ಕಲಬುರಗಿ: ಕೌಟುಂಬಿಕ ಕಲಹದಿಂದ ಗಂಡನಿಂದ ದೂರಾಗಿದ್ದ ಮಹಿಳೆಯನ್ನು ಅಪಹರಿಸಿ ಪೆಟ್ರೋಲ್ ಸುರಿದು ಗುರುತು ಸಿಗದ ಹಾಗೆ ಭೀಕರವಾಗಿ ಹತ್ಯೆಗೈದ ಪ್ರಕರಣವನ್ನು ಇದೀಗ ಪೊಲೀಸರು ಬೇಧಿಸಿದ್ದಾರೆ.
ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತಾಲಯದ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಇಟಗಾ ಗ್ರಾಮದ ಸೀಮಾಂತರದ ತೊಗರಿ ಹೊಲದಲ್ಲಿ ದೀಪಾವಳಿ ಹಬ್ಬದ ಬೆಳಗಿಸುವ ದಿನದಂದು ಪೆಟ್ರೋಲ್ ಸುರಿದು ಸುಮಾರು 30 ವಯಸ್ಸಿನ ಮಹಿಳೆಯನ್ನು ಪೆಟ್ರೋಲ್ ಸುರಿದು ಕೊಲೆ ಮಾಡಿ ಸಾಕ್ಷಿ ಸಿಗದ ದುಷ್ಕೃತ್ಯ ಎಸಗಲಾಗಿತ್ತು. ಆದರೆ ಈ ಪ್ರಕರಣ ಬೇಧಿಸುವುದು ಒಂದು ಸವಾಲಾಗಿತ್ತು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ತನಿಖೆಗೈದು ಅದರಲ್ಲೂ ವೈಜ್ಞಾನಿಕವಾಗಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಮಹಿಳೆಯ ಶವವನ್ನು ಪತ್ತೆ ಮಾಡಿ ತದನಂತರ ಕೊಲೆ ಮಾಡಿರುವ ಆರೋಪಿಗಳನ್ನು ನೆರೆಯ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಿ ಕರೆ ತರಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
30 ವಯಸ್ಸಿನ ಜ್ಯೋತಿ ಎಂಬಾಕೆಯ ಕೊಲೆಯಾಗಿತ್ತು. 2014 ರಲ್ಲಿ ಜ್ಯೋತಿ ಹಾಗೂ ಖಣದಾಳದ ಮಂಜುನಾಥ ಎನ್ನುವರ ಜತೆ ಮದುವೆಯಾಗಿತ್ತು. ನಾಲ್ಕೈದು ವರ್ಷಗಳ ನಂತರ ಕೌಟುಂಬಿಕ ಕಲಹ ಶುರುವಾಗಿ ಆಗಾಗ್ಗೆ ಕಲಹಗಳು ನಡೆದಿವೆ. ಜ್ಯೋತಿ ಮೇಲೆ ಹಲ್ಲೆ ಪ್ರಕರಣಗಳು ಸಹ ನಡೆದಿವೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಇತ್ತೀಚೆಗೆ ಜ್ಯೋತಿ ಕುಟುಂಬ ನ್ಯಾಯಾಲಯ ಮೋರೆ ಹೋಗಿ ತಿಂಗಳಿಗೆ 8000 ರೂ ಜೀವನಾಂಶ ಪಡೆಯುವ ಅವಕಾಶದ ಆದೇಶ ಪಡೆದಳು. ಇದರಿಂದ ಪತಿ ಮಂಜುನಾಥ ಕೊಲೆಗೆ ಸಂಚು ರೂಪಿಸಿದ ಎನ್ನಲಾಗಿದೆ. ಕಳೆದ ಅಕ್ಟೋಬರ್ 31 ರಂದು ಜ್ಯೋತಿ ಇವಳ ಪತಿ ಖಣದಾಳದ ಮಂಜುನಾಥ ವೀರಣ್ಣ ಚಿನಮಳ್ಳಿ (41), ಮೈದುನ ಪ್ರಶಾಂತ ವೀರಣ್ಣ ಚಿನಮಳ್ಳಿ (35) ಹಾಗೂ ವಿಜಯಕುಮಾರ್ ಮಲ್ಲೇಶಪ್ಪ ಬೆಣ್ಣೂರು (27) ಕೂಡಿಕೊಂಡು ಕಾರಿನಲ್ಲಿ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯಿಂದ ಅಪಹರಿಸಿಕೊಂಡು ಕಾರಿನಲ್ಲೇ ಕತ್ತು ಹಿಸುಕಿ ಕೊಲೆಗೈದು, ಇಟಗಾ ಗ್ರಾಮದ ಹತ್ತಿರ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷಿ ನಾಶಪಡಿಸಲು ಮುಂದಾಗಿದ್ದಾರೆ ಎಂದು ಆಯುಕ್ತರು ವಿವರಣೆ ನೀಡಿದರು.
ಬಂಧಿತ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ. ಕ್ಲಿಷ್ಟಕರವಾಗಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿರುವುದು ಪ್ರಶಂಸನೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು.