾಂಗೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ ಕುಲಕರ್ಣಿ, ಸರಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಗುರು ಬಬಿತಾ ಸಿ. ರೆಡ್ಡಿ, ದಯಾನಂದ ಕುಮಾರ, ಕೆ. ಸೋಮನಾಥ ಎಲ್ಲೇರಿ ಹಾಗೂ ಇತರೆ ಅರಣ್ಯ ಇಲಾಖೆ ಅಧಿಕಾರಿಗಳು, ಶಿಕ್ಷಕರು ಇದ್ದರು.

ವಿದ್ಯಾರ್ಥಿನಿಯರಾದ‌ ಕಾವೇರಿ, ಉಮಾಶ್ರೀ ಪ್ರಾರ್ಥಿಸಿದರು. ವಕೀಲರಾದ ಎಸ್‌.ಪಿ. ನಾಡೇಕರ್‌ ಸ್ವಾಗತಿಸಿದರು. ಶಿಕ್ಷಕಿ ರಾಧಾ ಎಮ್‌. ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next